ಗುರುವಾರ , ಜೂಲೈ 2, 2020
28 °C

ಕುಷ್ಟಗಿ | ಬಡವರಿಗೆ ವಿತರಿಸಬೇಕಿದ್ದ ದಿನಸಿ ಕಿಟ್ ಗೋದಾಮಿನಲ್ಲೇ ಉಳಿಯಿತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಬಡವರಿಗೆ ವಿತರಿಸಬೇಕಿದ್ದ ದಿನಸಿ ವಸ್ತುಗಳನ್ನು ಒಳಗೊಂಡಿರುವ ನೂರಾರು ಕಿಟ್‌ಗಳು ಬಡವರಿಗೆ ತಲುಪುವ ಬದಲು ಇಲ್ಲಿಯ ತಾಲ್ಲೂಕು ಪಂಚಾಯಿತಿ ಗೋದಾಮಿನಲ್ಲಿಯೇ ಉಳಿದಿವೆ.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಜಾರಿಗೊಳಿಸಿದ್ದ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಅನೇಕ ಜನರಿಗೆ ಉದ್ಯೋಗವಿಲ್ಲದೆ ಆಹಾರ ಕೊರತೆ ಎದುರಾಗಿದ್ದು. ಹಾಗಾಗಿ ಸಾರ್ವಜನಿಕರು, ಜಿಲ್ಲೆ ಮತ್ತು ರಾಜ್ಯದ ವಿವಿಧ ಕಂಪೆನಿಗಳು, ಕಾರ್ಖಾನೆಗಳು ಆಹಾರದ ಕಿಟ್‌ಗಳನ್ನು ದೇಣಿಗೆ ನೀಡಿದ್ದರು. ಈ ಕಿಟ್‌ಗಳನ್ನು ತಾಲ್ಲೂಕಿಗೆ ಪೂರೈಸಿದ್ದ ಜಿಲ್ಲಾಡಳಿತ  ಅಗತ್ಯ ಉಳ್ಳವರಿಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ವಿತರಣೆಯಾಗಿಲ್ಲ.

ಈ ಕುರಿತು ಮಾತನಾಡಿದ ದಲಿತ ಸಂಘಟನೆ ಮುಖಂಡ ಹುಸೇನಪ್ಪ ಹಿರೇಮನಿ, ‘ಕಿಟ್‌ಗಳನ್ನು ಬಡವರಿಗೆ ತಲುಪಿಸದೆ ಗೋದಾಮಿನಲ್ಲಿಯೇ ಉಳಿಸಿಕೊಳ್ಳಲಾಗಿದ್ದು ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಜಿಲ್ಲಾಡಳಿತ ನೀಡಿದ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ. ಸುಮಾರು ಏಳು ನೂರಕ್ಕೂ ಅಧಿಕ ಕಿಟ್‌ಗಳು ಗೋದಾಮಿನಲ್ಲಿಯೇ ಉಳಿದಿವೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಹಿತಿ ನೀಡಿದ ತಹಶೀಲ್ದಾರ್ ಎಂ.ಸಿದ್ದೇಶ್, 840 ಕಿಟ್‌ಗಳನ್ನು ತಾಲ್ಲೂಕು ಪಂಚಾಯಿತಿಗೆ ನೀಡಲಾಗಿದ್ದು ವಿತರಣೆಯಾಗದಿರುವ ಬಗ್ಗೆ ಮಾಹಿತಿ ಪಡೆಯುವುದಾಗಿ ಹೇಳಿದರು.

‘ಈಗಾಗಲೇ ಬಹಳಷ್ಟು ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಲಾಗಿದ್ದು ಉಳಿದ ಸ್ವಲ್ಪ ಕಿಟ್‌ಗಳನ್ನು ಅಗತ್ಯ ಇರುವ ಪಂಚಾಯಿತಿಗಳಿಗೆ ಶೀಘ್ರದಲ್ಲಿ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು‘ ಎಂದು ಕಾರ್ಯ ನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು