ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವೈದ್ಯ ವಿದ್ಯಾರ್ಥಿಗಳ ಸೇವೆ

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ
Last Updated 8 ಮೇ 2021, 4:04 IST
ಅಕ್ಷರ ಗಾತ್ರ

ಕೊಪ್ಪಳ: ‘ನಗರದ ಕಿಮ್ಸ್ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳನ್ನು ಕೋವಿಡ್ ನಿರ್ವಹಣೆ ಕಾರ್ಯಕ್ಕೆ ನಿಯೋಜಿಸಲು ಆರೋಗ್ಯ ಇಲಾಖೆ ಕಾರ್ಯದರ್ಶಿ ಅನುಮತಿ ನೀಡಿದ್ದಾರೆ. ಅವರ ಸೇವೆ ಪಡೆದುಕೊಳ್ಳಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಕಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಸದ್ಯಕ್ಕೆ ಆರೋಗ್ಯ ಸೇವೆಯನ್ನು ಉತ್ತಮಗೊಳಿಸಲು ಮಾನವ ಸಂಪನ್ಮೂಲದ ಅಗತ್ಯವಿದೆ. ಆದ್ದರಿಂದ ವ್ಯವಸ್ಥಿತ ಕಾರ್ಯ ನಿರ್ವಹಣೆಗೆ ತರಬೇತಿ ಪಡೆದ ಕಿಮ್ಸ್ಕಾಲೇಜಿನ 142 ವಿದ್ಯಾರ್ಥಿಗಳನ್ನು ಕೋವಿಡ್ ನಿರ್ವಹಣೆ ಕಾರ್ಯದಲ್ಲಿ ತೊಡಗಿಸಲು ಕ್ರಮ ಕೈಗೊಳ್ಳಿ. ವೈದ್ಯಕೀಯ ತರಬೇತಿ ಪಡೆದಿರುವುದರಿಂದ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿಯೂ ಅವರು ಸಹಕಾರಿಯಾಗಲಿದ್ದಾರೆ’ ಎಂದು ಹೇಳಿದರು.

ರೋಗಿಗಳಿಗೆ ಔಷಧಿಗಳೊಂದಿಗೆ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ. ಆದ್ದರಿಂದ ಪ್ರತಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಕನಿಷ್ಠ 10 ನಿಮಿಷಗಳ ಕಾಲ ಆಧ್ಯಾತ್ಮ ವಿಷಯ, ಮೃದು ಸಂಗೀತದಂತಹ ಧ್ವನಿಮುದ್ರಿಕೆಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಒಂದು ಸಿ.ಟಿ.ಸ್ಕ್ಯಾನ್‌ ಯಂತ್ರ ಕಾರ್ಯಾರಂಭಗೊಂಡಿದ್ದು, ಡಿಎಂಎಫ್ ನಿಧಿಯಲ್ಲಿ ಇನ್ನೊಂದು ಸಿ.ಟಿ. ಸ್ಕ್ಯಾನ್ ಯಂತ್ರ ಅಳವಡಿಸಲು ಕ್ರಮ ವಹಿಸಿ. ಗಿಣಿಗೇರಾ ಕೆರೆ ನಿರ್ಮಾಣ ಯೋಜನೆ, ಕೋಳೂರು ಬ್ರಿಡ್ಜ್ ದುರಸ್ಥಿ ಸೇರಿದಂತೆ ನೀರಾವರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಎಂದು ಸಂಬಂಧಿಸಿದ ಇಲಾಖೆಗೆ ಸೂಚಿಸಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ,‘ಕೋವಿಡ್ ನಿಯಂತ್ರಣ ಕ್ರಮವಾಗಿ ನಗರದ ತರಕಾರಿ ಮಾರುಕಟ್ಟೆಯನ್ನು ನಗರದ ಹೊರವಲಯದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ವ್ಯಾಪಾರಸ್ಥರಿಗೆ ಅಗತ್ಯವಾಗಿ ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಉತ್ತಮ ರಸ್ತೆ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಕಲ್ಪಿಸಿ’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ‘ ಕೋವಿಡ್ ನೆಗೆಟಿವ್‌ ವರದಿ ಪಡೆದ ರೋಗಿಗಳಿಗೆ ಕೂಡಲೇ ಸ್ಪಂದಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಿ. ನೆಗೆಟಿವ್ ವರದಿ ಬಂದಿದೆ ಎಂದು ಅವರ ಸಾಮಾನ್ಯ ಜ್ವರ, ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ದೂರುಗಳು ಬರುತ್ತಿದ್ದು, ಹಾಗಾಗದಂತೆ ವೈದ್ಯರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಮಾತನಾಡಿ,‘ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಸ್ವಚ್ಛತೆ ಅತೀ ಮುಖ್ಯವಾಗಿದ್ದು, ಸ್ವಚ್ಛತಾ ನಿರ್ವಹಣೆಗೆ ಮೊದಲು ಆದ್ಯತೆ ನೀಡಿ. ಆಸ್ಪತ್ರೆಗೆ ಕೋವಿಡ್ ಹೊರತು ಪಡಿಸಿ ಇತರೆ ಖಾಯಿಲೆಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಮಾನವೀಯ ದೃಷ್ಟಿಯಿಂದ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡಿ’ ಎಂದು ಹೇಳಿದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ತಾಲ್ಲೂಕಿನಲ್ಲಿ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲು ಸಚಿವರಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ,ಎಸ್‌ಪಿ ಟಿ.ಶ್ರೀಧರ್,ಹೆಚ್ಚುವರಿಜಿಲ್ಲಾಧಿಕಾರಿ ಎಂ.ಪಿ.ಮಾರುತಿ,ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ಡಿಎಚ್ಒಡಾ.ಟಿ.ಲಿಂಗರಾಜ ಹಾಗೂ ಕಿಮ್ಸ್ ನಿರ್ದೇಶಕ ಡಾ.ವೈಜನಾಥ ಇಟಗಿ ಅವರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT