ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತರಾದರಷ್ಟೇ ಅಭಿವೃದ್ಧಿ ಸಾಧ್ಯ

ಪಂಚಾಚಾರ್ಯರ ಯುಗಮಾನೋತ್ಸವ, ರೇಣುಕಾಚಾರ್ಯ ಜಯಂತಿ: ಉಜ್ಜಯಿನಿ ಪೀಠದ ಸ್ವಾಮೀಜಿ ಹೇಳಿಕೆ
Last Updated 20 ಮಾರ್ಚ್ 2023, 5:27 IST
ಅಕ್ಷರ ಗಾತ್ರ

ಕೊಪ್ಪಳ: ’ಪಂಗಡ ಹಾಗೂ ಒಳಪಂಗಡಗಳ ನಡುವಿನ ಒಡಕಿನ ಲಾಭವನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿದ್ದು, ಸಮಾಜದ ಅಭಿವೃದ್ಧಿಯಾಗಲು ಸಂಘಟಿತರಾಗುವುದೇ ಉತ್ತಮವಾದ ಮಾರ್ಗ’ ಎಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಇಲ್ಲಿ ನಡೆದ ಪಂಚಾಚಾರ್ಯರ ಯುಗಮಾನೋತ್ಸವ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜನೆಯಾಗಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ವೀರಶೈವ ಲಿಂಗಾಯತ ಪಂಗಡಗಳು ಒಂದಾಗಬೇಕು. ಸಮಗ್ರತೆಯ ವಿಷಯ ಬಂದಾಗ ವೀರಶೈವ ಎನ್ನುವ ವೃಕ್ಷ ಹೆಮ್ಮರವಾಗಿ ಬೆಳೆಯಬೇಕು. ಮಹಾತ್ಮರನ್ನು ಒಂದು ಜಾತಿಗೆ, ಧರ್ಮಕ್ಕೆ ಸೀಮಿತ ಮಾಡಬಾರದು’ ಎಂದರು.

‘ಕಾರ್ಯಕ್ರಮಗಳಿಗೆ ಬರುವ ಅತಿಥಿಗಳು ಮತ್ತು ಸಮಾಜದ ಜನರಿಗೆ ರುದ್ರಾಕ್ಷಿ, ಭಸ್ಮ ಉಡುಗೊರೆಯಾಗಿ ಕೊಟ್ಟರೆ ಧರ್ಮದ ಬಗ್ಗೆ ಕಾಳಜಿ ಮೂಡುತ್ತದೆ. ಎಲ್ಲ ಭಕ್ತರು ಲಿಂಗ ಧರಿಸಬೇಕು. ನಾವೆಲ್ಲರೂ ಭಾರತೀಯ ಮಕ್ಕಳು, ಯಾವುದೇ ಜಾತಿ ಭೇದವಿಲ್ಲದೇ ಜೀವನ ಸಾಗಿಸಬೇಕು. ಸಮಾಜದಲ್ಲಿ ಗಂಡು ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಬೇಕು. ಜಗತ್ತಿನಲ್ಲಿ ಎಲ್ಲರಲ್ಲಿಯೂ ಸಮಾನತೆ ಕಾಣುವ ಧರ್ಮ ವೀರಶೈವ ಧರ್ಮ. ಮಕ್ಕಳಿಗೆ ಸರಿಯಾದ ಸಂಸ್ಕಾರ ಹೇಳಿಕೊಡಬೇಕು’ ಎಂದು ಹೇಳಿದರು.

ಅದ್ದೂರಿ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಯು ನಗರದ ಕೋಟೆ ರಸ್ತೆಯಿಂದ ಆರಂಭಗೊಂಡು, ಶಿವ ಚಿತ್ರಮಂದಿರ ಹತ್ತಿರದ ಮಹಾಂತಯ್ಯನಮಠ ಕಲ್ಯಾಣ ಮಂಟಪದವರೆಗೆ ಅದ್ದೂರಿಯಾಗಿ ನಡೆಯಿತು. ವಿವಿಧ ಕಲಾತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆ ಸಂಭ್ರಮ ಹೆಚ್ಚಿಸಿದರು.

ಮೈನಳ್ಳಿಯ ಸಿದ್ದೇಶ್ವರ ಶಿವಚಾರ್ಯರು, ಅರಳೆಲೆ ಹಿರೇಮಠದ ಸಿದ್ದಲಿಂಗ ಶಿವಚಾರ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜೆಡಿಎಸ್‌ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ ಕಣವಿ, ಸಮಾಜ ಅಧ್ಯಕ್ಷರಾದ ಶಂಕ್ರಪ್ಪ ಮಡಿವಾಳ, ಹೂಗಾರ ಸಮಾಜ ಅಧ್ಯಕ್ಷ ಗವಿಸಿದ್ದಪ್ಪ ಹೂಗಾರ, ಬಣಜಿಗ ಸಮಾಜ ಅಧ್ಯಕ್ಷ ಈರಣ್ಣ ಬುಳ್ಳಾ, ಸಾದರಲಿಂಗಾಯತ ಸಮಾಜದ ಅಧ್ಯಕ್ಷ ಶರಣಪ್ಪ ಗೆಜ್ಜಿ, ಜಂಗಮ ಸಮಾಜ ಅಧ್ಯಕ್ಷರಾದ ಸಿದ್ದಯ್ಯ ಹಿರೇಮಠ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮೊರಬನಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕಾಶ್ಮೀರದಿಂದ ಶ್ರೀಲಂಕಾದಲ್ಲಿರುವ ರೇಣುಕಾ ನದಿಯವರೆಗೆ ರೇಣುಕಾಚಾರ್ಯರ ಜಯಂತಿ ಆಚರಿಸಲಾಗುತ್ತದೆ. ಸರ್ವರ ಹಿತ ಬಯಸುವುದೇ ವೀರಶೈವರ ವಿಶಿಷ್ಟತೆಯಾಗಿದೆ.
ವಾಮದೇವ ಮಹಾಂತ ಶಿವಾಚಾರ್ಯರು
ಯಮ್ಮಿಗನೂರಿನ ಹಂಪಿ ಸಾವಿರದೇವರಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT