ಯಲಬುರ್ಗಾ: ಸರ್ವರಿಗೆ ಸಮಪಾಲು ಮತ್ತು ಸಮಬಾಳ್ವೆಗೆ ಅವಕಾಶ ನೀಡಿದ ಸಂವಿಧಾನಕ್ಕೆ ಪ್ರತಿಯೊಬ್ಬರು ಬದ್ಧವಾಗಿರಬೇಕು. ಕಾನೂನುಬದ್ಧವಾಗಿ ನಡೆದುಕೊಳ್ಳುವವರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ ಹೇಳಿದರು.
ತಾಲ್ಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಅವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ವಿದ್ಯಾ ಪ್ರಸಾರ ಕಾರ್ಯಕ್ರಮ ಆಯೋಜಿಸುತ್ತಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಕ್ಕಳ ಹಕ್ಕುಗಳು, ದೌರ್ಜನ್ಯ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಬಾಲ್ಯವಿವಾಹ ನಿಷೇಧ, ಫೋಕ್ಸೊ ಸೇರಿದಂತೆ ವಿವಿಧ ಕಾಯ್ದೆಗಳ ಬಗ್ಗೆ ಜನರು ಮತ್ತು ಮಕ್ಕಳು ತಿಳಿದುಕೊಳ್ಳಬೇಕು. ಇದರಿಂದ ದೌರ್ಜನ್ಯ ಮತ್ತು ದಬ್ಬಾಳಿಕೆ ತಡೆಗಟ್ಟಬಹುದು ಎಂದು ಹೇಳಿದರು.
ವಕೀಲ ರಾಜಶೇಖರ ನಿಂಗೋಜಿ ಮಾತನಾಡಿ, ದೈನಂದಿನ ಜೀವನಕ್ಕೆ ಸಹಕಾರಿಯಾಗುವ ಹಲವು ಕಾನೂನುಗಳಿವೆ. ಅವುಗಳನ್ನು ತಿಳಿದುಕೊಳ್ಳುವುದು ಅಗತ್ಯವಿದೆ. ವಿಶೇಷವಾಗಿ ಮೋಟಾರ ವಾಹನ ಕಾಯ್ದೆ ಬಗ್ಗೆ ಯುವಕರು ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು.
ಮುಖ್ಯಶಿಕ್ಷಕ ಬಸವರಾಜ ಕರಾಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳಕಪ್ಪ ಬೆಟಿಗೇರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ಯಾಮೀದ್‍ಸಾಬ ಮುಲ್ಲಾರ, ಗೌಡಪ್ಪ ಗೌಡ ಬಲಕುಂದಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಕಳಕಮ್ಮ ಕುರಿ, ದೇವಮ್ಮ ರಾಠಿ, ಶಿಕ್ಷಕ ಬಸವರಾಜ ಕೊಂಡಗುರಿ ಇದ್ದರು. ಸಿಬ್ಬಂದಿ ಬಸವರಾಜ ಪಲ್ಲೇದ, ರಾಘವೇಂದ್ರ ಕೊಳಿಹಾಳ, ವಿನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.