ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಹೆಸರಲ್ಲಿ ₹ 1,000 ನಿಶ್ಚಿತ ಠೇವಣಿ: ದಾಖಲಾತಿ ಹೆಚ್ಚಿಸಲು ಶಿಕ್ಷಕನ ಶ್ರಮ

Published 13 ಜೂನ್ 2024, 23:58 IST
Last Updated 13 ಜೂನ್ 2024, 23:58 IST
ಅಕ್ಷರ ಗಾತ್ರ

ಅಳವಂಡಿ (ಕೊಪ್ಪಳ ಜಿಲ್ಲೆ): ವಿದ್ಯಾರ್ಥಿಗಳನ್ನು ಸೆಳೆಯಲು ಈಗ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಖಾಸಗಿ ಕಾನ್ವೆಂಟ್‌ ಶಾಲೆಗಳ ವಾಹನಗಳು ಓಡಾಡುತ್ತಿವೆ. ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿಯ ರೋಟರಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಗುರುಸ್ವಾಮಿ ಅವರು ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆ ತರಲು ಮಕ್ಕಳ ಹೆಸರಿನಲ್ಲಿ ತಲಾ ₹ 1 ಸಾವಿರ ಠೇವಣಿ ಇಡುವ ಮೂಲಕ ಖಾಸಗಿ ಶಾಲೆಗಳಿಗೆ ಸವಾಲು ಒಡ್ಡುತ್ತಿದ್ದಾರೆ. 

ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಗುರುಸ್ವಾಮಿ ಅವರು ಸ್ವಂತ ಹಣದಿಂದ ತಲಾ ₹ 1 ಸಾವಿರ ನಿಶ್ಚಿತ ಠೇವಣಿ ಇರಿಸುವ ಮೂಲಕ ಮೂಲಕ 10 ವರ್ಷಗಳ ಅವಧಿಯ ಬಾಂಡ್ ಮಾಡಿಸಿಕೊಡುತ್ತಿದ್ದಾರೆ. ಸುಮಾರು 25 ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಯ ಸಬಲೀಕರಣ ಹಾಗೂ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೂ 27 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಗುರುಸ್ವಾಮಿ ನಾಲ್ಕು ವರ್ಷಗಳಿಂದ ಶಾಲೆಯ ಪ್ರತಿ ಮಗುವಿಗೂ ಪ್ರತಿ ವರ್ಷ ಸ್ವಂತ ಹಣದಿಂದ ಉಚಿತವಾಗಿ ಸ್ಕೂಲ್ ಬ್ಯಾಗ್, ನೋಟ್‌ಬುಕ್‌, ಪೆನ್, ಪೆನ್ಸಿಲ್ ಹಾಗೂ ಒಂದು ಜೊತೆ ಸಮವಸ್ತ್ರ ಕೂಡ ನೀಡುತ್ತಿದ್ದಾರೆ. ಸ್ವಂತ ಹಣದಿಂದ ಸುಣ್ಣ ಬಣ್ಣ ಖರೀದಿಸಿ, ಶ್ರಮದಾನ ಮಾಡುವ ಮೂಲಕ ಶಾಲೆಯನ್ನು ಅಂದಗೊಳಿಸಿದ್ದಾರೆ.

ಕೋವಿಡ್ ಬಳಿಕ ಹಲವು ಕಡೆ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿದಿತ್ತು. ಆಗ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವುದೇ ಸವಾಲಾಗಿ ಪರಿಣಮಿಸಿತ್ತು. ಹಾಗಾಗಿ ಶಾಲೆಯಲ್ಲಿ ಅವರು ಅನೇಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ದಾಖಲಾತಿ ಹೆಚ್ಚಳಕ್ಕಾಗಿ ಶ್ರಮಿಸುತ್ತಿದ್ದಾರೆ. ಗುರುಸ್ವಾಮಿ ಅವರು ಸರ್ಕಾರಿ ಶಾಲೆಗಳನ್ನು ಅಂದಗೊಳಿಸಲು ಶ್ರಮಿಸುತ್ತಿರುವ ಕಲರವ ಶಿಕ್ಷಕರ ಬಳಗದ ಸದಸ್ಯರಾಗಿದ್ದು, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ತಂಡ ನೀಡುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ನಮಗೆ ಅನ್ನದಾತರಾಗಿರುವ ಮಕ್ಕಳು ಹಾಗೂ ಶಾಲೆಯ ಸೇವೆ ಮಾಡಿ ಸಂತೃಪ್ತಿ ಪಡುವುದೇ ನನ್ನ ಮುಖ್ಯ ಗುರಿ. ಇದರಿಂದ ನನಗೆ ಆತ್ಮ ತೃಪ್ತಿ ಇದೆ.
ಗುರುಸ್ವಾಮಿ ಪ್ರಭಾರ ಮುಖ್ಯಶಿಕ್ಷಕ
ನಮ್ಮ ಶಾಲೆಯ ಶಿಕ್ಷಕರು ನೀಡುವ ನಿಶ್ಚಿತ ಠೇವಣಿ ಮೊತ್ತದಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಬ್ಯಾಗ್ ನೋಟ್‌ಬುಕ್‌ ಟೀ ಶರ್ಟ್ ನೀಡಿದ್ದು ಎಲ್ಲಾ ಮಕ್ಕಳಲ್ಲಿ ಕಲಿಕೆ ವಾತಾವರಣ ಮೂಡಿಸುವಲ್ಲಿ ಸಹಕಾರಿಯಾಗುತ್ತಿದೆ.
-ಸೌಮ್ಯಾ 4ನೇ ತರಗತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT