ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ ಉತ್ಸವ: ಮೆರವಣಿಗೆಯಲ್ಲಿ ಕಲಾತಂಡಗಳ ಸಂಭ್ರಮ

Published 2 ಮಾರ್ಚ್ 2024, 7:37 IST
Last Updated 2 ಮಾರ್ಚ್ 2024, 7:37 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ರಾಜಬೀದಿಯಲ್ಲಿ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ಸಾರೋಟು, ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಯನ್ನು ಹೊತ್ತುತಂದ ಗಜರಾಜನ ರಾಜಗಾಂಭೀರ್ಯ, ಕಳಸ ಹೊತ್ತ ಮಹಿಳೆಯರು, ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಇತಿಹಾಸ ಸಾರುವ ಸಾರೋಟ, ಪಲ್ಲಕ್ಕಿ, ಉಡಚ್ಚಪ್ಪನಾಯಕ ವೇಷಧಾರಿಗಳು. ಮತ್ತೊಂದೆಡೆ ಕಿವಿಗಡಚಿಕ್ಕುವ ತಮಟೆಯ ಸದ್ದು, ಮತ್ತೊಂದೆಡೆ ವಾಲಗ, ನೆರೆದಿದ್ದ ಜನಸ್ತೋಮದಿಂದ ಜೈಕಾರದ ಘೋಷಣೆ, ಮೈನವಿರೇಳಿಸಿದ ಜಾನಪದ ಕಲಾ ತಂಡಗಳ ಮನಮೋಹಕ ಪ್ರದರ್ಶನ.

ಇದು ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ಕನಕಗಿರಿ ಉತ್ಸವದಲ್ಲಿ‌ ಮೊದಲ ದಿನವಾದ ಶನಿವಾರ ಕಂಡುಬಂದ ದೃಶ್ಯಗಳು. ವಿಜೃಂಭಣೆಯಿಂದ ನಡೆದ ಉತ್ಸವದಲ್ಲಿ ಹಬ್ಬದ ವಾತಾವರಣ ಕಂಡುಬಂತು.

ಎದುರು ಆಂಜನೇಯ ದೇವಸ್ಥಾನದಿಂದ ಹೊರಟ ಮೆರವಣಿಗೆ ಕನಕಾಚಲಪತಿ ದೇವಸ್ಥಾನಕ್ಕೆ ಬಂದು ಸೇರಿದವು‌. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಚಿವರು ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಾಂಸ್ಕೃತಿಕ ರಂಗು: ಮೆರವಣಿಗೆಯಲ್ಲಿ ಸಾಗಿಬಂದ ಕನಕಾಚಲಪತಿಯನ್ನು ಹೊತ್ತು ರಾಜಗಂಭೀರ್ಯದಿಂದ ಸಾಗಿದ ಗಜರಾಜನ ನಡಿಗೆ, ಸಾರೋಟು, ಕಾಣಲು ರಸ್ತೆಯುದ್ದಕ್ಕೂ ಜನಸ್ತೋಮವೇ ನೆರೆದಿತ್ತು. ಇದಕ್ಕೆ ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ, ಲಂಬಾಣಿ ಕುಣಿತ, ಕಂಸಾಳೆ, ವೀರಗಾಸೆ, ಕೀಲು ಕುದುರೆಯಾಟ, ಬೊಂಬೆಯಾಟ, ಸೋಮನ ಕುಣಿತ, ನಗಾರಿ, ನಂದಿಧ್ವಜ ತಂಡಗಳು ಸಾಥ್‌ ನೀಡಿದವು.

ಎದುರು ಆಂಜನೇಯ ದೇವಸ್ಥಾನದಿಂದ ಕನಕಾಚಲಪತಿ ದೇವಸ್ಥಾನದವರೆಗೆ ತಂಗಡಗಿ ರಾಜಬೀದಿಯಲ್ಲಿ ಸಾಗಿದ ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿ, ಡೊಳ್ಳು ಬಾರಿಸಿದರು.

ಜಿಲ್ಲಾಧಿಕಾರಿ ನಳಿನ್ ಅತುಲ್,‌ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು .

ಶನಿವಾರ (ಇಂದು) ಸಂಜೆ ಆರು ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT