ಗುರುವಾರ , ಮೇ 26, 2022
23 °C
ಎಂಸಿಎಲ್‌ ಕಂಪನಿ ಪ್ರತಿನಿಧಿ ಅಶೋಕ ಮಿರೇಕೋರ ಹೇಳಿಕೆ

ಜೈವಿಕ ಇಂಧನಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಮಹತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಭವಿಷ್ಯದಲ್ಲಿ ಸಾಂಪ್ರದಾಯಿಕ ಇಂಧನಕ್ಕೆ ಪರ್ಯಾಯವಾಗಿ ಜೈವಿಕ ಇಂಧನಕ್ಕೆ ಹೆಚ್ಚಿನ ಮಹತ್ವ ದೊರೆಯಲಿದ್ದು, ಜೈವಿಕ ಸಸ್ಯಗಳನ್ನು ಬೆಳೆಯುವ ರೈತರಿಗೆ ನಿಶ್ಚಿತ ಆದಾಯ ದೊರೆಯಲಿದೆ ಎಂದು ಜೈವಿಕ ಇಂಧನ ಉತ್ಪಾದಕ ಎಂಸಿಎಲ್‌ ಕಂಪನಿಯ ಸೋಲಾಪುರ ಪ್ರತಿನಿಧಿ ಅಶೋಕ ಮಿರೇಕೋರ ಹೇಳಿದರು.

ರೈತರ ಸಹಭಾಗಿತ್ವದಲ್ಲಿ ಜೈವಿಕ ಇಂಧನ ಉತ್ಪಾದನೆ ಮತ್ತು ಸಾವಯವ ಕೃಷಿಗೆ ಸಂಬಂಧಿಸಿದಂತೆ ಎಂಸಿಎಲ್‌ ಕಂಪೆನಿ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿಯಲ್ಲಿ ಸಾವಯವ ಕೃಷಿಯೊಂದಿಗೆ ಜೈವಿಕ ಇಂಧನ ಸಸ್ಯಗಳನ್ನು ಬೆಳೆಯುವುದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಪ್ರಯೋಜನ ದೊರೆಯಲಿದೆ ಎಂದರು.

ನೇಪಿಯರ್ ಹುಲ್ಲು ಬೆಳೆಸು ವಿಷಯದಲ್ಲಿ ರೈತರಿಗೆ ಉತ್ತೇಜನ ನೀಡಲು ಎಂಎಲ್‌ಸಿ ಕಂಪೆನಿ ಸಹಕಾರ ತತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಮುಂಬರುವ ದಿನಗಳಲ್ಲಿ ಜೈವಿಕ ಇಂಧನದಲ್ಲಿಯೇ ಚಲಿಸುವ ಆಧುನಿಕ ತಂತ್ರಜ್ಞಾನ ಹೊಂದಿದ ವಾಹನ ಎಂಜಿನ್‌ಗಳನ್ನು ತಯಾರಿಸ ಲಾಗುತ್ತಿದ್ದು ಜೈವಿಕ ಇಂಧನ ಮತ್ತು ಅದಕ್ಕೆ ಪೂರಕ ವಾದ ಕೃಷಿಯಲ್ಲಿ ತೊಡಗು ವವರಿಗೆ ಅವಕಾಶಗಳು ಲಭ್ಯವಾಗಲಿವೆ ಎಂದರು.

ಹುನಗುಂದ ಎಂ.ಜೆ.ಗೌಡರ್ ಮಾತನಾಡಿ, ಪ್ರತಿ ಎಕರೆಯಲ್ಲಿ ನಾಟಿ ಮಾಡಿದ ನೇಪಿಯರ್‌ ಹುಲ್ಲು ವರ್ಷದಲ್ಲಿ ನಾಲ್ಕು ಬಾರಿ ಕಟಾವು ಆಗುತ್ತಿದ್ದು ಕನಿಷ್ಟ 200 ಟನ್‌ ಬೆಳೆಯಬಹುದು. ಪಂಢರಾಪುರದ ರೈತರಾದ ಭೀಮರಾವ್ ಕೊಂಡುಬೈರಿ ಎಂಬುವವರು 700 ಟನ್‌ ಬೆಳೆಯುವ ಮೂಲಕ 'ನೇಪಿಯರ್‌ ಮ್ಯಾನ್' ಎಂದೆ ಗುರುತಿಸಿಕೊಂಡಿದ್ದಾರೆ. ಸುಲಭ ಬೇಸಾಯ ಮತ್ತು ನಿಶ್ಚಿತ ಆದಾಯ ತರುವ ನೇಪಿಯರ್ ಹುಲ್ಲನ್ನು ಬೆಳೆದು ಜೈವಿಕ ಇಂಧನಕ್ಕೆ ಮಾರಾಟ ಮಾಡುವುದರ ಜೊತೆಗೆ ರೈತರು ಹೈನುಗಾರಿಕೆಯಲ್ಲಿಯೂ ತೊಡಗಬಹುದಾಗಿದೆ ಎಂದರು.

ಎಂಸಿಎಲ್‌ ಕಂಪನಿಯ ಪ್ರತಿನಿಧಿ ಭೀಮರಾವ ಕೊಂಡುಬೈರಿ ಮಾತನಾಡಿ, ನಮ್ಮ ದೇಶ ಶೇ 80ರಷ್ಟು ಕಚ್ಚಾ ತೈಲವನ್ನು ಒಪೆಕ್‌ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಅದಕ್ಕೆ ಪರ್ಯಾಯವಾಗಿ ದೇಶದಲ್ಲಿಯೇ ಜೈವಿಕ ಇಂಧನ ಉತ್ಪಾದನೆ ಹೆಚ್ಚಿದರೆ ಅದರಲ್ಲಿಯೂ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಂಸಿಎಲ್‌ ಕಂಪೆನಿಯ ಎಂಪಿಒ ಶೇಖರಗೌಡ ಮಾಲಿಪಾಟೀಲ, ನವಲಗುಂದದ ಎಸ್‌.ಕೆ.ಗೌಡರ್, ಸಂತೋಷ ಪಾಟೀಲ ಇತರರು ಮಾತನಾಡಿದರು. ಶಿವಶಂಕರಗೌಡ ಪಾಟೀಲ, ವಿಶ್ವನಾಥ ಕನ್ನೂರು ಇದ್ದರು. ಶಿಕ್ಷಕ ಜೀವನಸಾಬ ವಾಲಿಕಾರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.