ಮಂಗಳವಾರ, ಜೂನ್ 15, 2021
24 °C
ಸೀಸನ್‌ ಆರಂಭದಲ್ಲಿಯೇ ವ್ಯಾಪಾರಿಗಳಿಗೆ ಹೊಡೆತ

ಕೊರೊನಾ ಸುಳಿಗೆ ಸಿಲುಕಿದ ಬದುಕು

ಮಂಜುನಾಥ ಅಂಗಡಿ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ಮದುವೆ, ಮುಂಜಿ ಇನ್ನಿತರ ಸಮಾರಂಭಗಳ ಅಂದ ಚೆಂದ ಹೆಚ್ಚಿಸುತ್ತಿದ್ದ ಶಾಮಿಯಾನ ಉದ್ಯಮ ಕೋವಿಡ್‌ಗೆ ತತ್ತರಿಸಿ ಹೋಗಿದೆ. ಇದನ್ನೇ ನೆಚ್ಚಿಕೊಂಡಿದ್ದ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ.

ದುಡಿಮೆಯನ್ನು ಕಳೆದುಕೊಂಡ ಮಾಲೀಕರು ಬೀದಿಗೆ ಬಂದಿದ್ದಾರೆ. ವರ್ಷದ ತುತ್ತು ಕಳೆದುಕೊಂಡ ಉದ್ಯಮ ಮುಂದಿನ ಸೀಸನ್‌ನತ್ತ ಚಿತ್ತ ಹರಿಸಿದೆ.

ತಾಲ್ಲೂಕಿನಲ್ಲಿ 30 ಶಾಮಿಯಾನ ಅಂಗಡಿಗಳಿವೆ. ಈ ಕ್ಷೇತ್ರದಲ್ಲಿ ಕನಿಷ್ಠ 300ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಸಮಾರಂಭಗಳ ಆಧಾರದ ಮೇಲೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಈ ಉದ್ಯಮವನ್ನು ನೆಚ್ಚಿಕೊಂಡವರ ಸಂಖ್ಯೆ ದೊಡ್ಡದು.

ಶಾಮಿಯಾನ ಉದ್ಯಮಕ್ಕೆ ವರ್ಷದಲ್ಲಿ ಮೂರ್‍ನಾಲ್ಕು ತಿಂಗಳು ಬಿಡುವಿಲ್ಲದ ಸಮಯ. ಯುಗಾದಿ ಮುಗಿಯುತ್ತಿದ್ದಂತೆ ಮಾರ್ಚ್‌ನಿಂದ ಜೂನ್‌ವರೆಗೂ ಮದುವೆ, ಶುಭ ಸಮಾರಂಭಗಳಿಂದ ಇವರಿಗೆ ಪುರುಸೊತ್ತಿಲ್ಲದ ದುಡಿಮೆ ಕಾಲ. ಈ ಅವಧಿಯಲ್ಲಿಯೇ ಕೊರೊನಾ ಒಕ್ಕರಿಸಿಕೊಂಡು ಲಾಕ್‌ಡೌನ್‌ ಘೋಷಣೆಯಾಯಿತು. ಇದರಿಂದಾಗಿ ವರ್ಷದ ದುಡಿಮೆಯಲ್ಲಿ ಶೇ 70 ದುಡಿಮೆ ಕಾಣುತ್ತಿದ್ದ ಸೀಸನ್‌ ಕೈತಪ್ಪಿ ಹೋಗಿದೆ.

ಇದರಿಂದಾಗಿ ನಮ್ಮ ಬದುಕು ಚಿಂತಾಜನಕವಾಗಿದೆ ಎನ್ನುತ್ತಾರೆ ಕಾರ್ಮಿಕ ರಾಜು.

ಶಾಮಿಯಾನ ಉದ್ಯಮದಲ್ಲಿ ತೀವ್ರ ಪೈಪೋಟಿ ಇರುವುದರಿಂದ ಸಮಾರಂಭದ ಅಂದ ಚೆಂದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪ್ರತಿಯೊಂದು ಕಾರ್ಯಕ್ರಮಕ್ಕೂ ಹೊಸ ಬಗೆಯ ವಿನ್ಯಾಸ, ಬಟ್ಟೆ, ಲೈಟಿಂಗ್‌ ವ್ಯವಸ್ಥೆಗಳ ಬೇಡಿಕೆ ಇರುತ್ತದೆ. ಗ್ರಾಹಕರ ಬೇಡಿಕೆ ಈಡೇರಿಸುವ ಕಾರಣದಿಂದ ಹೊಸ ಸಾಮಗ್ರಿಗಳ ಖರೀದಿ ಕೆಲಸ ಪ್ರತಿಯೊಂದು ಸಮಾರಂಭಕ್ಕೂ ಇರುತ್ತದೆ.

ಮೇಲ್ನೋಟಕ್ಕೆ ಶಾಮಿಯಾನ ಸರಳವಾಗಿ ಕಂಡರೂ ಲಕ್ಷಾಂತರ ರೂಪಾಯಿ ಹೂಡಿಕೆ ಇರುತ್ತದೆ. ಹೀಗಾಗಿ ಮದುವೆ ಸೀಸನ್‌ ಆರಂಭವಾಗುವ ಕಾರಣ ಗ್ರಾಹಕರಿಂದ ಬೇಡಿಕೆ ಪಡೆದು ಅವರಿಗೆ ಅಗತ್ಯವಾದ ರೀತಿಯಲ್ಲಿ ವಿನ್ಯಾಸಕ್ಕೆ ಹೊಸ ಸಾಮಗ್ರಿಗಳನ್ನು ಖರೀದಿಸಿದ್ದು, ಹೂಡಿಕೆ ಭಾರವೆಲ್ಲ ಮೈಮೇಲೆ ಬಿದ್ದಿದೆ ಎಂದು ಶಾಮಿಯಾನ ಮಾಲೀಕ ಹನುಮಂತಪ್ಪ ಹಳ್ಳಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು