ಗಂಗಾವತಿಗೆ ಕೃಷಿ ಕಾಲೇಜು

ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
‘ಕಾಲೇಜಿಗೆ ₹46.50 ಕೋಟಿ ಅನುದಾನ. 60 ಬೋಧಕ ಹಾಗೂ 139 ಬೋಧಕೇತರ ಹುದ್ದೆಗಳನ್ನು ಸೃಜಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಭತ್ತದ ಕಣಜ ಗಂಗಾವತಿಯು ಬಾಸುಮತಿ ಅಕ್ಕಿ ಸೇರಿ ವಿವಿಧ ತಳಿಯ ಭತ್ತಕ್ಕೆ ಪ್ರಸಿದ್ದಿ ಪಡೆದಿದೆ.
ಕೃಷಿ ಶಿಕ್ಷಣಕ್ಕೆ ಸಂಬಂಧಿಸಿದ ಕಾಲೇಜುಗಳು, ಸಂಶೋಧನಾ ಕೇಂದ್ರಗಳು ಸ್ಥಾಪನೆಯಾಗಬೇಕು ಎಂಬ ಇಲ್ಲಿಯ ಜನರ ದಶಕಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ.
ಈಗಾಗಲೇ ಗಂಗಾವತಿಯಲ್ಲಿ ಕೃಷಿ ಸಂಶೋಧನಾ, ಕೃಷಿ ವಿಜ್ಞಾನ ಹಾಗೂ ಭತ್ತದ ತಳಿ ಸಂಶೋಧನಾ ಕೇಂದ್ರಗಳಿವೆ. ಕೃಷಿ ಕಾಲೇಜು ಸ್ಥಾಪನೆಯಿಂದ ಮತ್ತಷ್ಟು ಅನುಕೂಲವಾಗಲಿದೆ.
ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಹಾಲಪ್ಪ ಆಚಾರ್ ಹಾಗೂ ರಾಯಚೂರು ಕೃಷಿ ವಿವಿಯ ಆಡಳಿತ ಮಂಡಳಿ ಸದಸ್ಯರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ಅವರನ್ನು ಈಚೆಗೆ ಭೇಟಿ ಮಾಡಿ ಕಾಲೇಜು ಮಂಜೂರಿಗೆ ಮನವಿ ಮಾಡಿತ್ತು. ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಅವಶ್ಯವಿರುವ ಸಿಬ್ಬಂದಿ ವಿವರ ಮತ್ತು ಹಣಕಾಸಿನ ಕನಿಷ್ಠ ಅವಶ್ಯಕತೆಯ ವಿವರದೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಸ್ಥಾಪಿಸಲು ಪ್ರಸ್ತಾವ
ಸಲ್ಲಿಸಿದ್ದರು. ಈ ವೇಳೆ ಮುಖ್ಯಮಂತ್ರಿಗಳು ಮಂಜೂರು ಮಾಡುವ ಭರವಸೆ ನೀಡಿದ್ದರು.
ಈ ಭಾಗದ ಜನರ ಒತ್ತಾಶೆ ಮೇರೆಗೆ ಸರ್ಕಾರ ಕಾಲೇಜು ಆರಂಭಿಸಲು ಒಪ್ಪಿಗೆ ನೀಡಿದೆ.
ರಾಯಚೂರು ಕೃಷಿ ವಿ.ವಿ ವ್ಯಾಪ್ತಿಗೆ ಬರುವ ಈ ಕಾಲೇಜಿನಲ್ಲಿ ಗುಣಮಟ್ಟದ ಕೃಷಿ ಸಂಶೋಧನೆ ಕೈಗೊಳ್ಳಬಹುದು. ಶಿಕ್ಷಣ, ಉದ್ಯೋಗ ಸೃಷ್ಟಿಗೂ ಅನುಕೂಲವಾಗಿದೆ.
ಸರ್ಕಾರದ ನಿರ್ಧಾರವನ್ನು ಈ ಭಾಗದ ಕೃಷಿ ತಜ್ಞರು
ಸ್ವಾಗತಿಸಿದ್ದಾರೆ.
ಷರತ್ತು ಅನ್ವಯ
‘ಮುಂದಿನ ಎರಡು ವರ್ಷಗಳಲ್ಲಿ ಯಾವುದೇ ಹೆಚ್ಚುವರಿ ಹುದ್ದೆಗಳ ಸೃಜನೆಗೆ ಹಾಗೂ ಆರ್ಥಿಕ ನೆರವಿಗೆ ಕೋರಿಕೆ ಸಲ್ಲಿಸಬಾರದು ಎಂಬ ಷರತ್ತಿಗೆ ಒಳಪಟ್ಟು, ಗಂಗಾವತಿಯಲ್ಲಿ ಕೃಷಿ ಮಹಾವಿದ್ಯಾಲಯವನ್ನು 2020–21ನೇ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.