ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಮಗಾರಿ ಕಾಲಮಿತಿಯಲ್ಲಿ ಮುಗಿಸಿ’

ಮುನಿರಾಬಾದ್ ನೀರಾವರಿ ಕೇಂದ್ರ ವಲಯದ ಪ್ರಗತಿ ಪರಿಶೀಲನಾ ಸಭೆ
Last Updated 18 ಆಗಸ್ಟ್ 2021, 5:17 IST
ಅಕ್ಷರ ಗಾತ್ರ

ಕೊಪ್ಪಳ: ‘ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ನಮ್ಮ ಸರ್ಕಾರ ನಿರ್ಧರಿಸಿದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರೇಹಳ್ಳದ ಹೂಳು ತೆಗೆಯುವುದು, ನವಲಿ ಜಲಾಶಯ ನಿರ್ಮಾಣ, ಶಿಂಗಟಾಲೂರ ಏತ ನೀರಾವರಿ ಯೋಜನೆ, ಕೊಪ್ಪಳ ನೀರಾವರಿ ಯೋಜನೆ ಸೇರಿದಂತೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಲುವೆ ನವೀಕರಣ ಮಾಡಿ ರಾಯಚೂರು ಜಿಲ್ಲೆಯ ಕೊನೆ ಭಾಗಕ್ಕೆ ನೀರು ತಲುಪಿಸಿರುವುದು ನಮ್ಮ ಸರ್ಕಾರದ ಸಾಧನೆ ಎಂದರು.

ಜಲಾಶಯದ ಕಾಲುವೆಗಳು 3 ತಿಂಗಳು ಬಂದ್‌ ಆಗುತ್ತಿವೆ. 3 ತಿಂಗಳು ನೀರಿಲ್ಲದೆ ಜಲಾಶಯ ಕೂಡ ಖಾಲಿ ಆಗಿರುತ್ತದೆ. ಕುಡಿಯುವ ನೀರಿಗೆ ಮಾತ್ರ ನೀರು ಬಿಡಲಾಗುತ್ತದೆ. ಈ 6 ತಿಂಗಳಲ್ಲಿಜ.1ರಿಂದ ಮಾರ್ಚ್ ಅಂತ್ಯಕ್ಕೆತಾಂತ್ರಿಕ ಕಾರ್ಯ ಮುಗಿಸಿ ಕಾಮಗಾರಿಗಳ ಪ್ರಸ್ತಾವ ಸಲ್ಲಿಸಬೇಕು. ಏಪ್ರಿಲ್‌ 1ರಿಂದಲೇ ಕಾಮಗಾರಿ ಪ್ರಾರಂಭಿಸಬೇಕು. ಜೂನ್‌ವರೆಗೆ ಡ್ಯಾಂನಲ್ಲಿ ನೀರು ಕಡಿಮೆ ಇರುತ್ತದೆ. ಆಗ ಕಾಲುವೆ, ಕ್ರೆಸ್ಟ್‌ಗೇಟ್‌ಗಳ ದುರಸ್ತಿ ಮತ್ತು ಸಾಮರ್ಥ್ಯಪರಿಶೀಲನೆ, ದುರಸ್ತಿ ಹಾಗೂ ಇತರ ಕೆಲಸಗಳನ್ನು ಮುಗಿಸಿಕೊಳ್ಳಬೇಕು ಎಂದು ಹೇಳಿದರು. ಲೋಪಗಳಿಲ್ಲದ ರೀತಿ ಅಧಿಕಾರಿಗಳು, ತಂತ್ರಜ್ಞರು ಅಂದಾಜು ಪತ್ರಿಕೆ ತಯಾರಿಸಬೇಕು. ಹಾಗೇನಾದರು ಆದರೆ ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಸ್.ಟಿ.ಪಿ/ ಟಿ.ಎಸ್.ಪಿ ಯೋಜನೆ ಕೇವಲ ಚರಂಡಿ ಮತ್ತು ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸೀಮಿತ ಆಗಬಾರದು. ಪ್ರತಿ ಸಲ ಇದನ್ನೆ ಮಾಡಲಾಗುತ್ತದೆ. ಇನ್ನು ಮುಂದೆ ಈ ರೀತಿ ಆಗಬಾರದು. ಈ ಯೋಜನೆಯಲ್ಲಿ ಕಡ್ಡಾಯವಾಗಿ ವಸತಿ ಶಾಲೆ, ಅಂಗನವಾಡಿ, ಶಾಲಾ ಕಟ್ಟಡ ನಿರ್ಮಿಸಬೇಕು. ಗಂಗಾ ಕಲ್ಯಾಣ ಯೋಜನೆಯನ್ನು ಆದ್ಯತೆ ಆಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು. ಸರ್ಕಾರದ ಹಣ ಸಾರ್ವಜನಿಕನ ಆಸ್ತಿಯಾಗಿದ್ದು, ಅದನ್ನು ನಾವೆಲ್ಲರೂ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು. ನಮ್ಮ ಇಲಾಖೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಅಧಿಕಾರಿಗಳು ತ್ವರಿತವಾಗಿ ಆಗುವಂತೆ ನೋಡಿಕೊಳ್ಳಬೇಕು. ಒಂದು ಸಾರಿ ಯೋಜನೆ ರೂಪಿಸಿದ ಮೇಲೆ ಅದು ಮತ್ತೆ ಪುನರಾವರ್ತನೆಯಾಗಬಾರದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮಾತನಾಡಿ,‘ನಿಗದಿತ ಅವಧಿಯಲ್ಲಿ ನೀರಾವರಿ ಯೋಜನೆ ಮುಗಿಯದಿದ್ದರೆ ರೈತರಿಗೆ ನೀರು ಕೊಡಲು ಹೇಗೆ ಸಾಧ್ಯ?. ಅಧಿಕಾರಿಗಳು ಯಾವುದೇ ಯೋಜನೆಗಳನ್ನು ನೆಪ ಹೇಳಿ ವಿಳಂಬ ಮಾಡಬಾರದು ಎಂದರು.

ಸಂಸದ ಸಂಗಣ್ಣ ಕರಡಿ, ವೈ.ದೇವೇಂದ್ರಪ್ಪ, ಶಾಸಕರಾದ ಪರಣ್ಣ ಮುನವಳ್ಳಿ, ವೆಂಕಟರಾವ್ ನಾಡಗೌಡ, ಬಸವರಾಜ ದಢೇಸೂಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಕೃಷಿ ಬೆಳೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ,ನೀರಾವರಿ ನಿಗಮದ ಎಂ.ಡಿ ಮಲ್ಲಿಕಾರ್ಜುನ ಬಿ.ಗುಂಗೆ, ಮುಖ್ಯಎಂಜಿನಿಯರ್ ಕೃಷ್ಣಾಜಿ ಚೌವ್ಹಣ್, ಎಲ್.ಬಸವರಾಜ, ಪಿ.ಬಿ. ಪ್ರಕಾಶ, ಕೆ.ಬಿ.ಎಚ್. ಶಿವಶಂಕರ್, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT