ಮಂಗಳವಾರ, ಸೆಪ್ಟೆಂಬರ್ 28, 2021
22 °C
ನರಗುಂದ-– ಸಿಂಧನೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ

ಕೊಪ್ಪಳ: ಹೆದ್ದಾರಿ ಮೇಲ್ದರ್ಜೆಗೆ ಕೇಂದ್ರ ಒಪ್ಪಿಗೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನರಗುಂದ-ಸಿಂಧನೂರು ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಸಮೀಕ್ಷೆಗೆ ಸೂಚಿಸಿದೆ.

ನರಗುಂದ, ರೋಣ, ಗಜೇಂದ್ರಗಡ, ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕಿನ ವಿವಿಧ ಗ್ರಾಮಗಳನ್ನು ಹಾಯ್ದು ಹೋಗುವ ಇದು ಸಿಂಧನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಸೇರಲಿದೆ.

ರಸ್ತೆ ದುಃಸ್ಥಿತಿ: ಇದು ರಾಜ್ಯ ಹೆದ್ದಾರಿಯಾದರೂ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಜಿಲ್ಲಾ ಸಂಪರ್ಕ ರಸ್ತೆಗಳಿಗಿಂತ ಕಡೆಯಾಗಿದೆ. ಯಲಬುರ್ಗಾದಿಂದ ರೋಣದವರೆಗೆ ರಸ್ತೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಇದರಿಂದ ಒಳಭಾಗದ ಜನರಿಗೆ ಸಂಚಾರ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. 

ಗದಗ ಜಿಲ್ಲೆಯ ನರಗುಂದ, ಗಜೇಂದ್ರಗಡ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ತಾವರಗೇರಾ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರನ್ನು ಸಂಪರ್ಕಿಸುವ ಎನ್.ಎಚ್-150 ಎ 141 ಕಿ,ಮೀ.ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಮೇಲ್ದರ್ಜೆಗೆ ಏರಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ.

ಐತಿಹಾಸಿಕ ಮಹತ್ವದ ರಸ್ತೆ: ಈ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ರಾಜ್ಯದ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಾದ ಬದಾಮಿ, ಐಹೊಳೆ, ಪಟ್ಟದಕಲ್ಲು, ಸವದತ್ತಿ ಯಲ್ಲಮ್ಮ, ಬಾದಾಮಿ ಬನಶಂಕರಿ, ಲಕ್ಕುಂಡಿ ಹಾಗೂ ಹಂಪಿ ಸಂಪರ್ಕಿಸಲು ಪ್ರವಾಸಿಗರಿಗೆ ಅನುಕೂಲವಾಗುತ್ತದೆ.

ಬಹುತೇಕ ಗ್ರಾಮೀಣ ಭಾಗಗಳನ್ನೇ ಸಂಪರ್ಕಿಸುವ ಈ ರಸ್ತೆ ಅನೇಕ ವರ್ಷಗಳ ನಿರ್ಲಕ್ಷ್ಯದಿಂದ ಹಾಳಾಗಿದೆ. ಮಳೆಗಾಲದಲ್ಲಿಯಂತೂ ಗ್ರಾಮೀಣ ರಸ್ತೆಯ ಹಾಗೆ ಗೋಚರಿಸುತ್ತಿದೆ. ಇಲ್ಲಿನ ಸಂಚಾರ ಸಮಸ್ಯೆಯಿಂದ ರೋಸಿ ಹೋಗಿದ್ದ ಜನರು ಮೇಲಿಂದ ಮೇಲೆ ಪ್ರತಿಭಟನೆ ನಡೆಸಿದ್ದಾರಲ್ಲದೆ, ಸಂಬಂಧಿಸಿದವರ ಗಮನಕ್ಕೂ ತಂದಿದ್ದಾರೆ.

'ರಸ್ತೆಗಳನ್ನು ರೂಪಿಸುವಲ್ಲಿ ಅಪಾರ ಜ್ಞಾನ ಮತ್ತು ಕೌಶಲ ಹೊಂದಿರುವ ಸಚಿವ ನಿತಿನ್‌ ಗಡ್ಕರಿ ಅವರು ನಮ್ಮ ಮನವಿಗೆ ಸ್ಪಂದನೆ ನೀಡಿದ್ದಾರಲ್ಲದೆ, 141 ಕಿ.ಮೀ ಉದ್ದದ ರಸ್ತೆಯನ್ನು ಸಂಪೂರ್ಣ ಸಮೀಕ್ಷೆ ಮಾಡಲು ರಾಷ್ಟ್ರೀಯ ಹೆದ್ದಾರಿ ದಕ್ಷಿಣ ವಲಯಕ್ಕೆ ಸೂಚನೆ ನೀಡಿದ್ದಾರೆ' ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ಈ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರೆ ಹಿಂದುಳಿದ ಭಾಗದ ಆರ್ಥಿಕ ಕ್ಷೇತ್ರಕ್ಕೂ ಅನುಕೂಲವಾಗಲಿದೆ. ಈ ಭಾಗದ ರಸ್ತೆಯ ಸಮೀಪದ ಗ್ರಾಮ ಮತ್ತು ಪಟ್ಟಣಗಳು ಕೃಷಿ, ಖನಿಜ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಔದ್ಯೋಗಿಕ ವಲಯಗಳನ್ನು ಹೊಂದಿದ್ದು, ಅನುಕೂಲವಾಗಲಿದೆ ಎಂದು ಜನರ ಅಭಿಮತವಾಗಿದೆ.

ನನೆಗುದಿಗೆ ಬಿದ್ದ ರಾಜ್ಯ ಹೆದ್ದಾರಿ: ಶಿಗ್ಗಾವಿ-ಕಲ್ಮಲಾ ರಾಜ್ಯ ಹೆದ್ದಾರಿ ಮುಂಡರಗಿ ಮೂಲಕ ಕೊಪ್ಪಳ ತಾಲ್ಲೂಕು ಪ್ರವೇಶಿಸಿ ಕುಷ್ಟಗಿ ಮೂಲಕ ಸಿಂಧನೂರು, ಮಾನ್ವಿ ತಾಲ್ಲೂಕಿನ ಕಲ್ಮಾಲಾ ಸಂಪರ್ಕಿಸುವ ರಾಜ್ಯ ಹೆದ್ದಾರಿಗೆ ಹಿಂದಿನ ಸರ್ಕಾರಗಳು ಒಪ್ಪಿಗೆ ನೀಡಿ ದಶಕ ಕಳೆಯುತ್ತಾ ಬಂದರೂ ರಸ್ತೆ ಸುಧಾರಣೆಗೆ ಮುಂದಾಗದೇ ಇರುವ ಬಗ್ಗೆ ಈ ಭಾಗದ ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಗಂಗಾವತಿ, ಗಿಣಗೇರಾ ಭಾಗದ ಮತ್ತು ಅಳವಂಡಿ ಕೊಪ್ಪಳ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.