ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಭಾ ಶೋಧಕ್ಕೆ ಜಿಲ್ಲೆಯ ಭರವಸೆಯ ‘ಮೀನುಗಳು’

ಜಿಲ್ಲಾ ಕೇಂದ್ರದಲ್ಲಿ ಈಜು ತರಬೇತಿ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಸ್ಪರ್ಧೆಗೆ ಆಯ್ಕೆ
ಪ್ರಮೋದ ಕುಲಕರ್ಣಿ
Published : 29 ಆಗಸ್ಟ್ 2024, 6:33 IST
Last Updated : 29 ಆಗಸ್ಟ್ 2024, 6:33 IST
ಫಾಲೋ ಮಾಡಿ
Comments

ಕೊಪ್ಪಳ: ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ವೃತ್ತಿಪರ ತರಬೇತಿ ಆರಂಭವಾದ ಆರು ತಿಂಗಳಲ್ಲಿಯೇ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಾ ಶೋಧ ಮುಕ್ತ ಈಜು ಸ್ಪರ್ಧೆಗಳ ‘ಪರೀಕ್ಷೆ’ಗೆ ನಗರದ ಈಜುಪಟುಗಳು ಆಯ್ಕೆಯಾಗಿದ್ದಾರೆ.

ಭವಿಷ್ಯದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಈಜುಪಟುಗಳಲ್ಲಿನ ಪ್ರತಿಭೆ ಶೋಧಿಸಲು ಪ್ರತಿವರ್ಷವೂ ಡಿಎಎಂ ಅಕ್ವೆಟಿಕ್‌ ಸಂಸ್ಥೆ ಬೆಂಗಳೂರಿನ ಕೆ.ಆರ್‌. ಪುರಂನಲ್ಲಿರುವ ತನ್ನ ಈಜುಕೊಳದಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಈ ಬಾರಿ ಸೆ. 1ರಂದು ವಿವಿಧ ವಿಭಾಗಗಳಲ್ಲಿ ಜರುಗಲಿದೆ.

ಕೊಪ್ಪಳದ ಎಸ್‌ಎಫ್‌ಎಸ್‌ ಶಾಲೆಯ ಪ್ರತ್ಯುಷಾ, ವಿರಾಟ್ ಪೊಲೀಸ್‌ ಪಾಟೀಲ (25 ಮೀ. ಫ್ರೀಸ್ಟೈಲ್‌, 50 ಮೀ. ಫ್ರೀಸ್ಟೈಲ್‌, 50 ಮೀ. ಕಿಕ್‌ಬೋರ್ಡ್‌), ಗವೀಶ ಯಲಿಗಾರ, ಯಶ್ವಿತ್‌, ಶಾರದಾ ಇಂಟರ್‌ನ್ಯಾಷನಲ್‌ ಶಾಲೆಯ ಪ್ರಣವ್‌ ನಾಗೋಜಿ, ಶಿವಶಾಂತವೀರ ಶಾಲೆಯ ನಯನ್ ಕೊಪ್ಪಳ (25 ಮೀ. ಫ್ರೀಸ್ಟೈಲ್‌, 50 ಮೀ. ಫ್ರೀಸ್ಟೈಲ್‌, 25 ಮೀ. ಬ್ಯಾಕ್‌ಸ್ಟೋಕ್‌), ಎಸ್‌ಎಫ್‌ಎಸ್‌ ಶಾಲೆಯ ಶೌರ್ಯ ಪೊಲೀಸ್‌ ಪಾಟೀಲ (25 ಮೀ. ಫ್ರೀಸ್ಟೈಲ್‌, 50 ಮೀ. ಫ್ರೀಸ್ಟೈಲ್‌, 25 ಮೀ., 25 ಮೀ. ಬಟರ್‌ಫ್ಲೈ) ಮತ್ತು ಶಾರದಾ ಇಂಟರ್‌ನ್ಯಾಷನಲ್‌ ಶಾಲೆಯ ಸಿದ್ದಾರ್ಥ ವೀರಪ್ಪ ನಾಗೋಜಿ (25 ಮೀ. ಫ್ರೀಸ್ಟೈಲ್‌ ಹಾಗೂ 25 ಮೀ., ಕಿಕ್‌ಬೋರ್ಡ್‌) ವಿಭಾಗಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಒಬ್ಬರಿಗೆ ಗರಿಷ್ಠ ಮೂರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.

ಒಂದು ವರ್ಷದ ಹಿಂದೆ ಜಿಲ್ಲಾ ಕ್ರೀಡಾಂಗಣದ ಈಜುಕೊಳದ ನೀರು ಪಾಚುಗಟ್ಟಿ ಹಸಿರು ಬಣ್ಣಕ್ಕೆ ತಿರುಗಿತ್ತು. ನಿರ್ವಹಣೆ ಕೊರತೆಯೂ ಇದ್ದ ಕಾರಣ ಬಹಳಷ್ಟು ಸಂಖ್ಯೆಯಲ್ಲಿ ಮಕ್ಕಳು ತರಬೇತಿಗೆ ಬರುತ್ತಿರಲಿಲ್ಲ. ಆರೇಳು ತಿಂಗಳ ಹಿಂದಿನಿಂದ ಈಜುಕೊಳಕ್ಕೆ ಕಾಯಕಲ್ಪ ನೀಡಿ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ವೃತ್ತಿಪರ ತರಬೇತುದಾರ ವೆಂಕಟೇಶ ಹೆಗಡೆ ಮಕ್ಕಳಿಗೆ ಈಜು ಕಲಿಕೆಯ ಕೌಶಲ ಹೇಳಿಕೊಡುತ್ತಿದ್ದಾರೆ. ಇದರಿಂದಾಗಿ ನಗರದ ಎಂಟು ಈಜುಪಟುಗಳು ಪ್ರತಿಭಾ ಪರೀಕ್ಷೆ ಶೋಧಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಈಗ ಸ್ಪರ್ಧೆಗೆ ಆಯ್ಕೆಯಾಗಿರುವ ಮಕ್ಕಳಲ್ಲಿ ಹಲವರು ಈಗಾಗಲೇ ಆಹ್ವಾನಿತ ಟೂರ್ನಿಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ. ಜಿಲ್ಲಾಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಭಾಗಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈಜು ಚಟುವಟಿಕೆ ಸಕ್ರಿಯವಾಗಿರಲಿಲ್ಲ. ಸೌಲಭ್ಯವಿದ್ದರೂ ಬಳಕೆಯಾಗಿರಲಿಲ್ಲ. ಈಗ ಇರುವ ಸೌಲಭ್ಯ ಬಳಸಿಕೊಂಡು ಮಕ್ಕಳು ನಿರಂತರವಾಗಿ ಅಭ್ಯಾಸ ಮಾಡಿ ಪ್ರತಿಭಾ ಶೋಧದಲ್ಲಿ ಪಾಲ್ಗೊಳ್ಳಲು ಬೇಕಾದ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ.

ಇದಕ್ಕಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಿಬ್ಬಂದಿ ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಈಜು ಕಲಿಯಲು ಆಸಕ್ತಿ ಇರುವ ಮಕ್ಕಳನ್ನು ತರಬೇತಿಗೆ ಕಳುಹಿಸುವಂತೆ ಮನವಿ ಮಾಡಿದ್ದರು. ಕೆಲ ಪೋಷಕರು ಸ್ವಯಂಪ್ರೇರಿತ ಆಸಕ್ತಿಯಿಂದಾಗಿ ತರಬೇತಿಗೆ ಕರೆದುಕೊಂಡು ಬರುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಭರವಸೆಯ ಈಜುಕೊಳದಲ್ಲಿ ಮೀನುಗಳ ವೇಗದಲ್ಲಿಯೇ ಹೆಚ್ಚುವ ಈಜುಪಟುಗಳು ಸಂಖ್ಯೆ ಹೆಚ್ಚಾಗುತ್ತದೆ. ಆಗ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳ ನಿರೀಕ್ಷೆಯನ್ನೂ ಮಾಡಬಹುದು.

ಮಗಳಿಗೆ ಐದು ತಿಂಗಳ ಹಿಂದೆ ಮೊದಲ ಸಲ ಈಜು ಕಲಿಕೆ ತರಬೇತಿ ಆರಂಭಿಸಿರುವೆ. ನಿತ್ಯ ಪ್ರಗತಿ ಹೊಂದುತ್ತಿದ್ದಾಳೆ. ಶಾಲೆಯಿಂದಲೂ ಸಹಕಾರ ಸಿಗುತ್ತಿದೆ. ವೃತ್ತಿಪರ ಈಜುಪಟು ಮಾಡುವ ಆಸೆಯಿದೆ.
–ಬಸವಣ್ಣಪ್ಪ ಪಾಟೀಲ, ಪ್ರತ್ಯುಷಾ ತಂದೆ
ಬೆಂಗಳೂರಿನಲ್ಲಿ ನಡೆಯುವ ಪ್ರತಿಭಾ ಶೋಧದಲ್ಲಿ ಮೂರು ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದೇನೆ. ಹಿಂದೆ ಜಿಲ್ಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪದಕ ಜಯಿಸಿದ್ದೆ. ಮುಂದೆಯೂ ಪದಕ ಗೆಲ್ಲುವೆ.
–ಗವೀಶ ಯಲಿಗಾರ, ಈಜುಪಟು
ಆರು ತಿಂಗಳ ಹಿಂದಿನಿಂದ ಮಕ್ಕಳಿಗೆ ಉತ್ತಮ ತರಬೇತಿ ಲಭಿಸುತ್ತದೆ. ಮಕ್ಕಳನ್ನು ವೃತ್ತಿಪರ ಈಜುಪಟುಗಳನ್ನಾಗಿ ಮಾಡುವ ಆಸೆಯಿದೆ. ಅವರು ಹೇಗೆ ಪ್ರದರ್ಶನ ತೋರುತ್ತಾರೆ ಹಾಗೆ ಪ್ರೋತ್ಸಾಹ ನೀಡುತ್ತೇನೆ.
–ಡಾ. ಪ್ರಸಾದ್‌ ಪೊಲೀಸ್‌ ಪಾಟೀಲ, ಪೋಷಕ

‘ದೈಹಿಕ ಕ್ಷಮತೆಗೂ ಬೇಕು ಈಜು‘

ಕ್ರೀಡಾ ಚಟುವಟಿಕೆಗೆ ಮಾತ್ರವಲ್ಲ; ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಕೂಡ ನಿತ್ಯ ಈಜುವುದು ಅಗತ್ಯವಾಗಿದೆ. ಅತಿಯಾದ ಬೊಜ್ಜು ಹೊಂದಿರುವವರು ಈಜು ರೂಢಿಸಿಕೊಂಡರೆ ತೆಳ್ಳಗಾಗಬಹುದು ಎನ್ನುವುದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಹೇಳಿದರು.

‘ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ವೃತ್ತಿಪರವಾಗಿ ಈಜುಕಲಿಯಲು ಬರುತ್ತಿದ್ದಾರೆ. ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯವಾಗಿ ಇರುವ ಸರ್ಕಾರದ ಈಜುಕೇಂದ್ರದ ಸೌಲಭ್ಯ ಪಡೆದುಕೊಳ್ಳಬೇಕು’ ಎಂದು ಅವರು ಕೋರಿದರು.

ಇಂದು ರಾಷ್ಟ್ರೀಯ ಕ್ರೀಡಾದಿನ

ಹಾಕಿ ಮಾಂತ್ರಿಕ ಮೇಜರ್‌ ಧ್ಯಾನಚಂದ್‌ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಆ. 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಧ್ಯಾನಚಂದ್‌ ತಮ್ಮ ಕ್ರೀಡಾ ವೃತ್ತಿ ಬದುಕಿನಲ್ಲಿ ಅನೇಕ ಅಂತರರಾಷ್ಟ್ರೀಯ ಹಾಕಿ ಪಂದ್ಯಗಳನ್ನು ಆಡಿದ್ದಾರೆ. ಮೂರು ಒಲಿಂಪಿಕ್ಸ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಈ ದಿನದ ನೆನಪಿನಲ್ಲಿ ವಿವಿಧ ಕ್ರೀಡೆಗಳ ಸಾಧಕರನ್ನು ಸ್ಮರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT