ಶುಕ್ರವಾರ, ಜೂನ್ 18, 2021
21 °C
ಖಾಸಗಿ ಆಸ್ಪತ್ರೆ, ವಸತಿ ನಿಲಯಗಳಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಲು ಜಿಲ್ಲಾಡಳಿತದಿಂದ ವ್ಯವಸ್ಥೆ

ಕೋವಿಡ್‌ ಕೇರ್‌ ಸೆಂಟರ್ ಹೆಚ್ಚಳ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ದಿನದಿಂದ ದಿನಕ್ಕೆ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗುವ ಮುಂಚೆಯೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಯೋಜನೆ ರೂಪಿಸಿದ್ದು, ಇದಕ್ಕಾಗಿ ಸರಣಿ ಸಭೆ ನಡೆಸಿದೆ.

ಮಹಾನಗರಗಳು ಗಂಭೀರ ಪರಿಣಾಮ ಎದುರಿಸುತ್ತಿರುವ ಕಾರಣಕ್ಕೆ ಜಿಲ್ಲೆಯ ಗ್ರಾಮಾಂತರ ಭಾಗಕ್ಕೆ ಸೋಂಕು ವ್ಯಾಪಿಸದಂತೆ ತಡೆಯುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸಂಬಂಧಿ ರೋಗಿಗಳಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದ್ದು, ಸಂಖ್ಯೆ ಹೆಚ್ಚಳವಾದರೆ ವಸತಿ ನಿಲಯ, ಖಾಸಗಿ ಆಸ್ಪತ್ರೆಗಳನ್ನು ಬಳಕೆ ಮಾಡಿಕೊಂಡು ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್‌ ಕೇರ್ ಸೆಂಟರ್‌ ಆರಂಭಿಸಲಾಗಿದ್ದು, ವಸತಿ ನಿಲಯಗಳಲ್ಲಿ ಹಾಸಿಗೆ, ವೆಂಟಿಲೇಟರ್‌, ಆಕ್ಸಿಜನ್ ಸೌಲಭ್ಯ ಸೇರಿದಂತೆ ವಿವಿಧ ವೈದ್ಯಕೀಯ ಉಪಚಾರಕ್ಕೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆ ಇಲ್ಲ. ಕೈಗಾರಿಕೆಗಳು ತಯಾರಿಸುವ ಆಕ್ಸಿಜನ್ ಹೆಚ್ಚಿನ ಮಟ್ಟದಲ್ಲಿ ಇದ್ದು, ಯಾವುದೇ ಸಮಯದಲ್ಲಿ 200 ಸಿಲಿಂಡರ್ ಪೂರೈಸುವುದಾಗಿ ಭರವಸೆ ನೀಡಿದ್ದಾರೆ.

ಕೊರೊನಾ ಕೋವಿಡ್‌ ಕೇರ್‌ ಸೆಂಟರ್ ಹೆಚ್ಚಿನ ಅವಶ್ಯಕತೆ ಬಿದ್ದರೆ ತಾಯಿ ಮತ್ತು ಮಗುವಿನ ಆಸ್ಪತ್ರೆ ಕೊಪ್ಪಳ, ಗಂಗಾವತಿ, ಕುಕನೂರು ಮತ್ತು ಇತರೆ ಹೊಸ ಆಸ್ಪತ್ರೆ ಕಟ್ಟಡಗಳಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಖಾಸಗಿ ಆಸ್ಪತ್ರೆಯಲ್ಲಿ 100 ಹಾಸಿಗೆ: ನಗರದ ಕೆ.ಎಸ್.ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ 100 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಕೇರ್‌ ಸೆಂಟರ್ ಸ್ಥಾಪನೆಗೆ ಮುಂದಾಗಿದೆ. ಇದಕ್ಕೆ ಸರ್ಕಾರದ ವತಿಯಿಂದ ವಸತಿ ನಿಲಯ ಅಥವಾ ಖಾಲಿ ಇರುವ ಕಟ್ಟಡವನ್ನು ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೇರ್ ಸೆಂಟರ್ ಆರಂಭವಾಗಲಿದೆ.

‘ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಕುರಿತು ನಿಖರವಾದ ಮಾಹಿತಿ ಕಂಡು ಬಂದಿಲ್ಲ. ಗ್ರಾಮೀಣ ಭಾಗಕ್ಕೆ ವಿಸ್ತರಣೆಯಾಗದಂತೆ ತೀವ್ರ ನಿಗಾ ವಹಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಮಂಗಳವಾರದಿಂದ ಹೊರಡಿಸಲಿದ್ದು, ಉಸ್ತುವಾರಿಗೆ ತಹಶೀಲ್ದಾರ್ ಸೇರಿದಂತೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್‌ ಸುರಳ್ಕರ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.