ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಚುನಾವಣೆ: ಶಾಂತಿಯುತ ಮತದಾನ

Last Updated 30 ಮಾರ್ಚ್ 2021, 6:36 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ಹಿರೇಮ್ಯಾಗೇರಿ ಮತ್ತು ಸಂಕನೂರು ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಸೋಮವಾರ ಮತದಾನ ನಡೆಯಿತು.

ಎರಡು ಗ್ರಾಮ ಪಂಚಾಯಿತಿಗಳ ಒಟ್ಟು 24 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಿತು.

ಪ್ರಾರಂಭದಲ್ಲಿ ಮತದಾನ ಬಿರುಸಿನಿಂದ ನಡೆಯಿತು. ಮಧ್ಯಾಹ್ನ ಮಂದಗತಿ ಪಡೆಯಿತು. ಮತದಾರರು ಸಂಜೆ ಬಂದು ಮತ ಚಲಾಯಿಸಿದರು.

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಕೆಲವರು ಬೇಗನೇ ಹೋಗಿ ಹಕ್ಕು ಚಲಾಯಿಸಿದರು.

ವೃದ್ಧರಿಗೆ ವೀಲ್‍ಚೇರ್ ವ್ಯವಸ್ಥೆ ಮಾಡಲಾಗಿತ್ತು.

‘ಶಾಂತಿಯುತವಾಗಿ ಮತದಾನ ನಡೆಯಿತು’ ಎಂದು ತಹಶೀಲ್ದಾರ್‌ ಶ್ರೀಶೈಲ ತಳವಾರ ಹಾಗೂ ವಿಜಯಕುಮಾರು ಗುಂಡೂರ ತಿಳಿಸಿದ್ದಾರೆ.

ಹಿರೇಮ್ಯಾಗೇರಿ ಪಂಚಾಯಿತಿಗೆ ಸೇರಿದ ಹೊಸೂರು ಮತ್ತು ಹಿರೇಮ್ಯಾಗೇರಿ ಗ್ರಾಮಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಎರಡು ಗ್ರಾಮ ಸೇರಿ ಒಟ್ಟು 13 ಸ್ಥಾನಗಳಿಗೆ ಸದಸ್ಯರ ಆಯ್ಕೆ ನಡೆಯಲಿದೆ.

ಸಂಕನೂರು ಪಂಚಾಯಿತಿಯ ಸಂಕನೂರು, ಕಾತ್ರಾಳ ಹಾಗೂ ಸಿರಗುಂಪಿ ಗ್ರಾಮದ ಒಟ್ಟು 11 ಸ್ಥಾನಗಳಿಗೆ ಮತದಾನ ನಡೆದಿದೆ.

ಕೋವಿಡ್ ನಿಯಂತ್ರಣಕ್ಕೆ ಕ್ರಮ: ಪ್ರತಿಯೊಂದು ಮತಗಟ್ಟೆಯ ಮುಖ್ಯ ದ್ವಾರದಲ್ಲಿಯೇ ಮತದಾರರನ್ನು ಪರೀಕ್ಷೆಗೆ ಒಳಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು.

ಶೇ 83.09 ರಷ್ಟು ಮತದಾನ:ಎರಡು ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಶೇ 83.09 ರಷ್ಟು ಮತದಾನವಾಗಿದೆ.

‘ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಒಟ್ಟು 13 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ನಿರೀಕ್ಷೆಗೂ ಮೀರಿ ಮತದಾರರು ಹಕ್ಕು ಚಲಾಯಿಸಿದ್ದಾರೆ’ ಎಂದು ತಹಶೀಲ್ದಾರ್‌ ಶ್ರೀಶೈಲ ತಳವಾರ ತಿಳಿಸಿದ್ದಾರೆ.

ಎರಡು ಪಂಚಾಯಿತಿಗಳ ಒಟ್ಟು 7606 ಮತದಾರರಲ್ಲಿ 3252 ಪುರುಷರು, 3068 ಮಹಿಳೆಯರು ಸೇರಿ ಒಟ್ಟು 6320 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಕಾತ್ರಾಳ ಗ್ರಾಮದ ಮತಗಟ್ಟೆಯಲ್ಲಿ ಹೆಚ್ಚು ಅಂದರೆ ಶೇ 93.08 ಮತದಾನವಾಗಿದೆ. ಹಾಗೆಯೇ ಸಂಕನೂರು-2 ಮತ್ತು ಹಿರೇಮ್ಯಾಗೇರಿ-2 ರ ಮತಗಟ್ಟೆಯಲ್ಲಿ ಕಡಿಮೆ ಅಂದರೆ ಶೇ 73.3 ರಷ್ಟು ಮತದಾನವಾಗಿದೆ ಎಂದು ವಿವರಿಸಿದ್ದಾರೆ.

ಹಕ್ಕು ಚಲಾವಣೆ

ಕಾರಟಗಿ: ತಾಲ್ಲೂಕಿನ ಸಿದ್ದಾಪುರ ಹಾಗೂ ಮುಷ್ಟೂರು ಗ್ರಾಮ‌ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆಯಿತು. ಶೇ 78.26 ರಷ್ಟು ಮತದಾನ ನಡೆಯಿತು.

ಬೆಳಿಗ್ಗೆ 7 ರಿಂದ ಮತದಾನ ಆರಂಭಗೊಂಡು ಸಂಜೆ 5 ರವರೆಗೆ ನಡೆಯಿತು. ಮತದಾರರು ಬಿಸಿಲನ್ನು ಲೆಕ್ಕಿಸದೇ ಹಕ್ಕು ಚಲಾಯಿಸಿದರು.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿತ್ತು.

17 ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಪ್ರತಿ ಮತಗಟ್ಟೆ ಕೇಂದ್ರಕ್ಕೆ 8 ಜನರಂತೆ ಒಟ್ಟು 136 ಸಿಬ್ಬಂದಿ ಕಾರ್ಯ ನಿರ್ವಹಿಸಿದರು.

ಮಾ. 31 ರಂದು ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಹಶೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT