ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಲಕ್ಷಾಂತರ ಭಕ್ತರ ನಡುವೆ ಗವಿಸಿದ್ಧೇಶ್ವರ ಮಹಾರಥೋತ್ಸವ ಸಂಭ್ರಮ

Published 27 ಜನವರಿ 2024, 14:25 IST
Last Updated 27 ಜನವರಿ 2024, 14:25 IST
ಅಕ್ಷರ ಗಾತ್ರ

ಕೊಪ್ಪಳ: ಲಕ್ಷಾಂತರ ಭಕ್ತರ ಸಂಭ್ರಮ ಹಾಗೂ ಗವಿಸಿದ್ಧೇಶ್ವರ ಮಹಾರಾಜ ಕೀ ಜೈ ಎನ್ನುವ ಉದ್ಗೋಷಗಳ ನಡುವೆ ಶನಿವಾರ ಇಲ್ಲಿನ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು.

ಮಹಾ ರಥೋತ್ಸವ ಅಂಗವಾಗಿ ಎಲ್ಲಿ ನೋಡಿದರೂ ಸಂಭ್ರಮ. ತಳಿರು ತೋರಣ, ಹೂವಿನ ಅಲಂಕಾರ ಮತ್ತು ವಿದ್ಯುತ್‌ ಬೆಳಕಿನ ಹೊಳಪಿನಲ್ಲಿ ಅಂದವಾಗಿ ಕಾಣುತ್ತಿರುವ ಗವಿಮಠದಲ್ಲಿ ಈಗ ಭರ್ತಿ ಜಾತ್ರೆಯ ಸಡಗರ. ಎಲ್ಲರಲ್ಲಿಯೂ ಅಜ್ಜನ ಜಾತ್ರೆಯದ್ದೇ ಖುಷಿ.

ಕಣ್ಣು ಹಾಯಿಸಿದಷ್ಟೂ ದೂರ ಜನವೋ ಜನ. ಮಠದ ಮುಂಭಾಗದ ವಿಶಾಲವಾದ ಆವರಣದಲ್ಲಿ ವಿರಾಜಮಾನವಾಗಿ ನಿಂತಿದ್ದ ರಥ ಧಾರ್ಮಿಕ ವಿಧಿವಿಧಾನಗಳ ನಂತರ ಮುಂದಕ್ಕೆ ತೆರಳುತ್ತಿದ್ದಂತೆ ಎಲ್ಲರಲ್ಲಿಯೂ ಸಂಭ್ರಮವೋ ಸಂಭ್ರಮ. ಈ ವೇಳೆ ಚಪ್ಪಾಳೆ ಹೊಡೆದು ಭಕ್ತರು ಸಂಭ್ರಮಿಸಿದರು. ಲಕ್ಷಾಂತರ ಭಕ್ತರು ಗವಿಮಠದ ಆವರಣದಲ್ಲಿ ಒಂದೇ ಕಡೆ ಸೇರಿದ್ದರೂ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡುವ ವೇಳೆ ಒಂದಿನಿತೂ ಗದ್ದಲವಿಲ್ಲ. ಎಲ್ಲರದ್ದೂ ಮೌನವೇ ಭಕ್ತಿ.

ಮಹಾ ರಥೋತ್ಸವ ಪಾದಗಟ್ಟೆಗೆ ಹೋಗುವಾಗ ಭಕ್ತರ ಸಂಭ್ರಮ ಮುಗಿಲು ಮುಟ್ಟಿ ಗವಿಸಿದ್ಧೇಶ್ವರ ಮಹಾರಾಜ ಕೀ ಜೈ ಎನ್ನುವ ಘೋಷಣೆಗಳು ಎಲ್ಲೆಡೆಯೂ ಮೊಳಗಿದವು. ಮಹಾರಥೋತ್ಸವಕ್ಕೆ ಸಾಕ್ಷಿಯಾಗಲು ಬೆಳಗಿನ ಜಾವದಿಂದಲೇ ಲಕ್ಷಾಂತರ ಭಕ್ತರು ಗವಿಮಠಕ್ಕೆ ಸಾಗರೋಪಾದಿಯಲ್ಲಿ ಬಂದರು. ಸಂಜೆ ವೇಳೆಗೆ ಅವರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಯಿತು. ರಥದ ಮುಂಭಾಗದಲ್ಲಿ ಹಾಕಲಾಗಿದ್ದ ಬಣ್ಣಬಣ್ಣದ ರಂಗೋಲಿಗಳ ಮೇಲೆ ಮಹಾರಥೋತ್ಸವ ಹಾದು ಹೋಯಿತು. ಮೈಸೂರಿನ ಸುತ್ತೂರು ದೇಶಿ ಕೇಂದ್ರದ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ಸರ್ವಧರ್ಮಗಳ ಬೀಡಾದ ಕೊಪ್ಪಳದ ಭಾವೈಕ್ಯದ ನೆಲದಲ್ಲಿ ಗವಿಮಠವೂ ಇದೇ ಪರಂಪರೆಯಲ್ಲಿ ಬೆಳೆದು ಬಂದಿರುವ ಕಾರಣ ಈ ಮಠಕ್ಕೆ ಜಾತಿಯ ಚೌಕಟ್ಟು, ಧರ್ಮದ ಹಂಗು ಯಾವುದೂ ಇಲ್ಲ. ಹೀಗಾಗಿ ಎಲ್ಲಧರ್ಮಗಳ ಜನ ಜಾತ್ರೆಯ ಸಂಭ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮಹಾರಥೋತ್ಸದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಭಕ್ತರು

ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮಹಾರಥೋತ್ಸದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಭಕ್ತರು

–ಪ್ರಜಾವಾಣಿ ಚಿತ್ರ / ಭರತ್‌ ಕಂದಕೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT