ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ: ಶಾಬುದ್ದೀನ್‌ ಆಗ್ರಹ

Last Updated 11 ಅಕ್ಟೋಬರ್ 2021, 2:56 IST
ಅಕ್ಷರ ಗಾತ್ರ

ಕುಷ್ಟಗಿ: ಪಿಂಜಾರ ನದಾಫ್‌ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಸಮಾಜದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ರಾಜ್ಯ ಘಟಕದ ಪಿಂಜಾರ ಸಂಘದ ಸಹಕಾರ್ಯದರ್ಶಿ ಶಾಬುದ್ದೀನ್‌ ಒತ್ತಾಯಿಸಿದರು.

ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ನಡೆದ ಕೊಪ್ಪಳ ಜಿಲ್ಲಾ ಮಟ್ಟದ ನದಾಫ್ ಪಿಂಜಾರ ಸಂಘದ ಪದಾಧಿಕಾರಿಗಳ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈ ಸಮುದಾಯ 24 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕವಾಗಿ ಹಿಂದುಳಿದ ಈ ಸಮುದಾಯವನ್ನು ಆರ್ಥಿಕ ಪ್ರಗತಿಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆದೊಯ್ಯುವ ವಿಚಾರದಲ್ಲಿ ಸರ್ಕಾರ ಉದಾಸೀನ ಮಾಡದೆ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದರು.

ಜಿಲ್ಲೆಯಲ್ಲಿರುವ ಎಲ್ಲ ಪಿಂಜಾರ ನದಾಫ್‌ ಸಮುದಾಯದ ಪ್ರತಿಯೊಬ್ಬರೂ ಆಜೀವ ಸದಸ್ಯತ್ವವನ್ನು ಪಡೆಯುವಂತಾಗಲು ಅಭಿಯಾನ ನಡೆಸಲಾಗುತ್ತದೆ. ಅದೇ ರೀತಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ‘ಪಿಂಜಾರ ಮಿತ್ರ’ರನ್ನು ನೇಮಕ ಮಾಡುವ ಮೂಲಕ ಇತರರಿಗೆ ಅಗತ್ಯ ನೆರವು ಒದಗಿಸಲು
ಉದ್ದೇಶಿಸಲಾಗಿದೆ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಫ್‌.ಮುದ್ದಾಬಳಿ ಮಾತನಾಡಿ, ರಾಜ್ಯ ಘಟಕದ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಚಿಂತನೆ ನಡೆಸಲಾಗುತ್ತಿದೆ, ಜಿಲ್ಲೆಯಲ್ಲಿರುವ ಸಂಘಗಳು ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸುವ ಮೂಲಕ ಸದಾ ಕ್ರಿಯಾಶೀಲವಾಗಿರಬೇಕು ಎಂದು ಹೇಳಿದರು.

ಅಜ್ಮೀರ್‌ಸಾಬ್‌, ನೂರಭಾಷಾ, ಅಲಿಸಾಬ್‌, ವಕೀಲರ ಎಂ.ಕೆ.ಶೆಕ್ಕೇರ್‌, ಅಮೀನಸಾಬ್ ಕರ್ಕಿಹಳ್ಳಿ, ವಜೀರಸಾಬ್‌, ರೇಷ್ಮಾ ಕಂದಕೂರು ಇತರರು ಮಾತನಾಡಿ, ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು, ಅದೇ ರೀತಿ ಪ್ರತಿಯೊಬ್ಬರೂ ಕೋವಿಡ್‌ ನಿರೋಧಕ ಲಸಿಕೆಯನ್ನು ಹಾಕಿಕೊಳ್ಳಬೇಕು
ಎಂದು ತಿಳಿಸಿದರು.

ವಿವಿಧ ಶಿಕ್ಷಣ, ಸಾಹಿತ್ಯ ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದ ಪಿಂಜಾರ ನದಾಫ್‌ ಸಮುದಾಯದ ಕೆ.ವೈ.ಕಂದಕೂರು, ಲಾಲ್‌ಸಾಬ್‌, ಮುರ್ತುಜಾಬೀ, ಹೈದರ ಅಲಿ, ರಫಿಕ್‌ಸಾಬ್‌, ಖಾದರಸಾಬ್‌, ರೇಷ್ಮಾ ಕಂದಕೂರು, ಅಕ್ಬರ್‌ ಸಾಬ್‌, ಅಲ್ಲಾಸಾಬ್‌ ದೊಡ್ಡಮನಿ ಇತರರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಮುರ್ತುಜಾಸಾಬ್‌ ನದಾಫ್‌, ಅಲ್ಲಾಸಾಬ್ ಗೊಂದಿಹಳ್ಳಿ, ಟಿಪ್ಪುಸಾಬ್‌ ನದಾಫ್‌, ದಸ್ತಗೀರಸಾಬ್‌ ರಾಜೂರು, ಬಾಲೇಸಾಬ್‌, ಫಕೀರಸಾಬ್ ಇದ್ದರು.

ಸಂಘದ ಕುಷ್ಟಗಿ ತಾಲ್ಲೂಕು ಘಟಕದ ಕಾರ್ಯದರ್ಶಿ ಮಹಿಬೂಬಸಾಬ್‌ ನದಾಫ್‌ ಅಧ್ಯಕ್ಷತೆ ವಹಿಸಿದ್ದರು. ಮೋಯಿದ್ದೀನ್ ಪಾಷಾ ಕುರಾನ್‌ ಪಠಿಸಿದರು. ರಾಜೇಸಾಬ್‌ ನದಾಫ್‌ ನಿರೂಪಿಸಿದರು. ಸಂಘ ಹಾಗೂ ಸಮುದಾಯದ ಪ್ರಗತಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT