ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆ, ಅನುಷ್ಠಾನ ಏಜೆನ್ಸಿಗಳನಡುವೆ ಸಮನ್ವಯ ಇರಲಿ: ಡಿಸಿ

ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ
Last Updated 3 ಆಗಸ್ಟ್ 2021, 4:21 IST
ಅಕ್ಷರ ಗಾತ್ರ

ಕೊಪ್ಪಳ: ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ಇಲಾಖೆ ಮತ್ತು ಅನುಷ್ಠಾನ ಏಜೆನ್ಸಿಗಳ ನಡುವೆ ಸಮನ್ವಯತೆ ಇರಬೇಕು. ಅಂದಾಗ ಮಾತ್ರ ಗುಣಮಟ್ಟದ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಕೆಆರ್‌ಡಿಬಿ, ಡಿಎಂಎಫ್, ಕೆಎಲ್‌ಎಲ್‌ಎಡಿಎಸ್‌, ಎಂಪಿಎಲ್ಎಡಿಎಸ್‌, ಲಿಂಕ್‌ ಡ್ಯಾಕ್ಯುಮೆಂಟ್ ಮತ್ತು ಇತರೆ ಇಲಾಖೆಯ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಇಲಾಖೆಯಿಂದ ಅನುಷ್ಠಾನ ಏಜೆನ್ಸಿಗೆ ನಿರ್ದಿಷ್ಟ ಕಾಮಗಾರಿ ಹಂಚಿಕೆಯಾದ ನಂತರ ಕಾಮಗಾರಿಯ ಅಂದಾಜು ವೆಚ್ಚದಿಂದ ಹಿಡಿದು ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರತಿ ಹಂತದಲ್ಲೂ ಪರಸ್ಪರ ಸಮನ್ವಯತೆ, ಸಹಕಾರ ಇರಬೇಕು. ಇದರಿಂದ ಕಾಮಗಾರಿ ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಬಹುದು. ಅಲ್ಲದೆ ಇತರೆ ಅಭಿವೃದ್ಧಿ ಕಾಮಗಾರಿ, ವಿಷಯಗಳ ಬಗ್ಗೆ ಗಮನ ಹರಿಸಬಹುದು. ಏಜೆನ್ಸಿಗೆ ಕಾಮಗಾರಿ ಹಂಚಿಕೆಯಾದ ನಂತರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪೂರ್ಣ ಜವಾಬ್ದಾರಿಯನ್ನು ಏಜೆನ್ಸಿಗೆ ಬಿಟ್ಟು ಸುಮ್ಮನೆ ಕೂರದೆ ಇಲಾಖೆಯ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಿ, ಸರ್ಕಾರದ ಅನುದಾನ, ಅಧಿಕಾರಿಗಳ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿರುವ ರಂಗಮಂದಿರ ಮಹತ್ವದ ಕಾಮಗಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಸಾಹಿತ್ಯ, ಕಲೆಯ ಕುರಿತಾದ ಕಾರ್ಯಕ್ರಮಗಳು ನಡೆಯುವುದರಿಂದ ರಂಗಮಂದಿರದ ನಿರ್ಮಾಣ ಕಾಮಗಾರಿ ಅಚ್ಚುಕಟ್ಟಾಗಿ ಇರಬೇಕು. ಧ್ವನಿವರ್ಧಕಗಳ ಅಳವಡಿಕೆಗೆ ತಂತ್ರಜ್ಞರ ಸಲಹೆ ಪಡೆಯುವುದು ಕಡ್ಡಾಯ ಎಂದು ಹೇಳಿದರು.

ಬಹುಗ್ರಾಮ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅವಕಾಶವಿಲ್ಲ. ಆದಾಗ್ಯೂ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಬೇಡಿಕೆ ಇದ್ದಲ್ಲಿ, ಸಂಬಂಧಿಸಿದ ಗ್ರಾಮದಲ್ಲಿ ಬಹುಗ್ರಾಮ ಯೋಜನೆಯಡಿ ಪೂರೈಸಲಾಗುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಬೇಕು. ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಗ್ರಾಮಸ್ಥರ ಹೇಳಿಕೆಗಳನ್ನು ದಾಖಲಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬಹುದು ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.

ಜಿ.ಪಂ. ಸಿಇಒ ಫೌಜಿಯಾ ತರನ್ನುಮ್, ಕೆಕೆಆರ್‌ಡಿಬಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT