ಕೊಪ್ಪಳ: ಸದಸ್ಯರ ಬಲದಲ್ಲಿ ಕಾಂಗ್ರೆಸ್‌ಗಿಂತಲೂ ಹೆಚ್ಚು ಸ್ಥಾನಗಳನ್ನು ಹೊಂದಿದ್ದರೂ ಬಿಜೆಪಿಗೆ ಪಕ್ಷೇತರ ಸದಸ್ಯರ ಬೆಂಬಲ ಸಿಗಲಿಲ್ಲ. ಹೀಗಾಗಿ ಇಲ್ಲಿನ ಭಾಗ್ಯನಗರದ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ’ಭಾಗ್ಯ’ ಕಾಂಗ್ರೆಸ್ ಪಾಲಾಯಿತು.
11ನೇ ವಾರ್ಡ್ ಸದಸ್ಯ ತುಕಾರಾಮಪ್ಪ ಗಡಾದ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಎರಡನೇ ವಾರ್ಡ್‌ನ ಹೊನ್ನೂರಸಾಬ್ ಬೈರಾಪೂರ ಆಯ್ಕೆಯಾದರು. ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಒಟ್ಟು 19 ಸದಸ್ಯರನ್ನು ಹೊಂದಿರುವ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯ 9 ಹಾಗೂ ಕಾಂಗ್ರೆಸ್‌ನ 8 ಜನ ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರರು ಇದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಪಕ್ಷದ ಎಂಟು, ಪಕ್ಷೇತರರ ಇಬ್ಬರ ಮತಗಳು ಲಭಿಸಿದವು. ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಕೆ. ರಾಜಶೇಖರ ಹಿಟ್ನಾಳ ಕೂಡ ಮತ ಚಲಾಯಿಸಿದರು. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲಾ 12 ಮತಗಳು ಬಂದು ಗೆಲುವಿನ ಕುದುರೆ ಏರಿದರು.
ತುಕಾರಾಮಪ್ಪ ಹಾಗೂ ಹೊನ್ನೂರಸಾಬ್ ಬೈರಾಪುರ ಇಬ್ಬರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಕೊನೆಗೂ ಶಾಸಕರು ಮನವೊಲಿಸಿದ್ದರಿಂದ ಹೊನ್ನೂರಸಾಬ್ ಉಪಾಧ್ಯಕ್ಷರಾಗಲು ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ವಾಸುದೇವ್ ಮೇಘರಾಜ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಶುರಾಮ್ ನಾಯಕ ತಲಾ ಒಂಬತ್ತು ಮತಗಳನ್ನು ಪಡೆದುಕೊಂಡರು.
ಭಾಗ್ಯನಗರಕ್ಕೆ 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿದ್ದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಎರಡು ವರ್ಷ ಎಂಟು ತಿಂಗಳ ಬಳಿಕ ಸದಸ್ಯರಿಗೆ ಅಧಿಕಾರದ ಭಾಗ್ಯ ಲಭಿಸಿತು. ಇನ್ನು 30 ತಿಂಗಳು ಅಧಿಕಾರವಧಿ ಬಾಕಿ ಉಳಿದಿದೆ.
Highlights - null
Quote - ನೀರು ನೈರ್ಮಲ್ಯ ಆರೋಗ್ಯ ಕ್ಷೇತ್ರ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಶಾಸಕ ಸಂಸದರ ನೆರವು ಪಡೆಯಲಾಗುತ್ತದೆ. ಹೊನ್ನೂರಸಾಬ್ ಬೈರಾಪೂರ ಉಪಾಧ್ಯಕ್ಷ
Quote - ಕುಡಿಯುವ ನೀರು ಹಾಗೂ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಶಾಸಕರು ಹಾಗೂ ಸಂಸದರ ನೆರವು ಪಡೆದು ನಿರಾಶ್ರಿತರಿಗೆ ಮನೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತುಕಾರಾಮಪ್ಪ ಗಡಾದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.