ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ಬಿಜೆಪಿಗೆ ಮತ ಕೇಳುವ ನೈತಿಕತೆಯಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

Published 30 ಏಪ್ರಿಲ್ 2024, 16:45 IST
Last Updated 30 ಏಪ್ರಿಲ್ 2024, 16:45 IST
ಅಕ್ಷರ ಗಾತ್ರ

ಗಂಗಾವತಿ: ಹಿಂದಿನ ಹತ್ತು ವರ್ಷಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ಮೇಲಿಂದ ಮೇಲೆ ಹಸಿ ಸುಳ್ಳು ಹೇಳುತ್ತಿರುವ ಪ್ರಧಾನಿ‌ ನರೇಂದ್ರ ಮೋದಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ‌‌ ಮತಯಾಚಿಸಿ ಮಾತನಾಡಿದ ಅವರು 'ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ ಅವರಿಗೂ ಮತಕೇಳುವ ನೈತಿಕತೆ ಇರುತ್ತಿತ್ತು. ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ, ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ನಮ್ಮ ಪಕ್ಷ ಮಾತ್ರ' ಎಂದರು.

ವಿಕಸಿತ ಭಾರತ ಮಾಡುವುದಾಗಿ ‌ಮೋದಿ ಸುಳ್ಳು ಹೇಳುತ್ತಿದ್ದಾರೆ. ಜಾಹೀರಾತಿನ ಮೂಲಕ ಸುಳ್ಳು ಹರಡುತ್ತಿರುವ ಬಿಜೆಪಿಗೆ ಯಾವ ನೈತಿಕತೆಯೂ ಇಲ್ಲ. ಬಿಜೆಪಿ ದಲಿತರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರೆ ಮಾತ್ರ ಸಾಲದು; ಅವರಿಗೆ ಒಳ್ಳೆಯ ಆರ್ಥಿಕ ಯೋಜನೆ ಕೊಡಬೇಕು. ಯುವಜನತೆ ಮೋದಿ ಮೋದಿ ಎಂದು ಕೂಗಿ ಅವರನ್ನೇ ನಂಬಿಕೊಂಡಿದ್ದರೆ ಮೋದಿ ಅವರಿಗೆ ತಿರುಪತಿ ತಿಮ್ಮಪ್ಪನ‌ ನಾಮ ಹಾಕಿದರು ಎಂದು ವ್ಯಂಗ್ಯವಾಡಿದರು.

ಯುವಕರ, ಮಹಿಳೆಯರ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಸುಧಾರಿಸಿಬೇಕಾದರೆ ಕಾಂಗ್ರೆಸ್ ಪಕ್ಷ ಐದು ವರ್ಷ ಆಡಳಿತದಲ್ಲಿ ಇರಬೇಕಿದೆ ಎಂದರು.

ವಾಗ್ದಾಳಿ: ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ರೆಡ್ಡಿ ರಿಪಬ್ಲಿಕ್ ಆಫ್‌ ಬಳ್ಳಾರಿ ಮಾಡಿದ ಅಪಕೀರ್ತಿ ಹೊಂದಿದ್ದಾರೆ. ಅವರು ಮಾಡಿದ ಪಾಪದ ಕೆಲಸಕ್ಕೆ ನಾನು ಬಳ್ಳಾರಿ ತನಕ ಪಾದಯಾತ್ರೆ ಮಾಡಿದ್ದೇನೆ. ಅದರ ಪರಿಣಾಮ ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂದರು.

ಆದರೆ ಗಂಗಾವತಿ ಜನ ರೆಡ್ಡಿ ‌ಹೇಳಿದ ಹಸಿ ಸುಳ್ಳು ನಂಬಿ ಅನ್ಸಾರಿಯನ್ನು ಸೋಲಿಸಿ‌ ನತದೃಷ್ಟರಾಗಿದ್ದೀರಿ. ಅನ್ಸಾರಿ ಗೆದ್ದಿದ್ದರೆ ಈ ಬಾರಿ ಸಚಿವರಾಗುತ್ತಿದ್ದರು ಎಂದು ಹೇಳಿದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದೆ. ನರೇಂದ್ರ ಮೋದಿ ಎಷ್ಟು ಸುಳ್ಳು ಹೇಳುತ್ತಾರೊ, ಅದಕ್ಕಿಂತ ಹೆಚ್ಚು ಸುಳ್ಳು ರೆಡ್ಡಿ ಹೇಳುತ್ತಾರೆ ಎಂದರು.

ರೆಡ್ಡಿಗೆ ನಾನು, ಅನ್ಸಾರಿ, ಸಂಗಣ್ಣ ಕರಡಿ ಅವರನ್ನು ಕಂಡರೆ ಬ್ಯಾಡಗಿ‌ ಮೆಣಸಿನಕಾಯಿ ನಾಟಿದ ಹಾಗೆ ಆಗುತ್ತದೆ ಎಂದು ಹರಿಹಾಯ್ದರು.

ಮಾಜಿ ಸಂಸದ ಸಂಗಣ್ಣ ಕರಡಿ, ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಸಚಿವ ಬೈರತಿ ಸುರೇಶ, ಮಾಜಿ ಸಚಿವ ಟಿ.ಆಂಜನೇಯ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಲಲಿತಾ ರಾಣಿ, ಬಸವನಗೌಡ ಬಾದರ್ಲಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್ ಶ್ರೀನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್, ಅಮರೇಶ ಕರಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಜನರು ಪಾಲ್ಗೊಂಡಿದ್ದರು.

ಪಕ್ಷಕ್ಕೆ ನಿಷ್ಠನಾಗಿರುವೆ: ಅನ್ಸಾರಿ

ನಾನು ಯಾವ ಪಕ್ಷದಲ್ಲಿ ಇರುತ್ತೇನೊ ಆ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮೋಸ ಹೋಗಿದ್ದೇನೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಸಮಾಧಾನ ಹೊರಹಾಕಿದರು.

ನಾನು ‌ಯಾರಿಂದಲೂ ಪರ್ಸಂಟೇಜ್ ಪಡೆದಿಲ್ಲ, ವರ್ಗಾವಣೆಗೆ ಹಣ ಕೂಡ ಪಡೆಯಲ್ಲ. ಕಾಂಗ್ರೆಸ್ ಪಕ್ಷದಲ್ಲಿದ್ದ ಕೆಲವರು ರಾತ್ರೊ ರಾತ್ರಿ ಜನಾರ್ದನ ರೆಡ್ಡಿ ಬಳಿ ಹಣ ಪಡೆದುಕೊಂಡರು ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಆಕ್ರೋಶ ವ್ಯಕ್ತಪಡಿಸಿದರು.

ನಾನು ರಾಜಕಾರಣ ಮಾಡಲೇಬೇಕು ಎಂದೇನೂ ಇಲ್ಲ. ರಾಜಕಾರಣಕ್ಕಾಗಿಯೇ ನಮ್ಮಪ್ಪ ನನ್ನನ್ನು ಹುಟ್ಟಿಸಿಲ್ಲ ಎಂದು ತಮ್ಮ ಪಕ್ಷದ ನಾಯಕರ ವಿರುದ್ದವೇ ಹರಿಹಾಯ್ದರು.

ಮುಖ್ಯಮಂತ್ರಿಗೆ ಇರುಸು, ಮುರುಸು

ಮುಖ್ಯಮಂತ್ರಿ ಭಾಷಣ ಪೂರ್ಣಗೊಳಿಸುವ ಮೊದಲೇ‌ ಮಾಜಿ ಸಚಿವ ಮಲ್ಲಿಕಾರ್ಜುನ ‌ನಾಗಪ್ಪ ವೇದಿಕೆಯಿಂದ ಎದ್ದು ಹೋದರು. ಅನ್ಸಾರಿ ಮಾತನಾಡುವಾಗ ಶ್ರೀನಾಥ್ ಸಿಟ್ಟಾಗಿ ಶಾಸಕ ರಾಘವೇಂದ್ರ ಹಿಟ್ನಾಳನತ್ತ ಕೈ ತೋರಿಸಿ ಮಾತನಾಡದಂತೆ ಹೇಳು ಎಂದ ಪ್ರಸಂಗವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT