ಶನಿವಾರ, ಮೇ 28, 2022
31 °C
ದಿನದಿಂದ ದಿನಕ್ಕೆ ಮಕ್ಕಳಲ್ಲಿ ಸೋಂಕು ಪ್ರಸರಣ ಸಂಖ್ಯೆ ಹೆಚ್ಚಳ: ಜಿಲ್ಲೆಯ ಕೆಲ ಕಡೆ ಶಾಲೆಗಳು ಬಂದ್

ಕೊಪ್ಪಳ: ಮಕ್ಕಳಲ್ಲಿ ಸೋಂಕು: ಮುಂದುವರಿದ ಆತಂಕ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕದ ಮಧ್ಯೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಸೋಂಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದರೂ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ.

 ಕೊಪ್ಪಳ ಜಿಲ್ಲೆಯಲ್ಲಿ ಒಂದೇ ದಿನ 73 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ 73 ವಿದ್ಯಾರ್ಥಿಗಳು, 6 ಶಿಕ್ಷಕರು ಹಾಗೂ ಒಬ್ಬ ಅಡುಗೆ ಸಹಾಯಕರಿಗೆ ಸೋಂಕು ದೃಢ ಪಟ್ಟಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತವು 9 ಶಾಲೆಗಳಿಗೆ ರಜೆ ನೀಡಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆಚಾರ್ ನರಸಾಪುರ ಹಿರಿಯ ಪ್ರಾಥಮಿಕ ಶಾಲೆ, ಮರಳಿ ಹಿರಿಯ ಪ್ರಾಥಮಿಕ ಶಾಲೆ, ಕೊಪ್ಪಳ ತಾಲೂಕಿನ ಶಿವಪುರ ಹಿರಿಯ ಪ್ರಾಥಮಿಕ ಶಾಲೆ, ಕುಷ್ಟಗಿ ತಾಲೂಕಿನ ಹನುಮಸಾಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕುಷ್ಟಗಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ, ಚಳಗೆರಿ ಪ್ರೌಢಶಾಲೆ, ತಳಕಲ್ ಗ್ರಾಮದ ಆರ್‌ಎಂಎಸ್‌ಎ ವಸತಿ ಶಾಲೆ, ಮಂಗಳೂರಿನ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಹಿನ್ನಲೆ ಜಿಲ್ಲಾಡಳಿತದಿಂದ 22 ರಿಂದ 26 ರವರೆಗೂ 9 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇಲ್ಲಿಯವರೆಗೂ 120 ಶಾಲಾ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡು ಒಟ್ಟು 13 ಶಾಲೆಗಳಿಗೆ ರಜೆ ನೀಡಲಾಗಿತ್ತು.

ಅದರಲ್ಲಿ ನಾಲ್ಕು ಶಾಲೆಗಳ ರಜೆ ಹಿಂಪಡೆಯಲಾಗಿದೆ. ಸೋಂಕು ಕಾಣಿಸಿಕೊಂಡ ಮಕ್ಕಳನ್ನು ಐಸೋಲೇಷನ್, ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಡಲಾಗುತ್ತಿದೆ.ಈ ಮಧ್ಯೆ ವಾರಾಂತ್ಯ ಕರ್ಫ್ಯೂ ವೇಳೆಗೆ ಹಿಂತೆಗೆದಿರುವದರಿಂದ ಶಾಲಾ ಕಾಲೇಜುಗಳು ಶನಿವಾರ ಆರಂಭಿಸುವ ಗೊಂದಲವಿತ್ತು, ಇದರಿಂದಾಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು.

ಕುಕನೂರಿನ ನವೋದಯ ವಿದ್ಯಾಲಯದಲ್ಲಿ ಮಕ್ಕಳಿಗೆ ಸೋಂಕು ಕಾಣಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಅಲ್ಲದೆ 1 ರಿಂದ 6 ನೇ ತರಗತಿ ಮಕ್ಕಳನ್ನು ವಸತಿ ನಿಲಯ ಸೇರಿದಂತೆ ಇತರೆ ಶಾಲೆಗಳಲ್ಲಿ ಪ್ರವೇಶ ನಿರ್ಬಂಧಿಸಿ ಮನೆಗೆ ಕಳುಹಿಸಲಾಯಿತು.

ಮಕ್ಕಳಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಿ, ಮನೆಗೆ ಕಳುಹಿಸಲಾಗಿತ್ತು. ಈಗ ಸೋಂಕು ಪ್ರಸರಣ ನಿಧಾನಗತಿಯಲ್ಲಿ ಇದ್ದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. 

ವಸತಿ ನಿಲಯಗಳಲ್ಲಿ ಕೊರೊನಾ ಆರೈಕೆ ಕೇಂದ್ರಗಳನ್ನು ತೆರೆಯಲು ಕೆಲವು ಕಡೆ ವಿರೋಧ ವ್ಯಕ್ತಿವಾದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ. ತಜ್ಞ ಮಕ್ಕಳ ವೈದ್ಯರ ಕೊರತೆ ಇದ್ದರೂ ನಿರ್ವಹಣೆ ಮಾಡುವ ಸಾಮರ್ಥ್ಯವಿರುವ ವೈದ್ಯರ ಸಹಕಾರದಿಂದ ಆರೈಕೆ ಕೇಂದ್ರ, ಅಗತ್ಯ ಔಷಧಿಗಳನ್ನು ಒದಗಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಹೇಳುತ್ತಾರೆ.

ಕುಷ್ಟಗಿ ಪದವಿ ಪೂರ್ವ ಕಾಲೇಜಿನಲ್ಲಿ 645 ವಿದ್ಯಾರ್ಥಿಗಳ ಪೈಕಿ ಕಾಲೇಜಿಗೆ ಬಂದಿರುವ ವಿದ್ಯಾರ್ಥಿಗಳ ಸಂಖ್ಯೆ ನೂರು ಮಾತ್ರ ಇತ್ತು. ಇದಕ್ಕೆ ವಾರಾಂತ್ಯ ಕರ್ಫ್ಯೂ ಗೊಂದಲ ಹಾಗೂ ಪಕ್ಕದ ಶಾಲೆಯಲ್ಲಿ ಕೊರೊನಾ ಸೋಂಕು ಕಾರಣ ಎನ್ನುತ್ತಾರೆ ಕಾಲೇಜು ಮುಖ್ಯಸ್ಥರು. ಕೋವಿಡ್ ಸೋಂಕಿನ ಪ್ರಸರಣ ಜಿಲ್ಲೆಯಲ್ಲಿ ಭಾನುವಾರ 160 ಜನರಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 35,745 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 521 ಜನರು ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ. ಮೂರನೇ ಅಲೆಯಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ ಎಂಬುವುದೇ ಸಮಾಧಾನ ಸಂಗತಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.