ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತಗತಿಯ ನ್ಯಾಯದಾನಕ್ಕೆ ಬದ್ಧ: ನ್ಯಾ.ವರಾಳೆ

Published 4 ನವೆಂಬರ್ 2023, 15:50 IST
Last Updated 4 ನವೆಂಬರ್ 2023, 15:50 IST
ಅಕ್ಷರ ಗಾತ್ರ

ಕೊಪ್ಪಳ: ‘ನ್ಯಾಯದಾನ ವ್ಯವಸ್ಥೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಕ್ರಮ ವಹಿಸಲಾಗುವುದು. ವ್ಯಾಜ್ಯಗಳು ವೇಗವಾಗಿ ಬಗೆಹರಿದು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ವಿಶ್ವಾಸ ವೃದ್ಧಿಗೊಳಿಸಲು ಬದ್ಧವಾಗಿದ್ದೇವೆ’ ಎಂದು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹೇಳಿದರು.

ಇಲ್ಲಿನ ಕುಷ್ಟಗಿ ರಸ್ತೆಯಲ್ಲಿ ಜಿಲ್ಲಾ ನ್ಯಾಯಾಲಯ ನಿರ್ಮಾಣದ ಸಂಕೀರ್ಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ ‘ನ್ಯಾಯನಿರ್ಣಯದಲ್ಲಿ ಆಗುವ ವಿಳಂಬ ತಪ್ಪಿಸಬೇಕು ಎಂದು ಸಚಿವರು ಹಾಗೂ ಸಂಸದರು ಸಲಹೆ ನೀಡಿದ್ದಾರೆ. ಯಾವುದೇ ನ್ಯಾಯಾಲಯಗಳಲ್ಲಿ ಅನಗತ್ಯವಾಗಿ ವ್ಯಾಜ್ಯಗಳು ಉಳಿಯಬಾರದು. ತ್ವರಿತಗತಿಯಲ್ಲಿ ವಿಲೇವಾರಿಯಾಗಲು ಅವಶ್ಯವಿರುವ ಮಾನವ ಸಂಪನ್ಮೂಲ ಮತ್ತು ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ’ ಎಂದರು.

‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಅವರು ‘ಕೊಪ್ಪಳ ಜಿಲ್ಲೆ ಭವ್ಯ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸ ಹೊಂದಿದೆ. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಇದೇ ಜಿಲ್ಲೆಯಲ್ಲಿದೆ. ಅಂಜನಾದ್ರಿ ಕ್ಷೇತ್ರವನ್ನು ಸರ್ಕಾರ ಅಭಿವೃದ್ಧಿ ಮಾಡುತ್ತಿರುವ ವಿಷಯ ತಿಳಿದಿದ್ದು, ಅಭಿವೃದ್ಧಿಗೊಂಡರೆ ಮೇಲಿಂದ ಮೇಲೆ ಜಿಲ್ಲೆಗೆ ಬರುತ್ತೇನೆ’ ಎಂದರು.

ಜಿಲ್ಲೆಯಲ್ಲಿ ಪ್ರಬಲ ನಾಯಕರ ಕೊರತೆ ಇದೆ. ಏನೇ ಪಡೆದುಕೊಳ್ಳಬೇಕಾದರೂ ಹೋರಾಟದ ಹಾದಿ ತುಳಿಯಬೇಕಾಗುತ್ತದೆ. ಹೋರಾಟ ಮಾಡಿದ ಬಳಿಕವೇ ನ್ಯಾಯಲಯ ಸಂಕೀರ್ಣ ನಿರ್ಮಾಣ ಸಾಧ್ಯವಾಗುತ್ತಿದೆ.
ಸಂಗಣ್ಣ ಕರಡಿ, ಸಂಸದ

‘ಜಿಲ್ಲೆಯ ನೆರೆಯಲ್ಲೇ ಹಂಪಿಯಿದೆ. ವಿದೇಶಗಳು ಪ್ರವಾಸಿಗರಿಗೆ ಇಲ್ಲಿನ ಕಲೆ, ಸಂಸ್ಕೃತಿ ತಿಳಿದುಕೊಳ್ಳಲು ಇದು ಉತ್ತಮ ತಾಣವಾಗಿದೆ’ ಎಂದರು.

‘ಜಿಲ್ಲೆಯ ಹೊಸ ನ್ಯಾಯಾಲಯ ಸಂಕೀರ್ಣ ಕಕ್ಷಿದಾರರ ಬದುಕಿಗೆ ಬೆಳಕಾಗಲಿದೆ. ಹೊಸ ಸಂಕೀರ್ಣಕ್ಕೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಇದು ಕೋರ್ಟ್‌ ಮಾತ್ರವಲ್ಲ, ನ್ಯಾಯಾಲಯದ ಆಡಳಿತ ಕೇಂದ್ರವೂ ಆಗಿರಲಿದೆ. ಕಿರಿಯ ವಕೀಲರಿಗೆ ಹಿರಿಯರು ಮಾರ್ಗದರ್ಶನ ಮಾಡಬೇಕು’ ಎಂದು ಸಲಹೆ ನೀಡಿದರು.

ಕಾನೂನು ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ ‘ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಅಗತ್ಯವಿದೆ ಎನಿಸುತ್ತದೆ. ಅನೇಕ ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ನ್ಯಾಯದಾನ ವಿಳಂಬವೂ ಸಮಾಜದಲ್ಲಿ ಸ್ವಾಸ್ಥ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನ್ಯಾಯದಾನ ವಿಳಂಬವಾಗದಂತೆ ಎಚ್ಚರಿಕೆ ವಹಿಸಲು ಮೂಲ ಅಗತ್ಯತೆಗಳನ್ನು ಒದಗಿಸಲು ಸಿದ್ಧರಿದ್ದೇವೆ. ಅತ್ಯುನ್ನತ ತಂತ್ರಜ್ಞಾನದ ಸೌಲಭ್ಯಗಳು ಕೇವಲ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳಿಗೆ ಸೀಮಿತವಾಗಬಾರದು. ಕೆಳ ಹಂತದ ನ್ಯಾಯಾಲಯಗಳಲ್ಲಿಯೂ ಈ ಸೌಲಭ್ಯಗಳು ಸಿಗಬೇಕು. ದೇಶದಲ್ಲಿ ಕೋಟ್ಯಂತರ ಪ್ರಕರಣಗಳು ಬಾಕಿಯಿವೆ. ಇವುಗಳನ್ನು ಕಡಿಮೆ ಮಾಡಲು ಹೈಕೋರ್ಟ್‌ ಕೇಳುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧ’ ಎಂದು ಭರವಸೆ ನೀಡಿದರು.

ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಮಾತನಾಡಿ ‘ಹೋರಾಟ ಮಾಡಿಯೇ ಎಲ್ಲವನ್ನೂ ಪಡೆದುಕೊಂಡ ಇತಿಹಾಸ ಕೊಪ್ಪಳ ಜಿಲ್ಲೆಗೆ ಇದೆ. ಸ್ವಾತಂತ್ರ್ಯ ಹಾಗೂ ಪ್ರತ್ಯೇಕ ಜಿಲ್ಲೆಯ ಹೋರಾಟದಲ್ಲಿ ವಕೀಲರ ಪಾತ್ರ ಪ್ರಮುಖವಾಗಿತ್ತು. ನ್ಯಾಯಾಲಯ ಸಂಕೀರ್ಣಕ್ಕೆ ನೀಲನಕ್ಷೆ ಸಿದ್ಧಗೊಂಡಿದ್ದು, ಮೊದಲ ಹಂತದ ಅನುದಾನ ಬಿಡುಗಡೆಗೆ ಪ್ರಸ್ತಾವ ಸಿದ್ದವಾಗಿದೆ’ ಎಂದು ಹೇಳಿದರು.

ಹೈಕೋರ್ಟ್‌ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ, ರಿಜಿಸ್ಟ್ರಾರ್ ಕೆ.ಎಸ್. ಭರತಕುಮಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಸಿ., ರಾಜ್ಯ ವಕೀಲರ ಪರಿಷತ್ ಸದಸ್ಯ ಆಸೀಫ್‌ ಅಲಿ, ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡೆಯ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಹೇಮಂತರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸ್ವ ಪಕ್ಷದವರಿಂದಲೇ ಸ್ವಾಭಿಮಾನಕ್ಕೆ ಧಕ್ಕೆ: ಸಂಗಣ್ಣ 

‘ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿ ಪಡೆದುಕೊಳ್ಳಲು ಹಿಂದೆ ನಮ್ಮದೇ ಬಿಜೆಪಿ‌ ಸರ್ಕಾರ ಅಧಿಕಾರದಲ್ಲಿದ್ದರು ಸಾಧ್ಯವಾಗಲಿಲ್ಲ. ಆಗ ನಮ್ಮ ಸಚಿವರು ಸ್ಪಂದಿಸಲಿಲ್ಲ’ ಎಂದು ಸಂಸದ ಸಂಗಣ್ಣ ಕರಡಿ ಬೇಸರ ವ್ಯಕ್ತಪಡಿಸಿದರು. ‘ಆಗ ಸಚಿವರಾಗಿದ್ದ ಸಿ.ಸಿ.ಪಾಟೀಲ ಹಾಗೂ ಗೋವಿಂದ ಕಾರಜೋಳ ಬಳಿ ಹೋದರೂ ಕೆಲಸ‌ವಾಗಲಿಲ್ಲ. ಇದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿತ್ತು. ಆದರೆ ಪಕ್ಷದ ಚೌಕಟ್ಟಿನಲ್ಲಿ ಇರುವ ಕಾರಣ ಏನು ಮಾತನಾಡಲು ಆಗಿಲ್ಲ. ಈ‌ ರೀತಿಯ ಬೆಳವಣಿಗೆಯಾದಾಗ ಪಕ್ಷದಿಂದ ಹೊರ ಬರಬೇಕು ಅನಿಸುತ್ತದೆ’ ಎಂದರು.

₹100 ಕೋಟಿ ಬೇಗ ಕೊಡಿ: ಕಣವಿ

ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹100 ಕೋಟಿ ತ್ವರಿತವಾಗಿ ಬಿಡುಗಡೆ ಮಾಡಬೇಕು. ಜಿಲ್ಲಾ ನ್ಯಾಯಾಧೀಶರು ಬಾಡಿಗೆ ಮನೆಗಳಲ್ಲಿದ್ದಾರೆ. ಅವರಿಗೆ ಸುಸಜ್ಜಿತ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಸರ್ಕಾರವನ್ನು ಆಗ್ರಹಿಸಿದರು. ಭೂ ಸ್ವಾಧೀನದ ಹಣ ಪಡೆದುಕೊಳ್ಳಲು ನಮ್ಮವರೇ ನ್ಯಾಯಾಲಯದಲ್ಲಿ ಪಿಐಎಲ್‌ ಸಲ್ಲಿಸಬೇಕಾದ ಸಂದರ್ಭ ಬಂತು. ಕಟ್ಟಡ ನಿರ್ಮಾಣಕ್ಕೆ ಅನುದಾನ ವಿಳಂಬವಾದರೆ ಮತ್ತೆ ಪಿಐಎಲ್‌ ಹಾಕಿ ಅನುದಾನ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಎರಡು ವರ್ಷಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಹಾಗೂ ವಕೀಲರು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಹಾಗೂ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT