ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಶ್ರೀಮಂತಿಕೆಯೇ ಶ್ರೇಷ್ಠ ಸಂಪತ್ತು: ಗವಿಸಿದ್ಧೇಶ್ವರ ಸ್ವಾಮೀಜಿ

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ವಿಶೇಷ ಮಹಾಸಭೆ: ಗವಿಸಿದ್ಧೇಶ್ವರ ಸ್ವಾಮೀಜಿ
Published 2 ಅಕ್ಟೋಬರ್ 2023, 5:09 IST
Last Updated 2 ಅಕ್ಟೋಬರ್ 2023, 5:09 IST
ಅಕ್ಷರ ಗಾತ್ರ

ಕೊಪ್ಪಳ: ‘ಜಗತ್ತಿನ ಎಲ್ಲ ಸಿರಿವಂತಿಕೆಗಳಿಗಿಂತ ಆರೋಗ್ಯ ಶ್ರೀಮಂತಿಕೆಯೇ ಶ್ರೇಷ್ಠ ಸಂಪತ್ತು. ಇದನ್ನು ಉಳಿಸಿ ಹಾಗೂ ಗಳಿಸಿಕೊಂಡು ಹೋಗುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ’ ಎಂದು ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ವಿಶೇಷ ಮಹಾಸಭೆಯಲ್ಲಿ ಆಶೀರ್ವಚನ ನೀಡಿದ ಅವರು ‘ಮನುಷ್ಯನಿಗೆ ಹುಟ್ಟಿದೆ, ಸಾವೂ ಇದೆ. ಇದರ ನಡುವೆ ಇರುವ ಬದುಕು ಎಲ್ಲಕ್ಕಿಂತ ದೊಡ್ಡದು. ಹುಟ್ಟಿನ ಕ್ಷಣದಿಂದಲೇ ಸಾವಿನ ಸಮಯವೂ ಶುರುವಾಗುತ್ತದೆ. ಈ ಸತ್ಯವನ್ನು ಅರಿತು ಸಂತೋಷದಿಂದ ಬದುಕಬೇಕು’ ಎಂದರು.

‘ನಿರಾಸಕ್ತಿ, ನಿರಾಶೆಯಿಂದ ಬದುಕುವುದು ಜೀವನವಲ್ಲ. ಬದುಕು ದೇವರು ಕೊಟ್ಟ ಅವಕಾಶ. ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡುವುದಕ್ಕಿಂತ ಸಂತೋಷವಾಗಿ ಬದುಕುವುದನ್ನು ಕಲಿಸಬೇಕು. ಸಿರಿವಂತನಾಗಿ 20 ಬೆಡ್‌ರೂಂಗಳಿರುವ ಮನೆಗಳನ್ನು ಕಟ್ಟಿದರೂ ಮನುಷ್ಯ ಮಲಗುವುದು ಒಂದು ಮಂಚದ ಅರ್ಧದಷ್ಟು ಜಾಗದ ಮೇಲೆ ಮಾತ್ರ. ಸುಖದ ಮೊದಲ ಸಂಪತ್ತು ಅಡಗಿರುವುದೇ ಆರೋಗ್ಯದಲ್ಲಿ’ ಎಂದು ಹೇಳಿದರು.

‘ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ. ಹೊಟ್ಟೆಗೆ ತಿನ್ನುವ ರೊಟ್ಟಿ ದೇಹದ ಕೋಟಿ ಜೀವಕೋಶಗಳನ್ನು ತಲುಪುವ ರೀತಿಯಲ್ಲಿ ನಾವು ಎಲ್ಲರನ್ನು ತಲುಪಬೇಕು. ಜೀವನದಲ್ಲಿ ಯಾವ ವಸ್ತಗಳಿಂದಲೂ ಸುಖ ಸಿಗುವುದಿಲ್ಲ. ಅವುಗಳನ್ನು ನೋಡುವ ದೃಷ್ಟಿಕೋನದಲ್ಲಿ ಸುಖ ಅಡಗಿದೆ. ಆತ್ಮ ಮತ್ತು ಮನಸ್ಸಿನ ಪ್ರಸನ್ನತೆ ಇರಬೇಕು. ಸರ್ಕಾರಿ ನೌಕರರು ರಾಜ್ಯದ ಅಭಿವೃದ್ಧಿಯ ದಿಕ್ಸೂಚಿಯಾಗಿದ್ದು, ಉಪಕಾರಿಯಾಗಿ ಹಾಗೂ ಉತ್ತಮನಾಗು ಎನ್ನುವುದೇ ನಿಮ್ಮೆಲ್ಲರ ಬದುಕಿನ ಮೂಲಮಂತ್ರವಾಗಲಿ’ ಎಂದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮಾತನಾಡಿ ‘7ನೇ ವೇತನ ಆಯೋಗವು ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಸರ್ಕಾರ ಜನಪರ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿರುವಾಗ ನಾವು ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ತಾಳ್ಮೆಯಿಂದ ಕಾಯಬೇಕಾಗುತ್ತದೆ. ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 6ನೇ ವೇತನ ಆಯೋಗ ಜಾರಿಮಾಡಿದ್ದರು. ಈಗಲೂ ಮಾಡುವ ವಿಶ್ವಾಸವಿದೆ’ ಎಂದರು.

ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನ್ನವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘದ ಗೌರವಾಧ್ಯಕ್ಷ ರುದ್ರಪ್ಪ, ಕಾರ್ಯದರ್ಶಿ ಸದಾನಂದ, ಖಜಾಂಚಿ ಶ್ರೀನಿವಾಸ, ಉಪಾಧ್ಯಕ್ಷರಾದ ಬಸವರಾಜ, ರಾಜು ಲೆಂಗಟಿ, ಮೈಸೂರು ಜಿಲ್ಲಾಧ್ಯಕ್ಷ ಗೋವಿಂದರಾಜು, ಬೀದರ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ, ಗದಗ ಜಿಲ್ಲಾಧ್ಯಕ್ಷ ರವಿ ಗುಂಜೇಕರ, ಬಳ್ಳಾರಿ ಜಿಲ್ಲಾಧ್ಯಕ್ಷ ಶಿವಾಜಿರಾವ, ಧಾರವಾಡ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ, ಹಾವೇರಿ ಜಿಲ್ಲಾಧ್ಯಕ್ಷ ಅಮೃತಗೌಡ, ವಿಜಯನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT