ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು: ಉತ್ತಮ ಇಳುವರಿ ನಿರೀಕ್ಷೆ

ರೈತರ ಜಮೀನುಗಳಿಗೆ ಕೃಷಿ ಅಧಿಕಾರಿಗಳ ಭೇಟಿ: ಪರಿಶೀಲನೆ
Last Updated 26 ಜೂನ್ 2021, 10:46 IST
ಅಕ್ಷರ ಗಾತ್ರ

ಕುಷ್ಟಗಿ: ‘ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನ ಅಲ್ಪಾವಧಿ ತಳಿ ಹೆಸರು ಬೆಳೆ ಉತ್ತಮವಾಗಿದೆ. ರೈತರು ಅಗತ್ಯ ಮುಂಜಾಗ್ರತೆ ವಹಿಸಿದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಾಗನಗೌಡ ಹೇಳಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದಿರುವ ಹೆಸರು ಬೆಳೆ ಜಮೀನುಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾಹಿತಿ ನೀಡಿದ ಅವರು,‘ರೈತರಿಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ’ ಎಂದರು.

ಈ ಬಾರಿ ಒಟ್ಟು 7,500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ ಸುಮಾರು 5,500-6000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಹನುಮನಾಳ ಹೋಬಳಿಯಲ್ಲಿ ಅತಿ ಹೆಚ್ಚು ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಸದ್ಯ ಒಂದೂವರೆ ತಿಂಗಳ ಅವಧಿಯ ಹೆಸರು ಬೆಳೆ ಕಾಯಿಕಟ್ಟುವ ಹಂತದಲ್ಲಿದೆ. ಇನ್ನೂ ಒಂದು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಈಗ ತೇವಾಂಶ ಕೊರತೆ ಇದ್ದು, ಈ ವಾರದೊಳಗೆ ಮಳೆಯಾದರೆ ಬೆಳೆಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನಂಜಾಣು ರೋಗ: ಕೆಲ ಪ್ರದೇಶಗಳಲ್ಲಿ ಹೆಸರು ಬೆಳೆಗೆ ಸಾಮಾನ್ಯವಾಗಿ ಕಾಡುವ ಹಳದಿ ನಂಜಾಣು ರೋಗ ಕಾಣಿಸಿಕೊಂಡಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅದರ ತೀವ್ರತೆ ತೀರಾ ಕಡಿಮೆ ಪ್ರಮಾಣದಲ್ಲಿದೆ. ಆದರೆ ಮುಂಚಿತವಾಗಿ ಬಿತ್ತನೆ ನಡೆಸಿದ ತಾಕುಗಳಲ್ಲಿ ಈ ರೋಗ ಕನಿಷ್ಠ ಮಟ್ಟದಲ್ಲಿದೆ. ರಸಹೀರುವ ಹೇನು ಮತ್ತು ನುಸಿ (ಮೈಟ್ಸ್) ಮೂಲಕ ರೋಗ ಹೊಲಕ್ಕೆ ಹಬ್ಬುತ್ತದೆ. ರೋಗ ಇಡೀ ಹೊಲಕ್ಕೆ ಪಸರಿಸುವುದನ್ನು ತಡೆಯಬೇಕಾದರೆ ಹಳದಿ ಬಣ್ಣಕ್ಕೆ ತಿರುಗಿರುವ ಹೆಸರು ಬಳ್ಳಿಗಳನ್ನು ಕಿತ್ತು ಹಾಕಬೇಕು. ಅದೇ ರೀತಿ ಕೃಷಿ ಇಲಾಖೆ ತಜ್ಞರನ್ನು ಸಂಪರ್ಕಿಸಿ ನಿಗದಿತ ರಾಸಾಯನಿಕ ಸಿಂಪಡಣೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಲಾಗಿದೆ ಎಂದು ಹೇಳಿದರು.

ಭಾಗ್ಯಲಕ್ಷ್ಮಿ ಪಾಟೀಲ, ಖಾದರಬಿ, ಸಹಾಯಕ ಕೃಷಿ ಅಧಿಕಾರಿಗಳಾದ ವಿ.ಎಂ.ಹಿರೇಮಠ, ವೀರೇಶ ಅಂತೂರು ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT