ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ಜೆಡಿಎಸ್‌ ಅಭ್ಯರ್ಥಿ ಬದಲು?

ಚುನಾವಣಾ ವೇಳಾಪಟ್ಟಿಗೂ ಮೊದಲೇ ಅಭ್ಯರ್ಥಿ ಘೋಷಣೆ: ನಡೆಯದ ಪ್ರಚಾರ
Last Updated 10 ಏಪ್ರಿಲ್ 2023, 6:03 IST
ಅಕ್ಷರ ಗಾತ್ರ

ಕನಕಗಿರಿ: ವಿಧಾನಸಭಾ ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಮೊದಲೇ ಕನಕಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದರೂ ಇದುವರೆಗೆ ಪ್ರಚಾರ ಆರಂಭವಾಗಿಲ್ಲ. ಇದರಿಂದಾಗಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗುತ್ತದೆ ಎನ್ನುವ ಚರ್ಚೆ ಕ್ಷೇತ್ರದಲ್ಲಿ ಜೋರಾಗಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಅಶೋಕ ಉಮಲೂಟಿ ಜೆಡಿಎಸ್ ನಿಯೋಜಿತ ಅಭ್ಯರ್ಥಿಯಾಗಿದ್ದು, ಪಕ್ಷದ ಸಂಘಟನೆ ಹಾಗೂ ಚುನಾವಣಾ ಪ್ರಚಾರದ ಕುರಿತಂತೆ ಇಲ್ಲಿಯವರೆಗೆ ಒಂದೂ ಸಭೆ ನಡೆಸಿಲ್ಲ ಎಂದು ಕಾರ್ಯಕರ್ತರು ದೂರಿದ್ದಾರೆ. ಉಮಲೂಟಿ ಧೋರಣೆಗೆ ಬೇಸರ ವ್ಯಕ್ತಪಡಿಸಿದ ಜೆಡಿಎಸ್‌ನ ಕೆಲವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ.

ಆಕಾಂಕ್ಷಿಗಳ ದೌಡು: ಉಮಲೂಟಿ ಅವರನ್ನು ನಿಯೋಜಿತ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದರೂ ಹಲವರು ತಾವು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಿವೃತ್ತ ಸರ್ಕಾರಿ ನೌಕರ ಹನುಮೇಶ ಹುಳ್ಕಿಹಾಳ ಹಾಗೂ ಗಂಗಾವತಿ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಅವರ ಪತಿ ಸಂದೀಪಕುಮಾರ ಬ್ಯಾನರ್‌, ಫ್ಲೆಕ್ಸ್‌ಗಳ ಮೂಲಕ ಪ್ರಚಾರ ಕೈಗೊಂಡಿದ್ದಾರೆ.

ಕಾರ್ಯಕರ್ತರ ಕೊರತೆ: ಕ್ಷೇತ್ರದಲ್ಲಿ ಜನತಾದಳಕ್ಕೆ ಮುಖಂಡರು ಹಾಗೂ ಕಾರ್ಯಕರ್ತರ ಕೊರತೆ ಎದುರಾಗಿದೆ. 1978ರಲ್ಲಿ ಕನಕಗಿರಿ ಕ್ಷೇತ್ರ ರಚನೆಯಾಗಿದ್ದು, 1989ರವರೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಗೆಲವಿನ ನಗೆ ಕಂಡಿದ್ದು, 1994ರಲ್ಲಿ ಸಾಲೋಣಿ ನಾಗಪ್ಪ ಮಾತ್ರ. 2004ರಲ್ಲಿ ಕ್ಷೇತ್ರದವ ಬಿ.ಜಿ. ಅರಳಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ 8 ಸಾವಿರ ಮತಗಳನ್ನು ಪಡೆದಿದ್ದರು.

ಮೀಸಲು ಕ್ಷೇತ್ರದಲ್ಲಿ ನೆಲೆಯಿಲ್ಲ: ಕನಕಗಿರಿ 2008ರಲ್ಲಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿವರೆಗೆ ಹಿಂದಿನ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಂತಾಗಿದೆ.

2008ರಲ್ಲಿ ಯಲಬುರ್ಗಾದ ಯಮನೂರಪ್ಪ ನಡಲಮನಿ,
2013ರಲ್ಲಿ ಕುಷ್ಟಗಿ ತಾಲ್ಲೂಕಿನ ಪ್ರಕಾಶ ರಾಠೋಡ ಹಾಗೂ 2018ರಲ್ಲಿ ಗಂಗಾವತಿಯ ಮಂಜುಳಾ ಡಿಎಂ ರವಿ ಸ್ಪರ್ಧಿಸಿದರೂ ಮೂರು ಸಾವಿರ ಮತಗಳನ್ನು ಪಡೆದುಕೊಂಡ ಉದಾಹರಣೆ ಇಲ್ಲ. ಸ್ಪರ್ಧಿಸಿದ ಮೂವರು ಅಭ್ಯರ್ಥಿಗಳೂ ಚುನಾವಣೆಗೆ ಮಾತ್ರ ಸೀಮಿತರಾಗಿದ್ದು, ಆನಂತರ ಪಕ್ಷ ಸಂಘಟನೆಗೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.

‘ಹಲವರಿಂದ ಅರ್ಜಿ ಸಲ್ಲಿಕೆ’

ಅಶೋಕ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಸಿಲ್ಲ. ಪಕ್ಷದ ಪದಾಧಿಕಾರಿಗಳ ಆಯ್ಕೆ ಮಾಡಿಲ್ಲ. ಟಿಕೆಟ್ ಪಡೆಯಲು ಹಲವರು ಅರ್ಜಿ ಸಲ್ಲಿಸಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವಿಷಯವನ್ನು ವರಿಷ್ಠರ ಗಮನಕ್ಕೆ ತರಲಾಗಿದೆ. ಅಭ್ಯರ್ಥಿ ಬದಲಾಗುವ ಸಾಧ್ಯತೆಯಿದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಮಹಾಂತಯ್ಯಮಠ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT