ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಮಠದಲ್ಲಿ ಭಕ್ತರ ಮಹಾಸಂಗಮ

ದಿನಪೂರ್ತಿ ಸಂಭ್ರಮದ ಹೊನಲು, ಸಮರೋಪಾದಿಯಲ್ಲಿ ಬಂದ ಭಕ್ತಗಣ, ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದ ಜನ
ಪ್ರಮೋದ
Published 28 ಜನವರಿ 2024, 6:28 IST
Last Updated 28 ಜನವರಿ 2024, 6:28 IST
ಅಕ್ಷರ ಗಾತ್ರ

ಕೊಪ್ಪಳ: ಇನ್ನೂ ಪೂರ್ಣ ಬೆಳಕು ಹರಿದಿರಲಿಲ್ಲ. ಅದಾಗಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಗವಿಮಠದ ಸನ್ನಿಧಿಗೆ ಬೆಳಗಿನ ಜಾವವೇ ಬಂದು ಗದ್ದುಗೆಯ ದರ್ಶನ ಪಡೆದರು. ಹೊತ್ತು ಏರುತ್ತಿದ್ದಂತೆ ಭಕ್ತರ ಸಂಖ್ಯೆಯೂ ಹೆಚ್ಚಾಗಿ ಶನಿವಾರ ಸಂಜೆ ನಡೆದ ’ಅಜ್ಜನ ಜಾತ್ರೆ’ಯ ಮಹಾರಥೋತ್ಸವದ ವೇಳೆಗೆ ಲಕ್ಷಾಂತರ ಜನ ಮಹಾಸಂಗಮವಾದರು.

ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ರಥೋತ್ಸವಕ್ಕೆ ಈ ಬಾರಿಯೂ ಜನರ ಕೊರತೆಯಾಗಲಿಲ್ಲ. ನಂದಿಕೋಲಿನ ಸಂಭ್ರಮದ ಮೆರವಣಿಗೆ, ಪಲ್ಲಕ್ಕಿಯಲ್ಲಿ ಗವಿಸಿದ್ಧೇಶ್ವರ ಮೂರ್ತಿ ತಂದು ರಥೋತ್ಸವದಲ್ಲಿ ಕೂಡಿಸಿದಾಗ ಭಕ್ತರೆಲ್ಲರೂ ಕೈ ಮುಗಿದು ಭಕ್ತಿ ಮೆರೆದರು. ಮೈಸೂರಿನ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾಂಪ್ರದಾಯಿಕ ಧ್ವಜಾರೋಹಣ ನೆರವೇರಿಸಿದ ಬಳಿಕ ರಥ ಮುಂದೆ ಸಾಗಿತು. ಪಾದಗಟ್ಟೆ ಮುಟ್ಟಿ ವಾಪಸ್‌ ಬಂದಾಗ ಜನರ ಹರ್ಷಕ್ಕೆ ಪಾರವೇ ಇರಲಿಲ್ಲ.

ವಿಶಾಲವಾದ ಗವಿಮಠದ ಆವರಣ‌, ಮುಖ್ಯರಸ್ತೆಯಿಂದ ಗವಿಮಠಕ್ಕೆ ಬರುವ ಮಾರ್ಗ, ಮಠದ ಬೆಟ್ಟ, ಗುಡ್ಡ, ಸುತ್ತಲಿನ ಶಾಲಾ ಕಾಲೇಜಿನ ಕಟ್ಟಡಗಳ ಮೇಲೆ ನಿಂತು ಭಕ್ತರು ಮಹಾರಥೋತ್ಸವ ಸಂಭ್ರಮ ಕಣ್ತುಂಬಿಕೊಂಡರು. ಮಹಾ ರಥೋತ್ಸವ ಪಾದಗಟ್ಟೆಗೆ ಹೋಗುವಾಗ ಭಕ್ತರ ಸಂಭ್ರಮ ಮುಗಿಲು ಮುಟ್ಟಿ ‘ಗವಿಸಿದ್ಧೇಶ್ವರ ಮಹಾರಾಜ ಕೀ ಜೈ‘ ಎನ್ನುವ ಘೋಷಣೆಗಳು ಎಲ್ಲೆಡೆಯೂ ಮೊಳಗಿದವು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ‘ಕೊಪ್ಪಳದಲ್ಲಿ ಇಷ್ಟೊಂದು ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ ಎಂದರೆ ಎಲ್ಲರೂ ಹುಬ್ಬೇರಿಸುತ್ತಾರೆ. ಯಾರಿಗೂ ತೊಂದರೆಯಾಗದ ಹಾಗೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ’ ಎಂದರು.

ಗವಿಮಠದ ಆವರಣದಲ್ಲಿ ಸಾಲು ಸಾಲು ರಂಗೋಲಿಗಳನ್ನು ಬಿಡಿಸಲಾಗಿತ್ತು. ಅದರ ಮೇಲೆ ಮಹಾರಥೋತ್ಸವ ಅದ್ದೂರಿಯಾಗಿ ಸಾಗಿತು. ಇದಕ್ಕೂ ಮೊದಲು ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಬಂದಿದ್ದ ಭಕ್ತರು ದಾಸೋಹದ ಮನೆಯಲ್ಲಿ ಪ್ರಸಾದ ಸವಿದರು. ಹರಕೆ ಹೊತ್ತವರು ದೀಡ್‌ ನಮಸ್ಕಾರ ಹಾಕಿ ಭಕ್ತಿ ಸಮರ್ಪಿಸಿದರು.     

ಗವಿಮಠ ಅನ್ನ, ಅಕ್ಷರ ಮತ್ತು ಆಧ್ಯಾತ್ಮ ಚಟುವಟಿಕೆಗಳಿಗೆ ಹೆಸರುವಾಸಿ. ಹೀಗಾಗಿ ಪ್ರತಿ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ವಧರ್ಮಗಳ ಬೀಡಾದ ಕೊಪ್ಪಳದ ಭಾವೈಕ್ಯದ ನೆಲದಲ್ಲಿ ಗವಿಮಠವೂ ಇದೇ ಪರಂಪರೆಯಲ್ಲಿ ಬೆಳೆದು ಬಂದಿರುವ ಕಾರಣ ಈ ಮಠಕ್ಕೆ ಜಾತಿಯ ಚೌಕಟ್ಟು, ಧರ್ಮದ ಹಂಗು ಯಾವುದೂ ಇಲ್ಲ. ಹೀಗಾಗಿ ಎಲ್ಲಧರ್ಮಗಳ ಜನ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾದರು.

ಜನಸಾಗರ... ಕೊಪ್ಪಳದಲ್ಲಿ ಶನಿವಾರ ನಡೆದ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವದ ವೇಳೆ ಪಾಲ್ಗೊಂಡಿದ್ದ ಜನ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಜನಸಾಗರ... ಕೊಪ್ಪಳದಲ್ಲಿ ಶನಿವಾರ ನಡೆದ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವದ ವೇಳೆ ಪಾಲ್ಗೊಂಡಿದ್ದ ಜನ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ಮೈಸೂರಿನ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು
ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ಮೈಸೂರಿನ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು

ಉತ್ಸವ ಮೂರ್ತಿಯ ಪಲ್ಲಕ್ಕಿ ಹೊತ್ತ ಉಪಮುಖ್ಯಮಂತ್ರಿ ಅಜ್ಜನ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ ಜಯ ಘೋಷಣೆ ಹಾಕಿ ರಥ ಎಳೆದ ಭಕ್ತರು

ರಥೋತ್ಸವಕ್ಕೆ ಗಣ್ಯರ ದಂಡು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೇಂದ್ರ ಸಚಿವ ಭಗವಂತ್‌ ಖುಬಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಸಂಸದ ಸಂಗಣ್ಣ ಕರಡಿ ಶಾಸಕರಾದ ರಾಘವೇಂದ್ರ ಹಿಟ್ನಾಳ ದೊಡ್ಡನಗೌಡ ಪಾಟೀಲ ಜನಾರ್ಧನ ರೆಡ್ಡಿ ಶರಣಗೌಡ ಕಂದಕೂರ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಮಾಜಿ ಶಾಸಕ ಪರಣ್ಣ ಮುನವಳ್ಳಿ ವೆಂಕಟರಾವ್‌ ನಾಡಗೌಡ್ರು ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ ಎಸ್‌.ಪಿ. ಯಶೋಧಾ ವಂಟಗೋಡಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಉಪವಿಭಾಗಾಧಿಕಾರಿ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

‘ಮೂರು ಪದಗಳೇ ದೊಡ್ಡ ಶಕ್ತಿ’ ಜಲಶಕ್ತಿ ಮತ್ತು ಜನಶಕ್ತಿ ಸಿಗುವುದು ಅಜ್ಜನ ಜಾತ್ರೆ ಎಂದೇ ಹೆಸರಾದ ಗವಿಸಿದ್ಧೇಶ್ವರ ಮಠದ ಜಾತ್ರೆಯಲ್ಲಿ ಮಾತ್ರ. ಇದು ಜಾತ್ರಾ ಮಹೋತ್ಸವ ಅಲ್ಲ; ಯಾತ್ರಾ ಮಹೋತ್ಸವ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಮಹಾರಥೋತ್ಸವಕ್ಕೂ ಮೊದಲು ಮಾತನಾಡಿದ ಅವರು ‘ಸುತ್ತೂರಿನ ಸ್ವಾಮೀಜಿ ಶಿಕ್ಷಣ ಹಾಗೂ ದಾಸೋಹದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ಮೈಸೂರಿನಲ್ಲಿ ರಾಜಮಹಾರಾಜರು ಅರಮನೆಗಳನ್ನು ಕಟ್ಟಿದರೆ ಸುತ್ತೂರಿನ ಸ್ವಾಮೀಜಿ ಅರಿವಿನ ಮನೆ ಕಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ’ಅಜ್ಜನ ಜಾತ್ರೆಗೆ ಬನ್ನಿ’ ಎನ್ನುವ ನಿಮ್ಮ ಮೂರು ಪದಗಳ ಶಕ್ತಿಯೇ ಜಾತ್ರೆಯ ಯಶಸ್ಸಿಗೆ ಕಾರಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT