ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಮುಗಿದರೂ ಸಿಗದ ವಿಶ್ರಾಂತಿ

ಕಾರ್ಯಕರ್ತರು, ಪಕ್ಷದ ಮುಖಂಡರ ಜೊತೆ ಫಲಿತಾಂಶದ ಚರ್ಚೆ
Published 8 ಮೇ 2024, 16:40 IST
Last Updated 8 ಮೇ 2024, 16:40 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಗಲಿರುಳು ಓಡಾಡಿ ಮತದಾರರ ಮನ ಗೆಲ್ಲಲು ಕಸರತ್ತು ಮಾಡಿರುವ ಅಭ್ಯರ್ಥಿಗಳಿಗೆ ಮತದಾನ ಮುಗಿದರೂ ಸಂಪೂರ್ಣ ವಿಶ್ರಾಂತಿ ಸಿಗಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಸ್ವಲ್ಪ ಹೊತ್ತು ಕುಟುಂಬದವರ ಜೊತೆ ಸಮಯ ಕಳೆದರು. ಕಾರ್ಯಕರ್ತರ ಜೊತೆಗೂ ಚರ್ಚಿಸಿದರು. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಕಾರ್ಯಕರ್ತರ ಭೇಟಿ, ಪಕ್ಷದ ಸಭೆಯಲ್ಲಿ  ಪಾಲ್ಗೊಂಡರು.

ಕೊಪ್ಪಳದ ಕಾಂಗ್ರೆಸ್‌ ಕಚೇರಿಯಲ್ಲಿ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪಕ್ಷದ ಕಾರ್ಯಕರ್ತರ ಜೊತೆ ಚರ್ಚಿಸಿದರು
ಕೊಪ್ಪಳದ ಕಾಂಗ್ರೆಸ್‌ ಕಚೇರಿಯಲ್ಲಿ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪಕ್ಷದ ಕಾರ್ಯಕರ್ತರ ಜೊತೆ ಚರ್ಚಿಸಿದರು

ಉದ್ಯಮಿಯಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರಿಗೆ ಟಿಕೆಟ್‌ ಸಿಗುವುದು ಖಾತ್ರಿಯಾಗಿದ್ದರಿಂದ ಅಧಿಕೃತ ಘೋಷಣೆಯಾಗುವ ಮೊದಲಿನಿಂದಲೂ ಪ್ರಚಾರ ನಡೆಸಿದ್ದರು. ಮತದಾನ ಪೂರ್ವ ಸಮಯದಲ್ಲಿ ಬೆಳಗಿನ ಜಾವ ಆರು ಗಂಟೆಹೊತ್ತಿಗೆ ಮನೆಯಿಂದ ಹೊರಟರೆ ಮಧ್ಯರಾತ್ರಿಯೇ ಮನೆಗೆ ಬರುತ್ತಿದ್ದರು. ಸೂರ್ಯ ಉದಯಿಸುವ ಮೊದಲೇ ಮತ್ತೆ ಪ್ರಚಾರ ಕಾರ್ಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದರು. ಮಂಗಳವಾರ ಮತದಾನ ಮುಗಿದ ಬಳಿಕ ಮರುದಿನ ಬೆಳಿಗ್ಗೆ ಎಂಟು ಗಂಟೆ ತನಕ ನಿದ್ದೆ ಮಾಡಿದ ರಾಜಶೇಖರ ಹಿಟ್ನಾಳ ಹಿಂದಿನ ದಿನ ತಡರಾತ್ರಿಯ ತನಕ ಪತ್ನಿ ಹಾಗೂ ಮಕ್ಕಳ ಜೊತೆ ಸಮಯ ಕಳೆದರು. ತಮ್ಮ ಕಾರು ಚಾಲಕನಿಗೂ ರಜೆ ನೀಡಿ ತಾವೇ ಕಾರು ಚಲಾಯಿಸಿಕೊಂಡು ಪಕ್ಷದ ಕಚೇರಿಗೆ ಬಂದು ಅವರೊಂದಿಗೆ ಫಲಿತಾಂಶದ ಲೆಕ್ಕಾಚಾರ ಹಾಕಿದರು. ಮತದಾನ ಮುಗಿಯುವ ತನಕ ನಿತ್ಯ ನಾಲ್ಕೈದು ತಾಸು ಮಾತ್ರ ನಿದ್ದೆ ಮಾಡುತ್ತಿದ್ದ ಹಿಟ್ನಾಳ ಬುಧವಾರ ಸಮೃದ್ಧವಾಗಿ ನಿದ್ದೆ ಮಾಡಿಬಂದ ತಾಜಾತನ ಅವರ ಕಣ್ಣುಗಳಲ್ಲಿ ಕಾಣುತ್ತಿತ್ತು. ‘ನಾನು ಏನಾದರೂ ಕೊಡಿಸಬೇಕು ಎಲ್ಲಿಗಾದರೂ ಹೋಗಬೇಕು ಎಂದು ಕುಟುಂಬ ಸದಸ್ಯರು ಬಯಸುವುದಿಲ್ಲ. ಅವರಿಗೆ ನಾನು ಮನೆಯಲ್ಲಿದ್ದರೆ ಅಷ್ಟೇ ಸಾಕು. ಚುನಾವಣೆಯ ಓಡಾಟದಲ್ಲಿ ಪತ್ನಿ ಹಾಗೂ ಮಕ್ಕಳಿಗೆ ಸಮಯ ಕೊಡಲು ಸಾಧ್ಯವೇ ಆಗಿರಲಿಲ್ಲ. ನನ್ನ ಉದ್ಯಮದ ವ್ಯವಹಾರ ಏನಾಗಿದೆ ಎನ್ನುವ ಮಾಹಿತಿಯೂ ಇಲ್ಲ. ಒಂದು ತಿಂಗಳ ಅವಧಿಯಲ್ಲಿ ಅದರತ್ತಲೂ ಗಮನ ಹರಿಸಬೇಕು. ನಾಲ್ಕೈದು ದಿನ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇನೆ’ ಎಂದು ರಾಜಶೇಖರ ಹಿಟ್ನಾಳ ತಿಳಿಸಿದರು.

ವೃತ್ತಿಯಲ್ಲಿ ವೈದ್ಯರಾಗಿರುವ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್‌ ಚುನಾವಣಾ ಸಮಯದಲ್ಲಿ ತಮ್ಮ ಆಸ್ಪತ್ರೆ ಚಟುವಟಿಕೆಯಲ್ಲಿ ಪೂರ್ಣವಾಗಿ ತೊಡಗಿಕೊಂಡಿಲ್ಲ. ವಿಶೇಷವೆಂದರೆ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕವೂ ಅವರು 15 ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.  ಬುಧವಾರ ಅಮವಾಸ್ಯೆಯಾಗಿದ್ದರಿಂದ ಎಲ್ಲಿಗೂ ಹೋಗಲಿಲ್ಲ. ಬೆಳಿಗ್ಗೆ ದಿನಪತ್ರಿಕೆಗಳನ್ನು ಓದಿ ಕೊಪ್ಪಳದ ಮನೆಗೆ ಬರುತ್ತಿದ್ದ ಕಾರ್ಯಕರ್ತರು ನೀಡಿದ ಸನ್ಮಾನ ಸ್ವೀಕರಿಸಿ ಅವರೊಂದಿಗೆ ಫಲಿತಾಂಶದ ಬಗ್ಗೆ ಚರ್ಚಿಸಿದರು. ಬಳಿಕ ಸಂಜೆ ಪಕ್ಷದ ಕಚೇರಿಯಲ್ಲಿ ನಡೆದ ’ಚಹಾಪೇ ಚರ್ಚಾ’ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಿಗೆ ಧನ್ಯವಾದ ಹೇಳಿದರು. ಅಭ್ಯರ್ಥಿಯಾಗಿ ಘೋಷಣೆಯಾದಾಗಿನಿಂದ ಮಧ್ಯರಾತ್ರಿ 12 ಅಥವಾ 1 ಗಂಟೆ ಸುಮಾರಿಗೆ ಮಲಗುತ್ತಿದ್ದ ಬಸವರಾಜ ಸೂರ್ಯೋದಯಕ್ಕೂ ಮೊದಲೇ ಎದ್ದು ಪ್ರಚಾರ ಕಾರ್ಯ ಕಾರ್ಯಕರ್ತರ ಜೊತೆ ಚರ್ಚೆ ಕಾರ್ಯದಲ್ಲಿ ತೊಡಗುತ್ತಿದ್ದರು. ಪ್ರಚಾರದ ಒತ್ತಡದ ನಡುವೆ ಅನೇಕ ಬಾರಿ ಕಾರಿನಲ್ಲಿಯೇ ನಿದ್ದೆ ಮಾಡುತ್ತಿದ್ದ ಅವರು ಮತದಾನ ಮುಗಿದ ರಾತ್ರಿ ಸಂಪೂರ್ಣ ನಿದ್ದೆ ಮಾಡಿ ಆಯಾಸ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ‘ಅಮವಾಸ್ಯೆ ಇರುವ ಕಾರಣ ಎಲ್ಲಿಯೂ ಹೋಗಿಲ್ಲ. ಎರಡ್ಮೂರು ದಿನ ಬಿಟ್ಟು ದಿನಕ್ಕೊಂದು ಊರಿಗೆ ಹೋಗುವ ವಿಚಾರವಿದೆ. ಆಸ್ಪತ್ರೆಯ ಕೆಲಸ ಶಸ್ತ್ರಚಿಕಿತ್ಸೆ ಹೀಗೆ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಳ್ಳಬೇಕಿದ್ದ ಕಾರಣ ಬೆಳಿಗ್ಗೆ ಉಪಾಹಾರ ಸೇವಿಸುತ್ತಿರಲಿಲ್ಲ. ಅಭ್ಯರ್ಥಿಯಾದ ಬಳಿಕ ಕಾರ್ಯಕರ್ತರು ಹಾಗೂ ಮುಖಂಡರ ಮನೆಗೆ ಹೋದಾಗ ಉಪಾಹಾರ ಸೇವನೆ ಅನಿವಾರ್ಯವಾಗುತ್ತಿತ್ತು. ಮತದಾನದ ಬಳಿಕವಷ್ಟೇ ಚೆನ್ನಾಗಿ ನಿದ್ದೆ ಮಾಡಿದೆ’ ಎಂದು ಬಸವರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT