ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀರು, ಗಾಳಿ ಬೇಕೆಂದರೆ ಗಿಡ ಮರ ಬೆಳೆಸಿ: ರಾಮಕೃಷ್ಣ ಮುದ್ದೇಪಾಲ್

Published 5 ಜೂನ್ 2024, 16:10 IST
Last Updated 5 ಜೂನ್ 2024, 16:10 IST
ಅಕ್ಷರ ಗಾತ್ರ

ಮುನಿರಾಬಾದ್: ನಮಗೆ ಕುಡಿಯಲು ನೀರು, ಉಸಿರಾಡಲು ಶುದ್ಧ ಗಾಳಿ ಬೇಕೆಂದರೆ ಇರುವ ಮರಗಳನ್ನು ಉಳಿಸಿಕೊಂಡು, ಇನ್ನೂ ಹೆಚ್ಚಿನ ಗಿಡಮರಗಳನ್ನು ಬೆಳೆಸುವುದು ಇಂದಿನ ತುರ್ತು ಅಗತ್ಯವಿದೆ ಎಂದು ಇಂಡಿಯಾ ರಿಸರ್ವ್ ಬೆಟಾಲಿಯನ್ ಪ್ರಭಾರ ಕಮಾಂಡೆಂಟ್ ರಾಮಕೃಷ್ಣ ಮುದ್ದೇಪಾಲ್ ಅವರು ಹೇಳಿದರು.

ಇಲ್ಲಿನ ಇಂಡಿಯಾ ರಿಸರ್ವ್ ಬೆಟಾಲಿಯನ್ ಮತ್ತು ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ಸಹಯೋಗದಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾತಾವರಣವನ್ನು ಕಲುಷಿತಗೊಳಿಸದೇ, ಪರಿಸರದ ಘಟಕಗಳಾದ ನೀರು, ಮಣ್ಣು, ಗಾಳಿ, ನದಿ, ಬೆಟ್ಟ ಮತ್ತು ಗುಡ್ಡಗಳನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.  ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಈ ದಿನಾಚರಣೆಯನ್ನು ವಿಶ್ವದ 143 ದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಉಪ ಕಮಾಂಡೆಂಟ್ ಜೆ.ರೂಪೇಶ್ ಮಾತನಾಡಿ, ಪರಿಸರ ಅಸಮತೋಲನ ಕಾರಣ ಈ ವರ್ಷ ನಾವು ಅತಿಯಾದ ಉಷ್ಣಾಂಶವನ್ನು ಅನುಭವಿಸಿದ್ದಲ್ಲದೆ ಸಾವು ನೋವುಗಳು ಕೂಡ ಸಂಭವಿಸಿದೆ. ಪರಿಸರ ಉಳಿಸಲು ಅರಣ್ಯ ನಾಶ ತಡೆಯಬೇಕು, ಗಿಡಮರ ಬೆಳೆಸಬೇಕು, ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆಯ ಜೊತೆಗೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದರು.

170 ಎಕರೆ ಪ್ರದೇಶದ ನಮ್ಮ ಘಟಕದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಗಿಡಮರಗಳನ್ನು ಬೆಳೆಸಲಾಗಿದ್ದು, ಸಣ್ಣಪುಟ್ಟ ಕಾಡು ಪ್ರಾಣಿಗಳು ಮತ್ತು ಹಕ್ಕಿಗಳಿಗೆ ಆಶ್ರಯ ಕಲ್ಪಿಸಿದಂತಾಗಿದೆ ಎಂದರು.

ಅಧಿಕಾರಿಗಳಾದ ರಾಧಾಕೃಷ್ಣ ಅರಾವತ್, ಮಂಜಪ್ಪ ಕೋಟಿಹಾಳ, ಶರಣು ತೋಟದ, ಸಂಜಯ್ ಪವಾರ್, ಪ್ರಕಾಶ್, ಅರುಣ್ ಕುಮಾರ, ಆನಂದ ಸೇರಿದಂತೆ ಎರಡೂ ಘಟಕಗಳ ಅಧಿಕಾರಿ ಸಿಬ್ಬಂದಿ ವರ್ಗ ಹಾಜರಿದ್ದರು. ಘಟಕದ ಖಾಲಿ ಜಾಗದಲ್ಲಿ ಸಸಿ ನೆಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT