ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಸರ್ಗ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ’-ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಗಿಣಗೇರಾ ಕೆರೆ ಸ್ವಚ್ಛತಾ ಕಾರ್ಯಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ
Last Updated 22 ಫೆಬ್ರುವರಿ 2021, 5:02 IST
ಅಕ್ಷರ ಗಾತ್ರ

ಕೊಪ್ಪಳ: ಎಲ್ಲಿ ನೀರು ಇರುತ್ತೋ ಅಲ್ಲಿ ನಾಗರಿಕತೆ ಇರುತ್ತೆ. ಅಂತಹ ಉನ್ನತ ನಾಗರಿಕತೆಗಳನ್ನು ಕಂಡ ನಾವು ನೀರಿನ, ನಿಸರ್ಗದ ರಕ್ಷಣೆ ಮಾಡುವ ಮೂಲಕ ಜಗತ್ತಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಅವರು ತಾಲ್ಲೂಕಿನ ಗಿಣಗೇರಾ ಕೆರೆ ಸ್ವಚ್ಛತಾ ಕೆರೆ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

250 ಎಕರೆ ವಿಸ್ತಾರವಾದ ಈ ಕೆರೆ ನಿರ್ಮಾಣ ಮಾಡುವ ಮೂಲಕ ಸುತ್ತಲಿನ ಗ್ರಾಮಗಳ ಜನರ ಜೀವನವನ್ನು ಬದುಕಿಸಬೇಕಾಗಿದೆ. ದೇವರಲ್ಲಿ ಬೇಡಿಕೊಳ್ಳುವ ಭಿಕ್ಷುಕರಾದ ನಾವು. ನಿಸರ್ಗದ ಉಳಿವಿಗೆ ದೇವರಲ್ಲಿ ಮೊರೆಯಿಡಬೇಕು. ಪಂಚ ಮಹಾಭೂತಗಳಾದ ನೀರು, ವಾಯು, ಅಗ್ನಿ, ಭೂಮಿ, ಬಯಲುಗಳನ್ನು ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಏನಾದರೂ ಉಳಿಸಿಹೋಗಬೇಕು ಎಂದು ಹೇಳಿದರು.

ನಮ್ಮ ಸುತ್ತಲಿನ ಕೆರೆ, ಬಾವಿ, ಹಳ್ಳ ಕೊಳ್ಳ, ಸಸ್ಯ ಸಂಪತ್ತು, ಬೆಟ್ಟ ಗುಡ್ಡಗಳನ್ನು ರಕ್ಷಣೆ ಮಾಡುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಇಂದು ನಾವೆಲ್ಲಾ ಜಲ ಸಂಪನ್ಮೂಲವನ್ನು ರಕ್ಷಿಸಬೇಕಾದ ಅನಿವಾರ್ಯತೆ ಬಂದಿದೆ. ಏಕೆಂದರೆ ನೀರು ಎಲ್ಲಿ ಇರುತ್ತದೆಯೋ ಅಲ್ಲಿನ ಪ್ರದೇಶ ಅಭಿವೃದ್ದಿಯಾಗುತ್ತದೆ. ಇಲ್ಲದಿದ್ದರೆ ಸಾಧ್ಯವಿಲ್ಲ. ಇತಿಹಾಸದ ಪುಟಗಳನ್ನು ತಿರುವಿದಾಗ ಎಲ್ಲಿ ನೀರು ಇರುತ್ತದೆಯೋ ಅಲ್ಲಿ ನಾಗರಿಕ ಸಂಸ್ಕ್ರತಿಬೆಳೆದು ಬರುತ್ತದೆ ಎಂದು ಹೇಳಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಜಲಯಜ್ಞ ಕೈಗೊಂಡಿರುವಗವಿಮಠದ ಪೂಜ್ಯರ ಎಲ್ಲ ಕಾರ್ಯಕ್ಕೆ ಸಹಕಾರ ನೀಡಿದ್ದೇವೆ. ಹಿರೇಹಳ್ಳದಲ್ಲಿ 9 ಬ್ಯಾರೇಜ್‌ ನಿರ್ಮಾಣ ಕಾಮಗಾರಿ ಕೂಡಾ ಆರಂಭವಾಗಿದೆ. ಈ ಕೆರೆ ಸ್ವಚ್ಛತೆಗೆ ₹10 ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು.

ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಮಾತನಾಡಿ, ಕೆರೆ ಸ್ವಚ್ಛತೆ ಮಾಡುವ ಕಾರ್ಯದಷ್ಟೇ ಮಹತ್ವ ನೀರು ಹರಿದು ಬರಿಯುವ ಸಹಜ ಹರಿಯುವನ್ನು ಅತಿಕ್ರಮಿಸಿಕೊಂಡಿರುವ ರೈತರು ಬಿಟ್ಟುಕೊಡಬೇಕು. ಅವುಗಳ ದಾರಿಯನ್ನು ನಾವೆಲ್ಲ ಬಂದ್‌ ಮಾಡಿರುವುದರಿಂದ ಇಂದು ಕೆರೆಗೆ ನೀರು ತುಂಬಿಸುವ ಅನಿವಾರ್ಯತೆ ಬಂದಿದೆ ಎಂದು ಕೆಲವು ವಾಸ್ತವ ಸಂಗತಿಗಳನ್ನು ಹೇಳಿ ಜನರ ಗಮನ ಸೆಳೆದರು.

ಕಿರ್ಲೋಸ್ಕರ್‌ ಫೆರಸ್ ಇಂಡಸ್ಟ್ರೀಸ್‌ ಮುಖ್ಯವ್ಯವಸ್ಥಾಪಕ ಆರ್‌.ವಿ.ಗುಮಾಸ್ತೆ ಮಾತನಾಡಿ, ನೀರಿನ ಮಹತ್ವ ವಿಜಯಪುರ ಜಿಲ್ಲೆಯ ಜನತೆಗೆ ತಿಳಿದಷ್ಟು ಮತ್ತೆ ಯಾರಿಗೂ ತಿಳಿದಿಲ್ಲ. ನಮ್ಮ ಗ್ರಾಮದಲ್ಲಿ ಹಳ್ಳ, ಕೆರೆ ಸ್ವಚ್ಛತೆ ಮಾಡಿ ಅಂತರ್ಜಲ ಮರುಪೂರಣಗೊಂಡ ಯಶೋಗಾಥೆಯನ್ನು ವಿವರಿಸಿ ಕೆರೆಗೆ ಸಹಾಯವಿರುವ ಎಲ್ಲ ಅವಶ್ಯಕ ಸಾಮಗ್ರಿಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಕಲ್ಯಾಣಿ, ಮುಕುಂದ್ ಸಿಮಿ, ಅಲ್ಟ್ರಾಟೆಕ್‌ ಕಂಪೆನಿ ಮುಖ್ಯಸ್ಥರಾದ ಹೇಮಂತ್‌ಕುಮಾರ್‌, ಆರ್.ಕೆ.ಸಿಂಗ್‌ ಮುಂತಾದವರು ಮಾತನಾಡಿ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿಅಧ್ಯಕ್ಷ ರಾಜಶೇಖರ ಹಿಟ್ನಾಳ,ಸಿಇಒ ರಘುನಂದನ್ ಮೂರ್ತಿ,ಎಸ್‌ಪಿ ಟಿ.ಶ್ರೀಧರ್, ಸ್ಥಳೀಯ ಮುಖಂಡರಾದ ಕರಿಯಪ್ಪ ಮೇಟಿ, ಗೂಳಪ್ಪ ಹಲಗೇರಿ ಮಾತನಾಡಿದರು.

ಸಿ.ವಿ.ಚಂದ್ರಶೇಖರ್, ಬಸಣ್ಣ ಕರಡಿ, ವಿಶ್ವನಾಥರಡ್ಡಿ, ಶ್ರೀನಿವಾಸ್‌ ಪೂಜಾರ, ನವೋದಯ ವಿರುಪಣ್ಣ, ವಿವಿಧ ಕಾರ್ಖಾನೆಗಳ ಸಿಇಒ ಇದ್ದರು.

ಬಿಜಕಲ್‌ನ ಶಾಂತಲಿಂಗ ಸ್ವಾಮೀಜಿ ₹1 ಲಕ್ಷ ದೇಣಿಗೆಯನ್ನು ಸ್ಥಳದಲ್ಲಿಯೇ ನೀಡಿದರು.

ಗಿಣಿಗೇರಾ ಗ್ರಾಮದ ಕೆರೆ ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ಸುಬ್ಬಣ್ಣಾಚಾರ್ಯ ವಿದ್ಯಾನಗರ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಾಗರಾಜ ನಾಗರಾಜ ಚೆಲ್ಲಳ್ಳಿ ಸ್ವಾಗತಿಸಿದರು.

ಶಂಕರಗೌಡ ಪಾಟೀಲ, ಅನಿಲ್ ಜಾನಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT