ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಆಸರೆಯಾದ ಒಳಕಲ್ಲು ವ್ಯಾಪಾರ

ಕಲ್ಲಿನಿಂದ ತಯಾರಿಸಿದ ಗೌತಮ ಬುದ್ಧ, ಅಂಬೇಡ್ಕರ್ ಮೂರ್ತಿಗಳಿಗೆ ಬೇಡಿಕೆ
Last Updated 22 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಗಂಗಾವತಿ: ಮಹಿಳೆ ಜೀವನವನ್ನು ಸವಾಲಾಗಿ ಸ್ವೀಕರಿಸಿ ದುಡಿಯಲು ನಿಂತರೆ ಎಂತಹ ಕಾಯಕವನ್ನಾದರೂ ಮಾಡಬಲ್ಲಳು.

ಇದಕ್ಕೆ ಪೂರಕ ಎನ್ನುವಂತೆ ಗಂಗಾವತಿ ತಾಲ್ಲೂಕಿನ ಕೃಷ್ಣಾಪೂರ ಡಿಗ್ಗಿ ( ಕೃಷ್ಣಾಪೂರ ಕ್ಯಾಂಪ್) ಗ್ರಾಮದ ಮಹಿಳೆ ರಾಜೇಶ್ವರಿ ಅವರು ನೆರೆಯವರ ಹಂಗಿನಲ್ಲಿ ಬದುಕುವುದಕ್ಕಿಂತ ಸ್ವಾವಲಂಬಿ ಜೀವನ ನಡೆಸುವುದೇ ಉತ್ತಮ ಎನ್ನುತ್ತಾ ಗೊಂಬೆ ವ್ಯಾಪಾರ ಮಾಡುತ್ತ ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ರಾಜೇಶ್ವರಿ ಅವರಿಗೆ 3 ಹೆಣ್ಣು ಮಕ್ಕಳಿರುವ ಕಾರಣ ಅವರು, ಆರಂಭದಲ್ಲಿ ಎಲ್ಲಿಯೂ ಕೆಲಸಕ್ಕೆ ಹೋಗದೆ, ಮಕ್ಕಳ ಶಿಕ್ಷಣ ಜವಾಬ್ದಾರಿ ಹೆಗಲಿಗೇರಿಸಿಕೊಂಡು, ಮನೆಯಲ್ಲೆ ಟೈಲರಿಂಗ್ ಮಾಡುತ್ತಾ, ಪತಿ ರಾಜು ಅವರ ಕೂಲಿ ಹಣದಿಂದ ಸಂಸಾರ ಸಾಗಿಸತೊಡಗಿದರು.

ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ನಿರ್ಧರಿಸಿ, ಅವರು ಸಾಲದ ರೂಪದಲ್ಲಿ ₹ 20ಸಾವಿರ ಪಡೆದು ಗ್ರಾಮ ಮುಖ್ಯ ರಸ್ತೆಬದಿ ಗೊಂಬೆ ವ್ಯಾಪಾರ ಅಂಗಡಿ ತೆರೆದು ಬದುಕಿಗೆ ಹೊಸ ಹಾದಿ ಕಂಡುಕೊಂಡಿದ್ದಾರೆ.

ಒಳಕಲ್ಲಿನಿಂದ ವ್ಯಾಪಾರ ಆರಂಭ: ಕುಟುಂಬದ ಆರ್ಥಿಕ ಸದೃಢತೆಗಾಗಿ ರಾಜೇಶ್ವರಿ ಟೈಲರಿಂಗ್ ಮಾಡುವ ಜೊತೆಗೆ ಚೆನ್ನೈ ಮೂಲದಿಂದ ಅಡುಗೆ ಕೊಣೆಗೆ ಬೇಕಾಗುವ ಒಳಕಲ್ಲು ತರಿಸಿ ಮಾರಾಟ ಆರಂಭಿಸಿದರು. ವ್ಯಾಪಾರ ದಿನದಿಂದ ದಿನಕ್ಕೆ ಏರಿಕೆ ಆದ ಕಾರಣ ಸ್ವಲ್ಪಮಟ್ಟಿಗೆ ಅವರ ಕುಟುಂಬದ ಆರ್ಥಿಕತೆ ಸುಧಾರಿಸುತ್ತಿದೆ.

ಗೊಂಬೆ ವ್ಯಾಪಾರ: ಒಳಕಲ್ಲು ವ್ಯಾಪಾರದಲ್ಲಿ ಬಂದ ಆದಾಯದಿಂದ ರಾಜೇಶ್ವರಿ ಅವರು ಹಂಪಿ, ಆನೆಗೊಂದಿ, ಅಂಜನಾದ್ರಿ ಸೇರಿದಂತೆ ಐತಿಹಾಸಿಕತೆ ಸಾರುವ ಪ್ರದೇಶಗಳ ಕಲ್ಲಿನ ಮೂರ್ತಿಗಳನ್ನು ತರಿಸಿ ವ್ಯಾಪಾರ ಆರಂಭಿಸಿದರು. ಇದರಲ್ಲಿ ಕಲ್ಲು, ಪ್ಲಾಸ್ಟಿಕ್, ಫೈಬರ್, ಕಟ್ಟಿಗೆ, ಗ್ರಾನೈಟ್, ವೈಟ್ ಸಿಮೆಂಟಿನಿಂದ ತಯಾರಿಸಿದ ಮೂರ್ತಿಗಳು ಆಕರ್ಷಕವಾಗಿವೆ.

ಏನೆಲ್ಲ ಸಿಗಲಿವೆ: ಕಲ್ಲಿನಿಂದ ತಯಾರಿಸಿದ ಗೌತಮ ಬುದ್ಧ ಮೂರ್ತಿ, ಕಲ್ಲಿನ ರಥ, ಕಲ್ಲಿನ ಆನೆ, ಸ್ಟೋನ್ ಬಾಲ್, ಫೈಬರ್ ರಿಕ್ಷಾ, ಒಳಕಲ್ಲು (ಸಣ್ಣವು) ಗಣೇಶ ಮೂರ್ತಿ, ಆಂಜನೇಯ, ಸಾಯಿಬಾಬ, ಪೆನ್ ಶೋಕೇಸ್, ಕಲ್ಲಿನ ಬುದ್ದ, ಆಮೆ, ಊದು ಬತ್ತಿ ಹಚ್ಚುವ ಆನೆ, ಒಳ್ಳು, ಶಿವಲಿಂಗ, ಫೈಟಿಂಗ್ ಗೊಂಬೆ, ಆದಿಯೋಗಿ ಕುಬೇರಾ, ಡಾ.ಅಂಬೇಡ್ಕರ್, ಗೂಬೆ, ದೀಪ ಹಚ್ಚುವ ಬಾಲ್, ಸ್ವಾಮಿ ವಿವೇಕಾನಂದರ ಮೂರ್ತಿಗಳು ಸಿಗಲಿವೆ.

ಮೂರ್ತಿಗಳ ಬೆಲೆ: ರಾಜೇಶ್ವರಿ ಬಳಿ ₹ 100 ರಿಂದ ₹ 4,500 ಬೆಲೆಯವರೆಗೆ ಎಲ್ಲ ತರಹದ ಮೂರ್ತಿಗಳು ಸಿಗಲಿವೆ. ಇವರ ಬಳಿಯ ಮೂರ್ತಿಗಳು ಬಹು ಸುಂದರವಾಗಿದ್ದು, ಮನೆಯಲ್ಲಿ, ಕಪಾಟುವಿನಲ್ಲಿ, ಟಿವಿ ಬಳಿ, ಬೆಡ್ ರೂಮಿನಲ್ಲಿ ಇರಿಸಲು ಆಕರ್ಷಕವಾಗಿರುತ್ತವೆ.

ರಾಜೇಶ್ವರಿ ಅವರು, ರಾಜಸ್ಥಾನ್, ತಮಿಳುನಾಡಿನ ಚೆನ್ನೈ ಸೇರಿದಂತೆ ಆನ್‌ಲೈನ್ ಮೂಲಕ ಮೂರ್ತಿಗಳನ್ನು ತರಿಸಿ ಮಾರಾಟ ಮಾಡುತ್ತಾರೆ. ಈ ಮೂರ್ತಿಗಳನ್ನು ಹೆಚ್ಚಾಗಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ದೊಡ್ಡ ನಗರದ ಜನರು ಖರೀದಿಸಿದರೆ, ಒಳಕಲ್ಲುನ್ನು ಸುತ್ತಮುತ್ತ ಜಿಲ್ಲೆಯವರು ಖರೀದಿ ಮಾಡುತ್ತಾರೆ.

ಇವರು ವಸ್ತುಗಳ ಮಾರಾಟದ ನಿಗದಿತ ಬೆಲೆ ತೆಗೆದು ನಿತ್ಯ ₹ 300- ₹ 400 ಹಣಗಳಿಸುತ್ತಾರೆ. ಒಮ್ಮೊಮ್ಮೆ ವ್ಯಾಪಾರ ಆಗದೆ ಇದ್ದರೂ, ವ್ಯಾಪಾರ ನಡೆಸುತ್ತಾ, ಮೂವರು ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ಕೊಡಿಸುತ್ತಾ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT