ಬುಧವಾರ, ಏಪ್ರಿಲ್ 14, 2021
23 °C
‘ಒಂದು ಜಿಲ್ಲೆ ಒಂದು ಬೆಳೆ’- ಪೇರಲ ಹಣ್ಣಿನ ತಾಂತ್ರಿಕ ಕಾರ್ಯಾಗಾರ: ಸಚಿವ ಆರ್‌.ಶಂಕರ್‌ ಹೇಳಿಕೆ

ರೈತರ ಬೆಳೆಗೆ ಉತ್ತಮ ಮಾರುಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಪ್ರಧಾನಮಂತ್ರಿಗಳ ಆತ್ಮನಿರ್ಭರ್ ಭಾರತ ಯೋಜನೆ ಅಡಿಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ‘ಒಂದು ಜಿಲ್ಲೆ ಒಂದು ಬೆಳೆ’ ಯೋಜನೆಯಲ್ಲಿ ಸೀಬೆ ಬೆಳೆಯನ್ನು ಜಾರಿಗೆ ತರಲಾಗಿದೆ’ ಎಂದು ರಾಜ್ಯ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್.ಶಂಕರ್ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ (ಜಿ.ಪಂ.), ಜಿಲ್ಲಾ ಕೈಗಾರಿಕೆ ಇಲಾಖೆ, ಕೊಪ್ಪಳ ಹಾಗೂ ಕೆಪೆಕ್, ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತೋಟಗಾರಿಕೆ ಇಲಾಖೆಯಿಂದ ಜಿಲ್ಲೆಗೆ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಪೇರಲ ಬೆಳೆ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಪೇರಲ ಬೆಳೆಯುವ ಕ್ಷೇತ್ರವನ್ನು ಆಧರಿಸಿ ಬೆಳೆ ನಿರ್ಧರಿಸಲಾಗಿದೆ. ಹಾಗೆಯೇ ರೈತರು ಬೆಳೆದ ಬೆಳೆಗೆ ಉತ್ತಮ ವೇದಿಕೆ, ಮಾರುಕಟ್ಟೆ ಒದಗಿಸುವುದು ಇಲಾಖೆಯ ಉದ್ದೇಶ’ ಎಂದು ಅವರು
ತಿಳಿಸಿದರು.

ಈ ಯೋಜನೆಯಡಿ ಆಯ್ಕೆಯಾದ ಬೆಳೆಗೆ ಸಾಮಾನ್ಯ ಮೂಲಸೌಕರ್ಯ, ಬ್ರಾಂಡಿಂಗ್, ಸಂಸ್ಕರಣೆ ಮತ್ತು ರಫ್ತು ಮಾರುಕಟ್ಟೆ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ. ರೈತರು ಈ ತರಬೇತಿ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಆಯ್ಕೆಯಾದ ಬೆಳೆ ಮಾತ್ರವಲ್ಲದೆ, ಕ್ರಮಬದ್ಧವಾಗಿ ಬೆಳೆಯುವ ಇತರೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗು ಕೂಡ ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನ ಮುಂತಾದ ಸೌಲಭ್ಯ ಸಿಗುತ್ತವೆ. ಯಾವುದೇ ಬೆಳೆಯನ್ನು ಬೆಳೆಯುವುದರೊಂದಿಗೆ ಅದರ ಮೌಲ್ಯವರ್ಧನೆಗೂ ಯೋಜನೆ ರೂಪಿಸಬೇಕು. ಹೊಸ ತಳಿ, ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕು. ರೈತರು ನೇರ ಮಾರುಕಟ್ಟೆಯ ಲಾಭವನ್ನು ಪಡೆಯಬೇಕು ಎಂದು ಅವರು ಹೇಳಿದರು.

ಜಿಲ್ಲೆಯ ಬಸಾಪುರ ಕೈಗಾರಿಕಾ ವಲಯದಲ್ಲಿ ಪೇರಲ ಬೆಳೆಯ ಸಂಸ್ಕರಣೆ ಕ್ಲಸ್ಟರ್‌ ಸ್ಥಾಪಿಸಲು ಜಿಲ್ಲಾಧಿಕಾರಿಗಳು ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ,‘ಜಿಲ್ಲಾಡ
ಳಿತದ ಸಹಕಾರದಿಂದ ರೈತರ ಅನುಕೂಲಕ್ಕಾಗಿ ಸರ್ಕಾರದಿಂದ ಸಿಗುವ ಸಬ್ಸಿಡಿ, ಸೌಲಭ್ಯ ಪಡೆಯಬಹುದು. ಬ್ಯಾಂಕ್‌ನಿಂದ ಸಹಾಯಧನ ಪಡೆಯಲು ತೊಂದರೆ ಉಂಟಾದಲ್ಲಿ ಅಥವಾ ಬ್ಯಾಂಕ್ ಅಧಿಕಾರಿಗಳಿಂದ ಸಮಸ್ಯೆಯಾದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಿದಲ್ಲಿ ಅಗತ್ಯ ಸಹಾಯ ಮಾಡಲಾಗುವುದು’ ಎಂದರು.
ನಂತರ ಪೇರಲ ಬೆಳೆಗೆ ಸಂಬಂಧಿಸಿದಂತೆ ಕೊಪ್ಪಳ ಪೇರಲ ಲಾಂಛನವನ್ನು, ಪೇರಲ ಬೆಳೆ ಕುರಿತು ತಾಂತ್ರಿಕ ಕೈಪಿಡಿಯನ್ನು, ಕೊಪ್ಪಳ ಪೇರಲ ಬಾಕ್ಸ್‌ ಅನ್ನು ಸಚಿವರು ಬಿಡುಗಡೆಗೊಳಿಸಿದರು.

ಕಾರ್ಯಾಗಾರದಲ್ಲಿ ರೈತರಿಗೆ ಕೃಷಿ ವಿಜ್ಞಾನಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ತರಬೇತಿ
ನೀಡಿದರು.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಶರಣು ಭೀಮಣ್ಣ ತಳ್ಳಿಕೇರಿ, ಕೆಡಿಪಿ ಸದಸ್ಯ ಅಮರೇಶ ಕರಡಿ, ಕಲಬುರಗಿ ವಿಭಾಗದ ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ಜಂಟಿ ಕೃಷಿ ನಿರ್ದೇಶಕ ಶಿವಕುಮಾರ,
ಕೆಪೆಕ್ ಸಂಸ್ಥೆಯ ಉಪ ನಿರ್ದೇಶಕ ವೆಂಕಟೇಶ ಕೃಷ್ಣ, ಧಾರವಾಡ ಹಾಗೂ ರಾಯಚೂರು ಕೃಷಿ ವಿವಿ ಕೃಷಿ ವಿಜ್ಞಾನಿಗಳು, ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳು, ರೈತರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.