ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಬಿರುಬಿಸಿಲಿನಲ್ಲಿಯೂ ಮತದಾರರ ಮತೋತ್ಸಾಹ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ. 72ರಷ್ಟು ಮತದಾನ, ಮತಗಟ್ಟೆಗೆ ಬಂದು ಹುರುಪು ತುಂಬಿದ ಹಿರಿಯರು, ಅಂಗವಿಕಲರು
Published 8 ಮೇ 2024, 5:52 IST
Last Updated 8 ಮೇ 2024, 5:52 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಜಾಪ್ರಭುತ್ವದ ಹಬ್ಬವೆಂದೇ ಹೇಳಲಾಗುವ ಮತದಾನಕ್ಕೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿರುಬಿಸಿಲಿಗೂ ಸಡ್ಡು ಹೊಡೆದ ಅಂಗವಿಕಲರು ಹಾಗೂ ಹಿರಿಯ ನಾಗರಿಕ ಮತದಾರರು ಈ ‘ಹಬ್ಬ’ದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಬೇರೆಯವರಿಗೂ ಪ್ರೇರಣೆಯಾದರು.

ಅಲ್ಲಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ಜರುಗಿತು. ಹಲವು ದಿನಗಳಿಂದ ನಿರಂತರವಾಗಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಲೇ ಇರುವುದಿಂದ ಇದು ಮತದಾನದ ಮೇಲೂ ಪರಿಣಾಮ ಬೀರಬಹುದು ಎನ್ನುವ ಆತಂಕ ಕಾಡಿತ್ತು. ಆದರೆ ಮತದಾರರು ತಮ್ಮ ಹಕ್ಕು ಚಲಾಯಿಸುವಲ್ಲಿ ಹಿಂದೆ ಬೀಳಲಿಲ್ಲ. ಹೀಗಾಗಿ ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟು ಶೇ 72ರಷ್ಟು ಮತದಾನವಾಯಿತು. 2019ರ ಚುನಾವಣೆಯಲ್ಲಿ ಶೇ 70ರಷ್ಟು ಮತದಾನವಾಗಿತ್ತು.

ನಿಗದಿಯಂತೆ 7 ಗಂಟೆಗೆ ಮತದಾನ ಆರಂಭವಾಯಿತಾದರೂ ಬೆಳಿಗ್ಗೆ ಬಿಸಿಲಿನ ಪ್ರಮಾಣ ಕಡಿಮೆಯಿರುವ ಕಾರಣ ಆಗಲೇ ಹೆಚ್ಚು ಮತದಾನವಾಗಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ, ಮತದಾನ ಆರಂಭವಾದ ಮೊದಲ ಎರಡು ತಾಸಿನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರವಾರು ಒಟ್ಟು ಶೇ 8.79ರಷ್ಟು ಮಾತ್ರ ಜನ ಹಕ್ಕು ಚಲಾಯಿಸಿದ್ದರು.

ಹಂತಹಂತವಾಗಿ ಮತದಾನ ಪ್ರಮಾಣ ಹೆಚ್ಚಾಗುತ್ತಲೇ ಹೋಯಿತು. ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 24.47 ಮತ್ತು ಮಧ್ಯಾಹ್ನ ಒಂದು ಗಂಟೆಗೆ ಹೊತ್ತಿಗೆ ಶೇ 42.64ರಷ್ಟು ಮತದಾನವಾಗಿತ್ತು. ಬಳಿಕ ಬಿಸಿಲಿನ ಪ್ರಮಾಣ ಹೆಚ್ಚಾದರೂ ಈ ಅವಧಿಯಲ್ಲಿಯೇ ಶೇ 12.25ರಷ್ಟು ಮತದಾನ ಪ್ರಮಾಣವೂ ಹೆಚ್ಚಾಗಿದ್ದು ವಿಶೇಷವಾಗಿತ್ತು. ಸಂಜೆ ಐದು ಗಂಟೆಗೆ ಶೇ 65.9ರಷ್ಟು ಮತದಾನವಾಗಿದ್ದರೂ ಬಿಸಿಲಿನ ತಾಪ ಕಡಿಮೆಯಾದ ಬಳಿಕವೂ ಹೆಚ್ಚು ಜನ ಮತಗಟ್ಟೆಗಳತ್ತ ಸಾಲುಸಾಲಾಗಿ ಬರುತ್ತಿದ್ದ ಚಿತ್ರಣ ಕಂಡು ಬಂದಿತು. ಇಲ್ಲಿಗೆ ಸಮೀಪದ ಭಾಗ್ಯನಗರದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮತದಾನದ ಸಮಯ ಮುಗಿಯಲು ಹತ್ತು ನಿಮಿಷಗಳಷ್ಟೇ ಬಾಕಿ ಉಳಿದಾಗಲೂ ನೂರಾರು ಮತದಾರರು ಇದ್ದರು. ಆಗ ಮತದಾರರಿಗೆ ಚೀಟಿ ನೀಡಿ ಉಳಿದವರನ್ನು ಹೊರಗಡೆ ಕಳುಹಿಸಲಾಯಿತು.

ಉತ್ಸಾಹ: ಒಂದೆಡೆ ಯುವಕರು ಮತ್ತು ಮಧ್ಯ ವಯಸ್ಕರು ತಮ್ಮ ಹಕ್ಕು ಚಲಾಯಿಸಿದರೆ, ವೃದ್ಧರೂ ಮತಗಟ್ಟೆಗೇ ಬಂದು ಮತದಾನ ಮಾಡಿ ಗಮನ ಸೆಳೆದರು.  85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತ ಹಾಕಲು ಅವಕಾಶವಿದ್ದರೂ ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾಮಗಳು ಮತ್ತು ಯಲಬುರ್ಗಾದಲ್ಲಿ ಹಿರಿಯರು ವೀಲ್‌ಚೇರ್‌ನಲ್ಲಿ ಬಂದು ಹುಮ್ಮಸ್ಸು ತೋರಿಸಿದರು. 

ಕೊಪ್ಪಳ ಲೋಕಸಭಾ ಚುನಾವಣಾ ಐಕಾನ್‌ ಆಗಿರುವ ಡಾ.ಶಿವಕುಮಾರ್ ಮಾಲಿಪಾಟೀಲ ಅವರ ತಾಯಿ 88 ವರ್ಷ ಸಿದ್ಧಮ್ಮ ಕಳಕನಗೌಡ ಮಾಲಿಪಾಟೀಲ ಯಲಬುರ್ಗಾದಲ್ಲಿ ಮತ ಚಲಾಯಿಸಿದರು. ಕನಕಗಿರಿಯ ಮಾದರಿ ಮತಗಟ್ಟೆಯಲ್ಲಿ ಅಂಗವಿಕಲ ನಾಗರಾಜ ನಾಯಕ ಕೂಡ ಹುಮ್ಮಸ್ಸಿನಿಂದ ಮತದಾನ ಮಾಡಿದ್ದು ಕಂಡುಬಂದಿತು.

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿನ ಮಾದರಿ ಮತಗಟ್ಟೆಯೊಂದರಲ್ಲಿ ಮತಚಲಾಯಿಸಲು ಸರತಿಯಲ್ಲಿ ನಿಂತಿದ್ದ ಮಹಿಳೆಯರು
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿನ ಮಾದರಿ ಮತಗಟ್ಟೆಯೊಂದರಲ್ಲಿ ಮತಚಲಾಯಿಸಲು ಸರತಿಯಲ್ಲಿ ನಿಂತಿದ್ದ ಮಹಿಳೆಯರು
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪಿನ ಸಖಿ ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದ ಸ್ಪೂರ್ತಿ ಎಂಬ ಯುವತಿ
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪಿನ ಸಖಿ ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದ ಸ್ಪೂರ್ತಿ ಎಂಬ ಯುವತಿ
ಯಲಬುರ್ಗಾದಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ ಸಿದ್ಧಮ್ಮ ಕಳಕನಗೌಡ ಮಾಲಿಪಾಟೀಲ
ಯಲಬುರ್ಗಾದಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ ಸಿದ್ಧಮ್ಮ ಕಳಕನಗೌಡ ಮಾಲಿಪಾಟೀಲ

ಮತದಾರರಿಗೆ ತಂಪು ಪಾನೀಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಕಾವು ಏರುತ್ತಲೇ ಇರುವುದರಿಂದ ಮತದಾರರನ್ನು ಸೆಳೆಯಲು ‌ಜಿಲ್ಲಾಡಳಿತ ವಿಭಿನ್ನ ಯೋಜನೆ ರೂಪಿಸಿತ್ತು. ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪ್ ಗ್ರಾಮದ ಸಖಿ ಮತಗಟ್ಟೆಯಲ್ಲಿ ಸ್ವಾಗತ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.  ಬಿಸಿಲಿನಲ್ಲಿ ಬಂದವರಿಗೆ ಪಾನೀಯದ ಜೊತೆಗೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಕೂಡ ಮಾಡಲಾಗಿತ್ತು. ಪಾನೀಯ ಕೊಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಇದು ಮತದಾರರು ಹಾಗೂ ಅವರ ಜೊತೆ ಬರುತ್ತಿರುವ ಚಿಕ್ಕ ಮಕ್ಕಳ ಖುಷಿಗೆ ಕಾರಣವಾಯಿತು.

ಶತಾಯುಷಿ ಮತದಾನ ಕುಕನೂರು ತಾಲ್ಲೂಕಿನ ಕುದುರಿಮೋತಿ ಗ್ರಾಮದಲ್ಲಿ 105 ವರ್ಷದ ಅಜ್ಜ ಮತಗಟ್ಟೆಗೆ ಬಂದು ಮತದಾನ ಮಾಡಿದ್ದು ಗಮನ ಸೆಳೆಯಿತು. ಶತಾಯುಷಿ ನೀಲಕಂಠಯ್ಯ ಹಿರೇಮಠ ಗ್ರಾಮದ ಸರಕಾರಿ ಶಾಲೆಯಲ್ಲಿನ ಬೂತ್ ನಂಬರ್ 3ರಲ್ಲಿ ಹಕ್ಕು ಚಲಾಯಿಸಿದರು. ಸಂಬಂಧಿ ಸಹಾಯದೊಂದಿಗೆ ಮತಗಟ್ಟೆಗೆ ಬಂದ ಅಜ್ಜಿ ಆಗಮಿಸಿ ಮತ ಚಲಾಯಿಸಿದರು. ಈ ಬಾರಿ 85‌ ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಆದರೂ ಇವರು ಮತಗಟ್ಟೆಗೆ ಬಂದು ಹುಮ್ಮಸ್ಸು ಮೆರೆದರು.   

ಮೊಬೈಲ್‌ನಲ್ಲಿ ಮತದಾನ ರೆಕಾರ್ಡ್ ಮತಗಟ್ಟೆ ಒಳಗೆ ಮೊಬೈಲ್ ‌ಬಳಕೆಗೆ ನಿಷೇಧವಿದ್ದರೂ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಗೆ ಯಾಮಾರಿಸಿ ತಾನು ಮತದಾನ ಮಾಡಿದ ದೃಶ್ಯ ರೆಕಾರ್ಡ್ ಮಾಡಿಕೊಂಡಿದ್ದಾನೆ. ಮತದಾನದ ಬಳಿಕ ಅದನ್ನು ವ್ಯಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿರುವುದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಕಾರಟಗಿ ತಾಲ್ಲೂಕು ಹಾಲಸಮುದ್ರ ಗ್ರಾಮದ ಬೂತ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮತದಾನದ ಪ್ರಮುಖ ಮಾಹಿತಿಗಳು * ಜಿಲ್ಲೆಯಾದ್ಯಂತ ಗಮನ ಸೆಳೆದ ಪಿಂಕ್‌ ಮತಗಟ್ಟೆಗಳು * ಹಕ್ಕು ಚಲಾಯಿಸಿ ಸಂಭ್ರಮಿಸಿದ ನರೇಗಾ ಕಾರ್ಮಿಕರು * ಕುಷ್ಟಗಿ ತಾಲ್ಲೂಕಿನ ವಿಠಲಾಪೂರದಲ್ಲಿ ಮತಗಟ್ಟೆಗೆ ಬಾರದ ಮತದಾರರು * ಗಂಗಾವತಿಯಲ್ಲಿ ಸೈಕಲ್‌ ರಿಕ್ಷಾದಲ್ಲಿ ಬಂದು ಹಕ್ಕು ಚಲಾಯಿಸಿದ ದಂಪತಿ * ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ ಎಸ್‌.ಪಿ. ಯಶೋಧಾ ವಂಟಗೋಡಿ ಮತದಾನ. * ಸಖಿ ಮತಗಟ್ಟೆಗೆ ತೆರಳಿ ಯುವತಿಯರನ್ನು ಮತದಾನಕ್ಕೆ ಹುರುದುಂಬಿಸಿದ ಎಸ್‌.ಪಿ. ಯಶೋಧಾ * ಕೊಪ್ಪಳ ತಾಲ್ಲೂಕಿನ ಕಾತರಕಿ ಗುಡ್ಲಾನೂರು ಗ್ರಾಮದಲ್ಲಿ ಮತದಾನ ಮಾಡಿದ ಲಿಂಗತ್ವ ಅಲ್ಪಸಂಖ್ಯಾತೆ ಕೃತಿಕಾ ನಡುವಲಮನಿ. * ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪ್‌ ಸಖಿ ಮತಗಟ್ಟೆಯಲ್ಲಿ ಮತದಾರರಿಗೆ ತಂಪು ಪಾನೀಯ ವಿತರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT