ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ರಾಸುಗಳಿಗೂ ಗುರುತಿನ ಸಂಖ್ಯೆ ಟ್ಯಾಗ್

ದೇಶದೆಲ್ಲೆಡೆ ಏಕರೂಪದ ಗುರುತಿನ ಸಂಖ್ಯೆ ಅಳವಡಿಕೆ
Last Updated 20 ಸೆಪ್ಟೆಂಬರ್ 2020, 3:54 IST
ಅಕ್ಷರ ಗಾತ್ರ

ಕುಷ್ಟಗಿ: ಜನರಿಗೆ ಆಧಾರ ಗುರುತಿನ ಸಂಖ್ಯೆ ನೀಡಿರುವ ಮಾದರಿಯಲ್ಲಿ ದೇಶದಲ್ಲಿರುವ ರಾಸುಗಳಿಗೆ 12 ಅಂಕಿಗಳನ್ನು ಒಳಗೊಂಡಿರುವ ಮತ್ತು ದೇಶಾದ್ಯಂತ ಏಕರೂಪದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರಾಣಿಗಳ ಆರೋಗ್ಯ ಮತ್ತು ಉತ್ಪಾದನೆ ಮಾಹಿತಿ ಜಾಲ (INAPH ಇನಾಫ್) ಸಹಯೋಗದಲ್ಲಿ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ (NDDB) ರೂಪಿಸಿರುವ ಈ ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ರಾಸುಗಳ ಆರೋಗ್ಯ ಮತ್ತು ಅವುಗಳ ಮಾಲೀಕರಿಗೆ ಸಂಬಂಧಿಸಿದ ಪ್ರತಿಯೊಂದು ವಿವರಗಳನ್ನು ನಿಗದಿತ ವೆಬ್‌ಸೈಟ್‌ದಲ್ಲಿ ದಾಖಲಿಸಿ ನಿರ್ವಹಿಸಲಾಗುತ್ತಿದೆ. ಈ ಕಾರ್ಯಕ್ರಮ ಪೂರ್ಣಗೊಂಡರೆ ಪ್ರತಿಯೊಂದು ದನಗಳ ವೈಯಕ್ತಿಕ ಸಮಗ್ರ ವಿವರಗಳನ್ನು ಒಳಗೊಂಡ ಮಾಹಿತಿ ದೇಶದ ಯಾವುದೇ ಪ್ರದೇಶದಲ್ಲಿದ್ದರೂ ಬೆರಳ ತುದಿಯಲ್ಲಿ ಲಭ್ಯವಾಗಲಿದೆ.

ಬಾರ್‌ಕೋಡ್ ಟ್ಯಾಗ್: ವಿಶಿಷ್ಟವಾಗಿ ಸಿದ್ಧಪಡಿಸಿರುವ ಹಳದಿ ಬಣ್ಣದ ಮತ್ತು ಬಾರ್‌ಕೋಡ್‌ ಸಹಿತ ಫೈಬರ್‌ ಟ್ಯಾಗ್ ಮೇಲೆ ಹನ್ನೆರಡು ಸಂಖ್ಯೆಗಳನ್ನು ನಮೂದಿಸಲಾಗಿದ್ದು, ಅದನ್ನು ರಾಸುಗಳ ಕಿವಿಗಳ ಒಳ ಭಾಗದಲ್ಲಿ ಅಳವಡಿಸಲಾಗುತ್ತದೆ. ಸಾಕಷ್ಟು ಗಟ್ಟಿಮುಟ್ಟಾಗಿರುವ ಇದು ತೆಗೆಯಲು ಬರುವುದಿಲ್ಲ. ಮುರಿಯುವುದೂ ಇಲ್ಲ. ಗುರುತಿನ ಸಂಖ್ಯೆ ದೇಶದಲ್ಲಿ ಏಕರೂಪ ದ್ದಾಗಿರುವುದರಿಂದ ಈ ಜಾನುವಾರುಗಳು ಎಲ್ಲಿಯೇ ಹೋದರೂ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕಿನ ಹಿರಿಯ ಪಶುವೈದ್ಯ ಅಧಿಕಾರಿ ಡಾ.ಸಿದ್ಧಲಿಂಗಯ್ಯ ಶೆಂಕೀನ ಕಾರ್ಯಕ್ರಮ ಕುರಿತು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಆಧಾರ್ ಲಿಂಕ್‌: ಇನಾಫ್‌ ತಂತ್ರಾಂಶದಲ್ಲಿ ರೂಪಿಸಲಾಗಿರುವ ವೆಬ್‌ಸೈಟ್‌ದಲ್ಲಿ ಟ್ಯಾಗ್‌ ಸಂಖ್ಯೆ ರಾಸು, ಅವುಗಳ ಮಾಲೀಕರ ವಿವರಗಳನ್ನೂ ನೀಡಲಾಗಿರುತ್ತದೆ. ಅಷ್ಟೇ ಅಲ್ಲ ಮಾಲೀಕರ ಆಧಾರ್ ಗುರುತಿನ ಚೀಟಿ ಮತ್ತು ಮೊಬೈಲ್‌ ಸಂಖ್ಯೆಯನ್ನೂ ಲಿಂಕ್‌ ಮಾಡಲಾಗುತ್ತದೆ. ಒಂದೊಮ್ಮೆ ರಾಸು ಕಳೆದು ಎಲ್ಲಿಯಾದರೂ ಪತ್ತೆಯಾದರೆ ಅದರ ಟ್ಯಾಗ್‌ದಲ್ಲಿರುವ ಸಂಖ್ಯೆಯ ಮೂಲಕ ಅದರ ಮಾಲೀಕರ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯ ಮೂಲಕವಿವರ ತಿಳಿಯಲು ಹಾಗೂ ಮಾಲೀಕರಿಗೆ ಮಾಹಿತಿ ತಿಳಿಸಲೂ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಹೀಗಿದೆ ಉದ್ದೇಶ: ವಿಶಿಷ್ಟ ಗುರುತಿನ ಸಂಖ್ಯೆ ನೀಡುವುದರ ಹಿಂದೆ ಮಹತ್ವ ಉದ್ದೇಶವೂ ಇದ್ದು ಸಂಬಂಧಿಸಿದ ರಾಸುಗಳ ಆರೋಗ್ಯದ ಮಾಹಿತಿ, ಹಿಂದೆ ಯಾವ ಯಾವ ಲಸಿಕೆ, ಚುಚ್ಚುಮದ್ದು ನೀಡಲಾಗಿದೆ. ಹಸು ಎಮ್ಮೆ ಆಗಿದ್ದರೆ ಅದು ನೀಡುವ ಹಾಲು ಎಷ್ಟು. ಯಾವ ವರ್ಷದಲ್ಲಿ ಬೆದೆಗೆ ಬಂದಿದ್ದು ಮತ್ತು ಕರು ಹಾಕಿದೆ. ಕೃತಕ ಗರ್ಭಧಾರಣೆ ಮಾಡಿಸಿದ್ದು ಎಂಬ ಇತರೆ ಹತ್ತಾರು ವಿವರಗಳು ವೆಬ್‌ಸೈಟ್‌ದಲ್ಲಿ ಪರಿಶೀಲಿಸುವುದಕ್ಕೆ ಪಶುವೈದ್ಯರಿಗೆ ಮತ್ತು ಮಾಲೀಕರಿಗೂ ತಿಳಿಯುತ್ತದೆ.

ಒಬ್ಬ ಮಾಲೀಕ ಹೊಂದಿದ ರಾಸುಗಳ ಸಂಖ್ಯೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆದ ವಿವಿಧ ಯೋಜನೆಗಳ ವಿವರವೂ ಬೆರಳ ತುದಿಯಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲ ಪಶುಸಂಗೋಪನೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸುವುದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪೂರಕವಾಗಲಿದೆ ಎಂದು ಮೂಲಗಳು ತಿಳಿಸಿವೆ.

ದನಗಳಿಗೆ ಏಕರೂಪದ ವಿಶಿಷ್ಟ ಸಂಖ್ಯೆಯನ್ನು ನೀಡುವುದರಿಂದ ಭವಿಷ್ಯದಲ್ಲಿ ರೈತರಿಗೆ ಬಹಳಷ್ಟು ಪ್ರಯೋಜನವಾಗಲಿದೆ.
-ಡಾ.ಸಿದ್ಧಲಿಂಗಯ್ಯ ಶೆಂಕೀನ, ಪಶುವೈದ್ಯ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT