ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗೆಮ್ಮ ದೇವಸ್ಥಾನ: 5 ರಿಂದ ಮುಕ್ತ ಸಾಧ್ಯತೆ

Last Updated 3 ನವೆಂಬರ್ 2020, 2:11 IST
ಅಕ್ಷರ ಗಾತ್ರ

ಮುನಿರಾಬಾದ್: ಹುಲಿಗಿಯ ಸುಪ್ರಸಿದ್ಧ ಶಕ್ತಿಪೀಠ ಶ್ರೀಹುಲಿಗೆಮ್ಮದೇವಿ ದೇವಸ್ಥಾನದ ಬಾಗಿಲು ಇದೇ ನ.5 ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನು ಆಡಳಿತ ಮಂಡಳಿ ಸಿಬ್ಬಂದಿ ಸಹ ಖಚಿತಪಡಿಸಿದ್ದಾರೆ.

ವಾರ್ಷಿಕ ₹8 ಕೋಟಿಗೂ ಅಧಿಕ ಆದಾಯ ತರುವ ಕ್ಲಾಸ್–1 ವ್ಯಾಪ್ತಿಗೆ ಸೇರುವ ಈ ದೇವಸ್ಥಾನ ಕೊರೊನಾ ಕಾರಣ ಕಳೆದ ಮಾರ್ಚ್ ತಿಂಗಳಿನಿಂದ ಬಾಗಿಲು ಮುಚ್ಚಿತ್ತು. ದೇವಸ್ಥಾನದ ಆವರಣದಲ್ಲಿ ಇರಿಸಲಾದ ಕಾಣಿಕೆ ಪೆಟ್ಟಿಗೆಗೆ ಕಾಣಿಕೆ ಸಲ್ಲಿಸಿ ದೂರದಿಂದಲೇ ದೇವಿ ಆಶೀರ್ವಾದ ಬೇಡುತ್ತಿದ್ದ ಭಕ್ತರಿಗೆ ಮಾತ್ರ ಬರ ಇರಲಿಲ್ಲ. ಕಳೆದ ಏಳು ತಿಂಗಳಿನಿಂದ ದೈನಂದಿನ ಪೂಜೆ ಮತ್ತು ಧಾರ್ಮಿಕ ಆಚರಣೆಗಳು ಸೀಮಿತ ಅರ್ಚಕರು, ಪೂಜಾರ ಮನೆತನದವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

‘ಹೂ ಕೊಡು ತಾಯಿ’ ಎಂದು ಬೇಡುವ ಭಕ್ತರಿಗೆ ಸದ್ಯದಲ್ಲೇ ದರ್ಶನ ಭಾಗ್ಯ ಸಿಗಲಿದೆ.

ಹುಣ್ಣಿಮೆಗೆ ಸಾವಿರಾರು ಜನ: ಶುಕ್ರವಾರ, ಮಂಗಳವಾರ ಹಾಗೂ ಹುಣ್ಣಿಮೆ ದಿನದಂದು ಭಕ್ತರ ದಂಡೇ ಸೇರುತ್ತದೆ. ಶನಿವಾರ ಸೀಗೆ ಹುಣ್ಣಿಮೆ ಅಂಗವಾಗಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಈಚೆಗೆ ಗ್ರಾಮೀಣ ಸಿಪಿಐ ಆಗಿ ಅಧಿಕಾರ ವಹಿಸಿಕೊಂಡಿರುವ ವಿಶ್ವನಾಥ ಹಿರೇಗೌಡರ್ ಮತ್ತು ಸಿಬ್ಬಂದಿ ಹುಲಿಗಿಯ ಪ್ರಮುಖ ವೃತ್ತ, ಮುಖ್ಯ ರಸ್ತೆಗಳ ಬದಿ ವ್ಯಾಪಾರ ನಡೆಸುತ್ತಿದ್ದ ತಳ್ಳುಗಾಡಿಗಳು, ವ್ಯಾಪಾರಸ್ಥರನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಂದಿವೃತ್ತದಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದ ಸಂಚಾರಿ ಅಂಗಡಿಗಳನ್ನು ತೆರವುಗೊಳಿಸಿ ಸಾರಿಗೆ ಬಸ್ ಮತ್ತು ಭಕ್ತರ ಲಘುವಾಹನಗಳಿಗೆ ದಾರಿ ಕಲ್ಪಿಸಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ವ್ಯವಸ್ಥೆ ಮಾಡಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭುರಾಜ ಪಾಟೀಲ, ಪಾಲಾಕ್ಷಪ್ಪಗುಂಗಾಡಿ, ಬಸವರಾಜಮೇಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದಾಯದ ನಿರೀಕ್ಷೆ: ದೇಗುಲ ಬಾಗಿಲು ತೆರೆದರೆ ಏಳು ತಿಂಗಳು ದೇವಿ ದರ್ಶನಕ್ಕೆ ಕಾದು ಕುಳಿತ ಭಕ್ತರಿಗೆ ಸಂತಸವಾಗಲಿದೆ. ವಾರ್ಷಿಕ ಕೋಟ್ಯಂತರ ಆದಾಯ ಖಜಾನೆಗೆ ಬರಲಿದೆ. ಅರ್ಧಕ್ಕೆ ನಿಂತ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದು ಆಡಳಿತ ಮಂಡಳಿಯ ಸಿಬ್ಬಂದಿ ನಿರೀಕ್ಷೆಯಲ್ಲಿದ್ದು, ಕೊರೊನಾ ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿ ಅನ್ವಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಿಬ್ಬಂದಿ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT