ಶನಿವಾರ, ಮಾರ್ಚ್ 25, 2023
28 °C
ದಲಿತ ಶೋಷಣಾ ಮುಕ್ತಿ ಮಂಚ್ ನೇತೃತ್ವದಲ್ಲಿ ಪ್ರತಿಭಟನೆ

ದೌರ್ಜನ್ಯ ತಡೆಯಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗಟ್ಟಿ, ದೌರ್ಜನ್ಯಕ್ಕೊಳಗಾದವರಿಗೆ ಕೂಡಲೇ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ, ದಲಿತ ಶೋಷಣಾ ಮುಕ್ತಿ ಮಂಚ್ ನೇತೃತ್ವದಲ್ಲಿ ಬುಧವಾರ ಜಿಲ್ಲಾಡಳಿತ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಮುಖಂಡ ಜಿ.ನಾಗರಾಜ ಮಾತನಾಡಿ,‘ನಮ್ಮ ದೇಶ ಸ್ವಾತಂತ್ರ್ಯ ಗಳಿಸಿ 74 ವರ್ಷ ಕಳೆದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಇನ್ನೂ ಸ್ವಾಭಿಮಾನದಿಂದ ಬದುಕುವ ಹಕ್ಕುಗಳು ದೊರೆತಿಲ್ಲ. ಪ್ರತಿದಿನ ಅರ್ಧ ಗಂಟೆಗೊಮ್ಮೆ ಪರಿಶಿಷ್ಟರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಕಾಲದಲ್ಲೂ ತಾರತಮ್ಯ ಹೆಚ್ಚುತ್ತಿದೆ. ಕಾರಟಗಿ ತಾಲ್ಲೂಕಿನಲ್ಲಿ ಬೇರೆ ಸಮುದಾಯದ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ಕೊಚ್ಚಿ ಕೊಲೆ ಮಾಡಲಾಗಿದೆ. ಬರಗೂರು, ವಿಜಾಪುರದ ದೇವಹಿಪ್ಪರಗಿಯ ಸಲಾದಹಳ್ಳಿಯಲ್ಲೂ ಬೇರೆ ಸಮುದಾಯದ ಯುವತಿಯನ್ನು ಪ್ರಿತಿಸಿದ್ದಕ್ಕೆ ಹೆತ್ತ ತಾಯಿಯ ಎದುರೆ ಹಳ್ಳಕ್ಕೆ ಹಾಕಿ ಅಮಾನುಷವಾಗಿ ಹೊಡೆದು ಮರ್ಯಾದೆಗೇಡು ಹತ್ಯೆ ಮಾಡಲಾಗಿದೆ. ಹೊಸಹಳ್ಳಿ, ಹಗರದಾಳ ಗ್ರಾಮದಲ್ಲಿ ಪರಿಶಿಷ್ಟರಿಗೆ ಕ್ಷೌರ ನಿರಾಕರಣೆ. ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೋಲಿಸ್ ಠಾಣೆಯಲ್ಲಿ ಕಿರಗುಂದ ಗ್ರಾಮದ ಪರಿಶಿಷ್ಟ ಯುವಕ ಪುನೀತ್‌ ಮೂತ್ರ ಕುಡಿಸಿ ಪಿಎಸ್‌ಐ ದೌರ್ಜನ್ಯ ಮಾಡಿರುವ ಘಟನೆ ಖಂಡನೀಯ ಎಂದರು.

ಈ ಕೂಡಲೇ ಮುಖ್ಯಮಂತ್ರಿಗಳು ಸಭೆ ಕರೆದು ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಬೇಕು. ಉದ್ಯೋಗ, ವಸತಿ ಸೇರಿದಂತೆ ವಿವಿಧ ಸಾಮಾಜಿಕ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ಎಂ.ಬಸವರಾಜ, ಸುಂಕಪ್ಪ ಗದಗ, ಹುಸೇನಪ್ಪ.ಕೆ, ರಮೇಶ.ಬಿ. ಮಂಜುನಾಥ ಡಗ್ಗಿ, ಬಸವರಾಜ ಗೋನಾಳ, ಹನುಮಂತ ಮುಕ್ಕುಂಪಿ, ಲಕ್ಷ್ಮಣ ಹೊಸ್ಕೆರಾಡಗಿ, ಹುಲಗಪ್ಪ ಗೋಕಾವಿ. ಹುಸೇನಸಾಬ್ ನದಾಫ್, ಫಕೀರಮ್ಮ ಮಿರಗನತಾಂಡಾ, ರಮೇಶ ಕರ್ಕಿಹಳ್ಳಿ ಮುಂತಾದವರು ಭಾಗವಹಿಸಿದ್ದರು.

‘ಪರಿಶಿಷ್ಟರಿಗೆ ರಕ್ಷಣೆ ನೀಡಿ’

ಯಲಬುರ್ಗಾ: ‘ಪ್ರಜಾಪ್ರಭುತ್ವ ಜಾರಿಯಲ್ಲಿದ್ದರೂ ತಳ ಸಮುದಾಯಗಳು ಇನ್ನೂ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಶೋಚನೀಯ ಸಂಗತಿ’ ಎಂದು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಸಿದ್ದಪ್ಪ ಹೇಳಿದರು.

ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯ ನೇತೃತ್ವವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ಸಿಕ್ಕು 75 ರ ಅಂಚಿನಲ್ಲಿದ್ದರೂ ಇನ್ನೂ ಶೋಷಣೆ, ದಬ್ಬಾಳಿಕೆ ಮುಂದುವರಿದಿದೆ ಎಂದು ಹೇಳಿಕೊಳ್ಳುವುದೇ ನಾಚಿಕೆಪಡುವ ವಿಷಯ. ನಿರಂತರವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಪರಿಶಿಷ್ಟ ಸಮುದಾಯಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸರ್ಕಾರ ಕ್ರಮಕ್ಕೆ ಮುಂದಾಗದಿರುವುದು ಬೇಸರದ ಸಂಗತಿ ಎಂದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು. ತಳ ಸಮುದಾಯಗಳಿಗೆ ರಕ್ಷಣೆ ನೀಡಬೇಕು. ಆರ್ಥಿಕ ಸೌಲಭ್ಯ ಒದಗಿಸಬೇಕು. ವಿಶೇಷ ಪರಿಹಾರ ಘೋಷಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಸಂಚಾಲಕ ಅಬ್ದುಲ್ ರಜಾಕ್ ಮಾತನಾಡಿ,‘ತಾಲ್ಲೂಕಿನ ಹೊಸಳ್ಳಿ, ವಜ್ರಬಂಡಿ ಗ್ರಾಮಗಳ ಘಟನೆ ಸೇರಿದಂತೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ಚಿಕ್ಕಮಗಳೂರ ಜಿಲ್ಲೆಯ ಕಿರಗುಂದ ಸೇರಿ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆದ ದೌಜನ್ಯ ಪ್ರಕರಣಗಳು ಅಮಾನವೀಯವಾಗಿವೆ. ನಾಗರಿಕ ಪ್ರಪಂಚ ತಲೆ ತಗ್ಗಿಸುವಂತವುಗಳಾಗಿವೆ’ ಎಂದರು.

ಮೆರವಣಿಗೆ: ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತ ಪಟ್ಟಣದ ವಿವಿಧ ಬೀದಿಗಳಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ ಶ್ರೀಶೈಲ ತಳವಾರ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಶರಣಪ್ಪ, ದೇವಪ್ಪ, ವಿರೇಶ, ಬಸವ್ವ, ದುರಗವ್ವ, ಕಳಕವ್ವ, ಬಸವರಾಜ ಹಾಗೂ ಸಣ್ಣ ಹನಮಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.