ಯಲಬುರ್ಗಾ (ಕೊಪ್ಪಳ ಜಿಲ್ಲೆ): ‘ಸರ್ಕಾರ ಮತ್ತು ಸರ್ಕಾರಿ ವ್ಯವಸ್ಥೆ ದಲಿತರು, ದಮನಿತರು ಹಾಗೂ ಅಲ್ಪಸಂಖ್ಯಾತರನ್ನು ಸಂರಕ್ಷಿಸದೇ ಹೋದರೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಚಿತ್ರಣವೇ ಬೇರೆಮಾಡುವ ಶಕ್ತಿ ಈ ಬಹುಜನ ಸಮಾಜಕ್ಕಿದೆ. ಇದನ್ನು ಅರಿತು ಸರ್ಕಾರಗಳು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು’ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಜಿಲ್ಲಾ ದಲಿತ ದಮನಿತರ ದೌರ್ಜನ್ಯಗಳ ವಿರೋಧ ಒಕ್ಕೂಟ ಹಮ್ಮಿಕೊಂಡಿದ್ದ ಸಂಗನಾಳ ಚಲೊ ಹಾಗೂ ಸಮಾನ ಬದುಕಿನತ್ತ ಅರಿವಿನ ಜಾಥಾದ ಸೌಹಾರ್ದ ಸಮಾವೇಶದಲ್ಲಿ ಮಾತನಾಡಿದ ಅವರು ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳೇ ಜಾತಿ, ಧರ್ಮಕ್ಕೆ ವಿಶೇಷ ಪ್ರೀತಿ ತೋರಿಸುತ್ತಿವೆ. ಇಂಥ ಸರ್ಕಾರಗಳಿಂದ ಎಂತಹ ಸೌಹಾರ್ದ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ದಲಿತನನ್ನು ಕೊಂದರೆ ಮತ್ತಷ್ಟು ದಲಿತರು ಹುಟ್ಟಿಕೊಳ್ಳುತ್ತಾರೆ. ಮೇಲ್ಜಾತಿ, ಕೆಳಜಾತಿ ಎಂಬುದಿಲ್ಲ. ಸಂವಿಧಾನದ ಆಶಯವೇ ಎಲ್ಲರೂ ಒಂದೇ ಎಂಬುದಾಗಿದೆ. ಕೆಲ ಜನಪ್ರತಿನಿಧಿಗಳು ಸಂವಿಧಾನ ಬದಲಿಸಲು ಮುಂದಾಗಿದ್ದಾರೆ. ಅಂದರೆ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬೇಕಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಬಹು ಸಮಾಜಗಳು ಅರ್ಥೈಸಿಕೊಳ್ಳಬೇಕಾಗಿದೆ. ಈ ಸಮಾವೇಶ ಯಾವುದೇ ಜಾತಿ, ಸಮುದಾಯದ ವಿರುದ್ಧವಾಗಿಲ್ಲ, ಅರ್ಥಹೀನ ಘಟನೆಗಳು ಎಲ್ಲೂ ನಡೆಯಬಾರದು ಎಂಬುದು ನಮ್ಮೆಲ್ಲರ ಆಶಯವಾಗಿದೆ’ ಎಂದರು.
ಮುಖಂಡ ಪೀರ್‌ಬಾಷಾ ಹೊಸಪೇಟೆ ಮಾತನಾಡಿ ‘ಜಾತಿ ಎಂಬುದು ದೊಡ್ಡ ರೋಗವಿದ್ದಂತೆ. ಇದು ಇನ್ನಿತರ ದೊಡ್ಡ ರೋಗಕ್ಕಿಂತಲೂ ಮಿಗಿಲಾದುದು, ಒಮ್ಮೆ ಮೈ ಮನಸ್ಸಿಗೆ ಅಂಟಿಕೊಂಡರೆ ಅದು ವಾಸಿಯಾಗುವುದೇ ಇಲ್ಲ. ರೋಗ ವ್ಯಕ್ತಿಯನ್ನು ಮಾತ್ರ ನಾಶಮಾಡಿದರೆ, ಜಾತಿ ರೋಗವು ಇಡೀ ಸಂಘಟನೆಯನ್ನೇ ಹಾಳುಮಾಡುತ್ತದೆ. ಜಾತಿ ನಿರ್ಮೂಲನೆಯಲ್ಲಿ ಮಠಮಾನ್ಯಗಳ ಪಾತ್ರ ದೊಡ್ಡದಿದೆ. ಪ್ರತಿ ಜಾತಿಗೊಂದು ಮಠ ಮಾಡಿಕೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಎಷ್ಟರ ಮಟ್ಟಿಗೆ ಜಾತಿ ನಿರ್ಮೂಲನೆಗೊಳ್ಳುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ’ ಎಂದು ಹೇಳಿದರು.
ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ ‘ಮನುಷ್ಯರಾಗಿ ಹುಟ್ಟಿದ ಮೇಲೆ ಮನುಷ್ಯತ್ವದಿಂದಲೇ ಪ್ರತಿಯೊಬ್ಬರು ನಡೆದುಕೊಳ್ಳಬೇಕು. ಜಾತಿಯಿಂದ ಏನನ್ನು ಸಾಧಿಸಲಾಗುವುದಿಲ್ಲ, ಶರಣರ ನೆಲದಲ್ಲಿ ಇಂತಹ ಘಟನೆಗಳು ನಡೆಯಬಾರದಾಗಿತ್ತು. ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜಾತಿ ತಾರತಮ್ಯ ಉದ್ಭವಿಸುವುದಿಲ್ಲ. ಶರಣರು, ಸಂತರು ಜೀವಿಸಿದ ಈ ನೆಲದಲ್ಲಿ ಜಾತಿ ನಿಂದನೆ, ಭೇದ ಭಾವಗಳಿಗೆ ಅವಕಾಶ ಮಾಡಿಕೊಡಬಾರದು’ ಎಂದು ಸಲಹೆ ನೀಡಿದರು.
ಒಕ್ಕೂಟದ ಪ್ರಮುಖರಾದ ಇಂದಿರಾ ಕೃಷ್ಣಪ್ಪ, ಭೀಮ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ಮಿಥುನ್ ಕುಮಾರ, ಬಿ.ಶ್ರೀಪಾದ ಭಟ್, ಅನಗವಾಡಿ ರುದ್ರಪ್ಪ ಸೇರಿ ಅನೇಕರು ಮಾತನಾಡಿ, ‘ಜಿಲ್ಲೆಯಲ್ಲಿ ಜಾತಿ ತಾರತಮ್ಯ ನಿವಾರಣೆಗೆ ದೌರ್ಜನ್ಯಗಳ ನಿಯಂತ್ರಣಕ್ಕೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಆಗ್ರಹಿಸಿದರು.
ಜಾಥಾ: ದಲಿತ ದಮನಿತರ ದೌರ್ಜನ್ಯ ವಿರೋಧಿಸಿ ಅರಿವಿನ ಜಾಥಾ ಮಂಗಳವಾರ ಕೊಪ್ಪಳದ ಜಿಲ್ಲಾಡಳಿತ ಭವನದಿಂದ ಆರಂಭವಾಗಿತ್ತು. ಬುಧವಾರ ಸಂಜೆ ಸಂಗನಾಳ ತಲುಪಿತು.
ಪ್ರಮುಖರಾದ ಬಸವರಾಜ ಶೀಲವಂತರ, ಡಿ.ಎಚ್. ಪೂಜಾರ, ಚಂದ್ರಶೇಖರ ಗೋರೆಬಾಳ, ಬಂಗವಾದಿ ನಾರಾಯಣಪ್ಪ ಮೈಸೂರ, ಹೊರಳವಾಡಿ ನಂಜುಂಡಸ್ವಾಮಿ ಮೈಸೂರು, ಅನಿಲ ಹೊಸಮನಿ ವಿಜಯಪುರ, ಸಿ.ಕೆ.ಮಲ್ಲೇಶ ರಾಣೇಬೆನ್ನೂರ, ಚನ್ನು ಕಟ್ಟಿಮನಿ, ವಿಜಯಪುರ ರಘು, ಆನಂದ ಸಿದ್ದಾರ್ಥ, ಸಂಗನಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶಪ್ಪ ಕೋಳೂರು, ತೇಜಸ್ವಿ.ವಿ.ಪಟೇಲ್, ಕಾರಿಗನೂರು ಷಣ್ಮೂಖಪ್ಪ, ಯಲ್ಲಮ್ಮ, ಡಿ.ಎಚ್.ಪೂಜಾರ ಸೇರಿ ಅನೇಕರು ಭಾಗಿಯಾಗಿದ್ದರು.
ಸ್ವಾಮೀಜಿಗಳು ನಿಜವಾದ ಬಸವಣ್ಣನ ಅನುಯಾಯಿಗಳಾಗಿದ್ದರೆ, ಅವರ ಮೇಲೆ ಗೌರವಹೊಂದಿದ್ದರೆ, ಜಾತಿ ಆಚರಿಸುವ ಯಾವುದೇ ವ್ಯಕ್ತಿಯನ್ನು ಮಠಕ್ಕೆ ಸೇರಿಸಿಕೊಳ್ಳಬಾರದು ಜಾತಿ ಮಾಡುವ ವ್ಯಕ್ತಿಯ ಮನೆಗೆ ಮಠಾಧೀಶರು ಹೋಗಬಾರದು.-ಪೀರ್‌ಬಾಷಾ ಹೊಸಪೇಟೆ, ಹೋರಾಟಗಾರ
ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಆಯಾ ಜಿಲ್ಲಾಡಳಿತವನ್ನೇ ನೇರ ಹೊಣೆಮಾಡಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ಹೊರಿಸಬೇಕು.-ಸುಖರಾಜ ತಾಳಿಕೋಟಿ, ಹೋರಾಟಗಾರ
ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಆಯಾ ಜಿಲ್ಲಾಡಳಿತವನ್ನೇ ನೇರ ಹೊಣೆಮಾಡಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ಹೊರಿಸಬೇಕು.-ಸುಖರಾಜ ತಾಳಿಕೋಟಿ, ಹೋರಾಟಗಾರ
ಸೌಹಾರ್ದ ಸಮಾವೇಶದ ಹಕ್ಕೊತ್ತಾಯಗಳು
* ಕೊಪ್ಪಳ ಜಿಲ್ಲೆಯನ್ನು ದಲಿತರ ಹಾಗೂ ಅಲ್ಪಸಂಖ್ಯಾತರ ದೌರ್ಜನ್ಯ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು.
* ಸರ್ಕಾರ ಜಿಲ್ಲೆಯ ಈ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿಸುವ ವ್ಯವಸ್ಥೆ ಮಾಡಿ ಸ್ವತಂತ್ರವಾಗಿ ಬದುಕಲು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು.
* ಕಲ್ಯಾಣ ಕರ್ನಾಟಕವಾಗಲು ಈ ನೆಲ ಇನ್ನೂ ಪಕ್ವವಾಗಿಲ್ಲ, ಅದಕ್ಕೆ ಪೂರಕವಾದ ಜನರ ಮನಸ್ಥಿತಿ ಬದಲಾಗುವಂತೆ ಯೋಜನೆಗಳನ್ನು ರೂಪಿಸಬೇಕು. ಮತ ರಾಜಕಾರಣಕ್ಕಾಗಿ ಘೋಷಣೆ ಮಾಡಿದ ಕಲ್ಯಾಣ ಕರ್ನಾಟಕ ಹೆಸರು ಹಿಂಪಡೆದು ಚಾರಿತ್ರಿಕವಾಗಿ ಸರಿಯಾಗಿರುವ ‘ಹೈದರಾಬಾದ ಕರ್ನಾಟಕ’ ಹೆಸರು ಪುನರ್ ಘೋಷಣೆಯಾಗಬೇಕು.
* ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ನ್ಯಾಯಾಲಯ ವ್ಯವಸ್ಥೆ ಆಗಬೇಕು. ಪ್ರಕರಣಗಳನ್ನು ಆರು ತಿಂಗಳಲ್ಲಿ ಮುಕ್ತಾಯಗೊಳಿಸುವ ಕಾಲಮಿತಿಗೊಳಿಸಬೇಕು.
* ಅಸ್ಪೃಶ್ಯ ಆಚರಣೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯನ್ನೇ ಹೊಣೆ ಮಾಡಬೇಕು.
ಜಿಲ್ಲಾಧಿಕಾರಿಯನ್ನೇ ಹೊಣೆ ಮಾಡಲು ಒತ್ತಾಯ
ಜಿಲ್ಲೆಯಲ್ಲಿ ಮೇಲಿಂದ ಮೇಲೆ ದಲಿತರ ದೌರ್ಜನ್ಯ ನಡೆಯುತ್ತಿದ್ದು ಅದಕ್ಕೆ ಜಿಲ್ಲಾಧಿಕಾರಿಯನ್ನೇ ಹೊಣೆ ಮಾಡಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿ.ಸಿ. ಇದರ ಹೊಣೆ ಹೊರಬೇಕು. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎನ್ನುವ ಆಗ್ರಹ ಕೇಳಿಬಂದಿತು.
ಒಕ್ಕೂಟದ ಮುಖಂಡ ಬಸವರಾಜ ಸೂಳೆಭಾವಿ ಮಾತನಾಡಿ ‘ಜಿಲ್ಲೆಯಲ್ಲಿ ಸಾಕಷ್ಟು ದಲಿತರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇದ್ದರೂ ಅವರು ಪೊಲೀಸ್ ಠಾಣೆಯಲ್ಲಿ ದಾಖಲಾಗದೇ ಮುಚ್ಚಿಹೋಗುತ್ತಿರುವುದು ಖೇದಕರ’ ಎಂದು ಬೇಸರ ವ್ಯಕ್ತಪಡಿಸಿದರು.
‘ಯಾವುದೇ ಸಮುದಾಯವಾಗಿರಲಿ ದೌರ್ಜನ್ಯಗಳು ನಡೆಯುತ್ತಿವೆ ಎಂಬುದು ಗೊತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ಧೋರಣೆಗಳು ದಲಿತ ವಿರೋಧಿಯಾಗಿವೆ. ಉನ್ನತ ಹುದ್ದೆಗಳನ್ನು ಅಲಂಕರಿಸಿಕೊಂಡು ಕಚೇರಿಯಲ್ಲಿ ಕುಳಿತರೆ ಸಾಲದು. ಊರಲ್ಲಿ, ಹಳ್ಳಿಗಳಲ್ಲಿ ಜನರ ನಡುವೆ ಏನೆಲ್ಲ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸದೇ ಉದಾಸೀನ ಮಾಡುತ್ತಿರುವ ಸ್ಥಳೀಯ ಆಡಳಿತ ಇದ್ದೂ ಇಲ್ಲದಂತಿದೆ’ ಎಂದು ಚಾಟಿ ಬೀಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.