ಭಾನುವಾರ, ಜೂನ್ 13, 2021
22 °C
ಬೆನಕನಾಳ ಭಾಗದಲ್ಲಿ ಹೂವು ಬೆಳೆಗಾರರಿಗೆ ಮತ್ತೆ ಆರ್ಥಿಕ ನಷ್ಟ; ಪರಿಹಾರದ ನಿರೀಕ್ಷೆ

ಹೂವಿನೊಂದಿಗೆ ಬಾಡುತ್ತಿದೆ ರೈತರ ಬದುಕು

ಕಿಶನರಾವ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಸಮೀಪದ ಬೆನಕನಾಳ ಭಾಗದಲ್ಲಿ ಸುಮಾರು 60 ರೈತರು 40 ಎಕರೆಯಲ್ಲಿ ಲಿಲ್ಲಿ, ಸುಗಂಧರಾಜ, ಗೈರ್ಲಾಡಿಯ, ಚೆಂಡು ಹೂವು ಬೆಳೆಯುತ್ತಿದ್ದಾರೆ. ಕೋವಿಡ್ ಕಾರಣದಿಂದಾಗಿ ಎರಡು ವಾರಗಳಿಂದ ಹೂವುಗಳು ಕೊಯ್ಲಾಗದೆ ಸಸ್ಯದಲ್ಲಿಯೇ ಕಮರಿ, ರೈತರಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದೆ.

ಸಾಮಾನ್ಯವಾಗಿ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಯನ್ನು ಬೆಳೆಯುತ್ತಿದ್ದ ಈ ಭಾಗದ ರೈತರು ಕೊಳವೆಬಾವಿಯಲ್ಲಿ ನೀರು ಕಡಿಮೆಯಾದ ಕಾರಣ ಕುಟುಂಬ ನಿರ್ವಹಣೆ ಮಾಡಿಕೊಳ್ಳುವ ದೃಷ್ಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ಹೂಬಳ್ಳಿಗಳನ್ನು ಹಾಕಿಕೊಂಡಿದ್ದಾರೆ. ಈ ಬೆಳೆಯಿಂದ ಸ್ಥಳೀಯ ಕೂಲಿ ಕಾರ್ಮಿಕರಿಗೆ ಹೂವು ಬಿಡಿಸುವಂತಹ ಕೆಲಸವೂ ದಕ್ಕುತ್ತಿತ್ತು.

‘ಹಿಂದಿನ ವರ್ಷವೂ ಲಾಕ್‌ಡೌನ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದೆವು. ಈಚೆಗೆ ಪುನಃ ಚೈತನ್ಯ ಪಡೆದುಕೊಂಡಿದ್ದೆವು. ಈ ಮಧ್ಯದಲ್ಲಿ ಸಾರಿಗೆ ಮುಷ್ಕರದಿಂದಾಗಿ ಹೂವು ಮಾರುಕಟ್ಟೆಗೆ ಸಾಗಿಸಲಾಗದೆ ತೊಂದರೆ ಅನುಭವಿಸಿದ್ದೆವು, ಈಗ ಲಾಕ್‌ಡೌನ್‌ನಿಂದ ಬದುಕು ಚಿಂತಾಜನಕವಾಗಿದೆ’ ಎಂದು ಹೂವು ಬೆಳೆಗಾರರಾದ ಉದಯಕುಮಾರ ರಾಜೂರ, ಶರಣಪ್ಪ ನಂದಾಪೂರ, ಸೋಮಪ್ಪ ಕುರಿ, ಶರಣಪ್ಪ ಈಳಗೇರ, ಹನುಮಪ್ಪ ಈಳಗೇರ ನೋವಿನಿಂದ ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರುವ ಲಿಲ್ಲಿ ಫ್ಲವರನ್ನು ಬೆನಕನಾಳ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಈ ಮೊಗ್ಗಿನಿಂದ ದೊಡ್ಡ ಪ್ರಮಾಣದಲ್ಲಿ ಹೂಮಾಲೆ ತಯಾರಿಸಲಾಗುತ್ತದೆ. ಅಲ್ಲದೆ ಮದುವೆ ಮಂಟಪಗಳಿಗೆ ಅಲಂಕಾರಗೊಳಿಸಲು ಹೆಚ್ಚಾಗಿ ಈ ಮೊಗ್ಗನ್ನೇ ಬಳಸಲಾಗುತ್ತದೆ. ಮೊಗ್ಗಿರುವಾಗ ಮಾತ್ರ ಇದಕ್ಕೆ ಬೆಲೆ, ಅರಳಿದ ನಂತರ ಈ ಹೂವಿಗೆ ಬೆಲೆಯೇ ಇಲ್ಲ. ಈ ಮೊದಲು ಲಿಲ್ಲಿ ಫ್ಲವರ್ ಬೆಳೆಯ ಪ್ರಮಾಣಕ್ಕಿಂತ ಮಾರುಕಟ್ಟೆಯಲ್ಲಿ ಬೇಡಿಕೆ ಪ್ರಮಾಣವೇ ಹೆಚ್ಚಿತ್ತು. ಹಬ್ಬ ಹರಿದಿನಗಳಲ್ಲಿ ಖರೀದಿದಾರರು ತೋಟಗಳನ್ನು ಹುಡುಕಿಕೊಂಡು ಬರುತ್ತಿದ್ದರು. ಇಲ್ಲಿನ ರೈತರು ಹುಬ್ಬಳ್ಳಿ, ಬಾಗಲಕೋಟೆ, ಇಲಕಲ್ಲ, ಗದಗ, ಬೆಳಗಾವಿ ಖರೀದಿದಾರರೊಂದಿಗೆ 30 ಮೊಗ್ಗುಗಳಿರುವ ಒಂದು ಕಟ್ಟಿಗೆ ₹8 ರಂತೆ ಒಪ್ಪಂದ ಮಾಡಿಕೊಂಡಿದ್ದರು. ಆದರೀಗ ಮಾರುಕಟ್ಟೆಗೆ ಹೂವು ಕಳಿಸಿದರೆ ಅಲ್ಲಿ ಮಾರಾಟವಾಗದಿರುವುದರಿಂದಾಗಿ ವ್ಯಾಪಾರಸ್ಥರು ಮಾರಾಟವಾದ ಹೂವಿಗೆ ಮಾತ್ರ ₹4 ರಂತೆ ನೀಡುತ್ತೇವೆ ಎನ್ನುತ್ತಿರುವ ಕಾರಣಕ್ಕೆ ಮೊಗ್ಗು ಬಿಡಿಸಿದ ಕೂಲಿಯೂ ದಕ್ಕದಂತಾಗಿದೆ. ಹೀಗಾಗಿ ಮೊಗ್ಗು ಬಿಡಿಸುತ್ತಿಲ್ಲ. ಸಸ್ಯದಲ್ಲಿಯೇ ಮೊಗ್ಗುಗಳು ಹೂವುಗಳಾಗಿ ಅರಳಿ ನಿಂತಿವೆ ಎಂದು ಕಳಕಪ್ಪ ಗೊಣ್ಣಾಗರ, ರಾಚಯ್ಯ ಹಿರೇಮಠ ನೋವು ತೋಡಿಕೊಂಡರು.

ಪ್ರತಿ ದಿನ ಪ್ರತಿ ರೈತರು 500 ರಿಂದ 700 ಲಿಲ್ಲಿ ಫ್ಲವರ್ ಕಟ್ಟುಗಳು ಕಳಿಸುತ್ತಾರೆ. ಚಳಿಗಾಲದಲ್ಲಿ 800 ರಿಂದ ₹1ಸಾವಿರ ಕಟ್ಟುಗಳು ದೊರಕುತ್ತವೆ. ದಿನದ ಆದಾಯ ಸರಾಸರಿ ಒಂದು ಸಾವಿರ ದೊರಕುತ್ತಿತ್ತು, ಆದರೆ ಕೊರೊನಾ ಕಾರಣದಿಂದ ಮಾರುಕಟ್ಟೆಯೇ ಇಲ್ಲದಂತಾಗಿದೆ’ ಎಂದು ಮಹಾಂತೇಶ, ಶರಣಪ್ಪ, ಕರಿಸಿದ್ದಪ್ಪ ರಾಜೂರ, ಉಮೇಶ, ಮಲ್ಲಪ್ಪ ನಂದಾಪೂರ ಹೇಳಿದರು.

‘ಮದುವೆ ಇಲ್ಲ, ಗೃಹಪ್ರವೇಶವಿಲ್ಲ, ಇಂತಹ ಸಮಯದಲ್ಲಿ ಹೂವಿನ ಮಾಲೆಗೆ ಬೆಲೆ ಹೇಗೆ ದೊರೆಯುತ್ತದೆ ಹೇಳಿ’ ಎಂದು ರೈತ ಉದಯಕುಮಾರ ಕೇಳುತ್ತಾರೆ.

ಈ ಗ್ರಾಮದಲ್ಲಿ ಸುಮಾರು 60 ರೈತರು 40 ಎಕರೆಯಲ್ಲಿ ಬೆಳೆಯುತ್ತಿರುವ ಸುಗಂಧರಾಜ ಹಾಗೂ ಗೈರ್ಲಾಡಿಯಾ(ಗಲಾಟೆ) ಸದ್ಯ ಗಿಡದಲ್ಲಿಯೇ ಬಾಡಿ ಒಣಗುತ್ತಿದೆ. ನೋಡಲು ಸೇವಂತಿಗೆಯಂತೆ ಕಾಣುವ ಹಾಗೂ ಆರು ತಿಂಗಳಲ್ಲಿಯೇ ಕೊಯ್ಲಿಗೆ ಬರುವ ಗೈರ್ಲಾಡಿಯಾ ಹೂವನ್ನು ಈ ಗ್ರಾಮವೊಂದರಲ್ಲೇ ನಿತ್ಯ 10 ಟನ್ ಬೆಳೆಯಲಾಗುತ್ತದೆ.

‘ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ರೈತರಾದ ಈರಪ್ಪ ಬಳಿಗಾರ, ಹನುಮಪ್ಪ ಮುಗಳಿ, ಸೋಮಪ್ಪ ಕೋರಿ, ಶರಣಪ್ಪ ಈಳಗೇರ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.