ಕೊಪ್ಪಳ: ’ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದೂ ಗ್ಯಾರಂಟಿ ಯೋಜನೆಗಳು ಜಾರಿಗೊಂಡ ಬಳಿಕ ನಮಗೆ ಕೆಲಸವೇ ಇಲ್ಲದಂತೆ ಆಗುತ್ತದೆ ಎನ್ನುವ ಚಿಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಕಾಡುತ್ತಿದೆ. ಆದ್ದರಿಂದ ನಮ್ಮ ಸರ್ಕಾರವನ್ನು ಕಂಡರೆ ಅವರಿಗೆ ಹೊಟ್ಟೆ ಉರಿ’ ಎಂದು ಹಿಂದುಳಿದ ವರ್ಗಗಳ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಗ್ಯಾರಂಟಿಯ ಎಲ್ಲ ಯೋಜನೆಗಳು ಜಾರಿಯಾದ ಬಳಿಕ ವಿಳಾಸವೇ ಇರುವುದಿಲ್ಲ ಎನ್ನುವ ಭಯವೂ ಅವರಲ್ಲಿದೆ. ಸ್ಥಿರವಾಗಿರುವ ಸರ್ಕಾರವನ್ನು ಬೀಳಿಸಲು ಸಿಂಗಪುರ, ಮಲೇಷ್ಯಾ ಹೀಗೆ ಯಾವುದೇ ದೇಶದಲ್ಲಿದ್ದುಕೊಂಡು ಯೋಜನೆ ರೂಪಿಸಿದರೂ ಅದು ಸಾಧ್ಯವಾಗುವುದಿಲ್ಲ’ ಎಂದರು.
‘ಅಶ್ವತ್ಥನಾರಾಯಣ, ಆರ್. ಅಶೋಕ ಸೇರಿದಂತೆ ಬಿಜೆಪಿಯ ಕೆಲ ಶಾಸಕರಿಗೆ ನಮ್ಮ ಯೋಜನೆಗಳಿಗೆ ಸಿಗುತ್ತಿರುವ ಯಶಸ್ಸು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯೋಜನೆಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.
‘ಕೊಪ್ಪಳ ಜಿಲ್ಲೆಗೆ ಮಂಜೂರಾಗಿರುವ ಜಾನಪದ ಲೋಕ ಆರಂಭಿಸಲು ಐದು ಎಕರೆ ಜಾಗ ಬೇಕಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ಜೊತೆ ಚರ್ಚಿಸುವೆ. ಉಪಮುಖ್ಯಮಂತ್ರಿಯನ್ನು ಜಿಲ್ಲೆಗೆ ಕರೆಯಿಸಿ ನವಲಿ ಜಲಾಶಯಗಳು ಮತ್ತು ಅಂಜನಾದ್ರಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಜನೆ ರೂಪಿಸಲಾಗುವುದು. ನಾವೇ ನಿಜವಾದ ಹನುಮನ ಭಕ್ತರು. ನಮ್ಮಿಂದಲೇ ಅಂಜನಾದ್ರಿಯ ಅಭಿವೃದ್ಧಿಯಾಗಲಿದೆ’ ಎಂದು ಹೇಳಿದರು.
‘ಹಿಂದೆ ಉಸ್ತುವಾರಿ ಸಚಿವರಾಗಿದ್ದ ಆನಂದ್ ಸಿಂಗ್ ಮೂರು ತಿಂಗಳಿಗೊಮ್ಮೆ ಜಿಲ್ಲೆಗೆ ಬರುತ್ತಿದ್ದರು. ನನ್ನದು ಅಂಥ ಜಾಯಮಾನವಲ್ಲ. ಒಂದೇ ತಿಂಗಳಲ್ಲಿ ಐದು ಬಾರಿ ಬಂದಿದ್ದೇನೆ. ಸತತವಾಗಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದರು.
ಪ್ರತಿ ತಿಂಗಳು ಜನಸಂಪರ್ಕ ಸಭೆ
ಕೊಪ್ಪಳ: ಆಗಸ್ಟ್‌ನಿಂದ ಪ್ರತಿ ತಿಂಗಳಲ್ಲಿ ಒಂದು ದಿನ ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆಗಾಗಿ ಜಿಲ್ಲಾಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಮುಂಬರುವ ದಿನಗಳಲ್ಲಿ ಪ್ರತಿ ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.