ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೊಂದಿಯಲ್ಲಿ ‘ವಿಜಯನಗರ ವೈಭವ’

ರಾಮಾಯಣ, ಪೌರಾಣಿಕ ಹಿನ್ನೆಲೆಯ ಕ್ಷೇತ್ರದಲ್ಲಿ ಇಂದಿನಿಂದ ಉತ್ಸವದ ಸಂಭ್ರಮ, ಜನರಿಗೆ ಬಿಸಿಲೇ ಸವಾಲು
ವಿಜಯ ಎನ್‌.
Published 11 ಮಾರ್ಚ್ 2024, 5:57 IST
Last Updated 11 ಮಾರ್ಚ್ 2024, 5:57 IST
ಅಕ್ಷರ ಗಾತ್ರ

ಗಂಗಾವತಿ: ಭವ್ಯವಾದ ಕೋಟೆ, ಗಗನ್‌ ಮಹಲ್‌, ಕೃಷ್ಣದೇವದಾಯನ ಸಮಾಧಿ, ರಾಮ ಹಾಗೂ ಲಕ್ಷ್ಮಣ ಹನುಮಂತನನ್ನು ಮೊದಲ ಬಾರಿಗೆ ಭೇಟಿ ನೀಡಿದ ಐತಿಹ್ಯ ಇಷ್ಟೆಲ್ಲ ಮಹತ್ವದ ಇತಿಹಾಸ ಹೊಂದಿರುವ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಪ್ರದೇಶದಲ್ಲಿ ಈಗ ಉತ್ಸವದ ಸಂಭ್ರಮ.

ಇದಕ್ಕಾಗಿ ವಿಜಯನಗರ ಕಾಲದ ಐತಿಹಾಸಿಕ ಸ್ಥಳಗಳು ವಿದ್ಯುತ್‌ ದೀಪಗಳ ಅಲಂಕಾರದಲ್ಲಿ ಝಗಮಗಿಸುತ್ತಿವೆ. ಉತ್ಸವಕ್ಕೆ ಕ್ಷಣಗಣನೆಗೆ ಶುರುವಾಗಿದ್ದು ಸೋಮವಾರ ಮತ್ತು ಮಂಗಳವಾರ ಎರಡೂ ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.    ಉತ್ಸವವು ರಾಮಾಯಣ ಮತ್ತು ವಿಜಯನಗರ ಕಾಲದ ಇತಿಹಾಸ ನೆನಪಿಸುವಂತೆ ಮುಖ್ಯವೇದಿಕೆಗೆ ವಿದ್ಯಾರಣ್ಯರು, ಶಿವ, ಪಾರ್ವತಿ, ರಾಮ, ಲಕ್ಷ್ಮಣ, ಆಂಜನೇಯ, ಸುಗ್ರೀವ ಮೂರ್ತಿಗಳನ್ನು ಅಳವಡಿಸಿ ವಿದ್ಯುತ್ ಅಲಂಕಾರ ಮಾಡಲಾಗಿದೆ.

ಉತ್ಸವ ಮೈದಾನದಲ್ಲಿ 20 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಿದ್ದು, ದೂರ ಕುಳಿತು ಉತ್ಸವ ಕಾರ್ಯಕ್ರಮ ವೀಕ್ಷಿಸುವ ಜನರಿಗೆ ಮೈದಾನದಲ್ಲಿ ಕೆಲವೆಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಹಾಗೇ ಮೈದಾನದಲ್ಲಿ ಮಳಿಗೆಗಳು, ಫಲಪುಷ್ಪ ಪ್ರದರ್ಶನಕ್ಕಾಗಿ ಬೃಹತ್ ಪೆಂಡಲ್ ಹಾಕಲಾಗಿದೆ.

ಉತ್ಸವ ಮೈದಾನದ ರಸ್ತೆಯುದ್ದಕ್ಕೂ ಜಿಲ್ಲಾಡಳಿತ ಆನೆಗೊಂದಿ ಜಿಲ್ಲೆಯ ಪ್ರವಾಸೋದ್ಯಮದ ಸ್ಥಳಗಳ ಬ್ಯಾನರ್ ಅಳವಡಿಸಿ, ಜಾಗೃತಿ ಮೂಡಿಸಿದೆ. ಎರಡು ದಿನಗಳ ಉತ್ಸವಕ್ಕೆ ಆಗಮಿಸುವ ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳಿಗೆ ದುರ್ಗಾದೇವಿ ರಸ್ತೆ ಮಾರ್ಗದ ಜಮೀನುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಉತ್ಸವದ ಮುಖ್ಯವೇದಿಕೆಗೆ ಬರುವ ರಸ್ತೆ ಬಲಬದಿಯ ಜಮೀನಿನಲ್ಲಿ ಸಾರ್ವಜನಿಕರಿಗೆ ಉಣಬಡಿಸಲು ಬೃಹತ್ ಪೆಂಡಲ್ ಹಾಕಿ ಸಿದ್ಧತೆ ಮಾಡಲಾಗಿದೆ. ವಿಚಾರಗೋಷ್ಠಿಗಳಿಗಾಗಿ ಗಗನಮಹಲ್ ಬಳಿ ಎರಡನೇ ವೇದಿಕೆ ನಿರ್ಮಾಣ ಮಾಡಿದ್ದು, ಸೋಮವಾರದಿಂದಲೇ ಅಭಿವೃದ್ಧಿ ವಿಚಾರಗೋಷ್ಠಿಗಳು ನಡೆಯಲಿವೆ.

ಪೊಲೀಸ್ ಬಂದೋಬಸ್ತ್: ಉತ್ಸವದ ವಿವಿಧ ಕಾರ್ಯಕ್ರಮ, ಪಾರ್ಕಿಂಗ್, ಪೆಟ್ರೋಲಿಂಗ್, ಹೆಲಿಪ್ಯಾಡ್, ಊಟ, ಕಲಾವಿದರ ಬಳಿ, ವಸ್ತುಪ್ರದರ್ಶನ, ಮುಖ್ಯವೇದಿಕೆ, ಎರಡನೇ ವೇದಿಕೆ ಬಳಿ ಮೂವರು ಡಿವೈಎಸ್ಪಿ, 12 ಪಿಐ/ಸಿಪಿಐ, 23 ಪಿಎಸ್ಐ, 192 ಎಎಸ್ಐ, 125 ಎಚ್‌ಸಿ, 235 ಎಚ್.ಜಿ, 1 ಕೆಎಸ್‌ಆರ್‌ಪಿ, 12 ಮಹಿಳಾ ಪಿಸಿ, 1 ಡಿಆರ್‌ ವಾಹನ ಸೇರಿ ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಅಲಂಕಾರ: ಉತ್ಸವದ ಅಂಗವಾಗಿ ವಿಜಯನಗರ ಸಾಮ್ರಾಜ್ಯದ ಕೊನೆಯ ದ್ವಾರಬಾಗಿಲು ಎಂದೇ ಕರೆಯುವ ಇಂದಿನ ಕಡೆಬಾಗಿಲು ಗ್ರಾಮದಿಂದ ಆನೆ‌ಗೊಂದಿ ಗ್ರಾಮದ ಉತ್ಸವ ಮೈದಾನದ ಮುಖ್ಯವೇದಿಕೆವರೆಗೆ ಬಣ್ಣಬಣ್ಣದ ವೈವಿಧ್ಯಮಯವಾದ ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.

ಹಾಗೆಯೇ ಕೃಷ್ಣದೇವರಾಯ ವೃತ್ತ, ಸರ್ಕಾರಿ ಪ್ರೌಢಶಾಲೆಯ ಕಲ್ಲಿನ ಕಂಪೌಂಡ್, ಶಬರಿ ವೇದಿಕೆ, ಅಂಜನಾದ್ರಿ ಬೆಟ್ಟದ ವಸ್ತುಗಳ ಖರೀದಿ ಮುಂಭಾಗ ಸೇರಿ ಆನೆಗೊಂದಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕನಕಗಿರಿ ಉತ್ಸವದ ಸೊಬಗು ಕಣ್ತುಂಬಿಕೊಂಡಿದ್ದ ಜಿಲ್ಲೆಯ ಜನರಿಗೆ ಈಗ ಮತ್ತೊಂದು ಉತ್ಸವ ನೋಡುವ ಭಾಗ್ಯ ಒದಗಿದೆ.

ಆನೆಗೊಂದಿ ಗ್ರಾಮದ ಮೈದಾನದಲ್ಲಿ ಉತ್ಸವಕ್ಕೆ ಸಿದ್ಧಗೊಂಡ ಶ್ರೀರಂಗದೇವರಾಯಲು ಮುಖ್ಯವೇದಿಕೆ
ಆನೆಗೊಂದಿ ಗ್ರಾಮದ ಮೈದಾನದಲ್ಲಿ ಉತ್ಸವಕ್ಕೆ ಸಿದ್ಧಗೊಂಡ ಶ್ರೀರಂಗದೇವರಾಯಲು ಮುಖ್ಯವೇದಿಕೆ
ಆನೆಗೊಂದಿ ಉತ್ಸವದ ನಿಮಿತ್ತ ಮುಖ್ಯವೇದಿಕೆ ಮುಂಭಾಗ ಸಾರ್ವಜನಿಕರಿಗಾಗಿ ಹಾಕಿರುವ ಆಸನಗಳು

ಆನೆಗೊಂದಿ ಉತ್ಸವದ ನಿಮಿತ್ತ ಮುಖ್ಯವೇದಿಕೆ ಮುಂಭಾಗ ಸಾರ್ವಜನಿಕರಿಗಾಗಿ ಹಾಕಿರುವ ಆಸನಗಳು

ಬೈ ಸ್ಕೈ ವ್ಯವಸ್ಥೆ ಆನೆಗೊಂದಿ ಸುತ್ತಮುತ್ತಲಿನ ದುರ್ಗಾದೇವಿ ಬೆಟ್ಟ ಪಂಪಾಸರೋವರ ಅಂಜನಾದ್ರಿ ಬೆಟ್ಟ ಋಷಿಮುಖ ಪರ್ವತ ಹಂಪಿ ಸಾಣಾಪುರ ಕೆರೆ ಕಿಷ್ಕಿಂದಾ ಸೇರಿ ವಿವಿಧ ಸ್ಥಳಗಳ ವೀಕ್ಷಣೆಗೆ ಮೊದಲ ಬಾರಿಗೆ ಬೈ ಸ್ಕೈ ವ್ಯವಸ್ಥೆ ಕಲ್ಪಿಸಲಾಗಿದೆ. ಕಡೆಬಾಗಿಲು ಗ್ರಾಮದ ಬಳಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು ಮಂಜುನಾಥ ಹುಡೇದ್ ಪ್ರೈವೇಟ್ ಹೆಲಿಪ್ಯಾಡ್ ಅವರಿಂದ ಮಾ. 11ರಿಂದ 14ರ ವರೆಗೆ ಬೈಸ್ಕೈ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸುತ್ತಾಟ 8 ನಿಮಿಷ ಇರಲಿದ್ದು ₹4 ಸಾವಿರ ಒಳಗೆ ವೆಚ್ಚ ಇರಲಿದೆ. ಆಸಕ್ತರು ಗಂಗಾವತಿ ಅಭಿನವ ಗವಿಸಿದ್ದೇಶ್ವರ ಸೌಹಾರ್ದ ಸಹಕಾರಿ ನಿಯಮಿತ ಗಂಗಾವತಿ ಸಿಬಿಎಸ್ ಕಾಂಪ್ಲೆಕ್ಸ್ ಹಾಗೂ ಹೆಲಿಪ್ಯಾಡ್ ಸ್ಥಳದ ಬಳಿ ಟಿಕೆಟ್‌ ಪಡೆಯಬಹುದು ಎಂದು ಬ್ಯಾನರ್ ಅವಳವಡಿಸಿ ಜನರಿಗೆ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT