ಸೋಮವಾರ, ಮೇ 16, 2022
27 °C
ಶೇಖರಗೌಡ ಮಾಲಿ ಪಾಟೀಲ, ಮಹೇಶ ಜೋಶಿ ಬಣಗಳ ಮೇಲಾಟ

ಕೊಪ್ಪಳ ಜಿಲ್ಲೆಯಲ್ಲಿ ಕಸಾಪ ಪೈಪೋಟಿ: ತ್ರಿಕೋನ ಸ್ಪರ್ಧೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕನ್ನಡ ಸಾಹಿತ್ಯ ಪರಿಷತ್ತಿಗೆ ನ.21ರಂದು ಚುನಾವಣೆ ನಡೆಯಲಿದ್ದು, ಜಿಲ್ಲಾ ಸಮಿತಿ ಕಣದಲ್ಲಿ ನಾಲ್ವರು ಅಭ್ಯರ್ಥಿಗಳಿದ್ದಾರೆ. ಜಿದ್ದಾಜಿದ್ದಿನ ಪ್ರಚಾರದಲ್ಲಿ ತೊಡಗಿದ್ದಾರೆ. ಸಾಹಿತ್ಯ ವಲಯದಲ್ಲಿ ವಿಜಯಮಾಲೆ ಯಾರಿಗೆ ದೊರೆಯಲಿದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.

ಕಸಾಪ ಕೂಡಾ ರಾಜಕೀಯ, ಜಾತಿಯಿಂದ ಹೊರತಾಗಿಲ್ಲ. ಶೇಖರಗೌಡ ಮಾಲಿಪಾಟೀಲ ಅವರ ಬಿಗಿ ಹಿಡಿತದಲ್ಲಿರುವ ಕಸಾಪಕ್ಕೆ ಅವರ ಬೆಂಬಲಿಗರೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈಗ ಅವರು ಕಸಾಪ ರಾಜ್ಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಜಿಲ್ಲೆಯತ್ತ ಹೆಚ್ಚು ಗಮನ ಹರಿಸಲು ಆಗುತ್ತಿಲ್ಲ. ಅಲ್ಲದೆ, ಸ್ವಂತ ಜಿಲ್ಲೆಯಲ್ಲಿಯೇ ಅಭ್ಯರ್ಥಿ ಆಯ್ಕೆ ಹಾಗೂ ಕೆಲವು ಬಣಗಳ ವಿರೋಧದಿಂದಾಗಿ ಹಿನ್ನಡೆಯಾಗಲಿದೆಯೇ ಎಂಬ ಆತಂಕ ಕಾಡುತ್ತಿದೆ.

ಈ ಹಿಂದೆ ಒಂದು ಅವಧಿಗೆ ಅಧ್ಯಕ್ಷರಾಗಿದ್ದ ವೀರಪ್ಪ ಮಲ್ಲಪ್ಪ ನಿಂಗೋಜಿ, ಹಿರೇಸಿಂದೋಗಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹನುಮಂತಪ್ಪ ಅಂಡಗಿ, ಗಂಗಾವತಿಯ ಶಿಕ್ಷಕ ಶರಣೇಗೌಡ ಪೊಲೀಸ ಪಾಟೀಲ, ಹನಮಂತಪ್ಪ ವಡ್ಡರ ಕೋಳಿಹಾಳ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಐದಾರು ತಿಂಗಳಿಂದ ಸಿದ್ಧತೆಗಳನ್ನು ಮಾಡಿಕೊಂಡು ಜಿಲ್ಲೆಯಾದ್ಯಂತ ಎಡೆಬಿಡದೆ ಪ್ರಚಾರ ಮಾಡುತ್ತಿದ್ದಾರೆ.

ವೀರಪ್ಪ ನಿಂಗೋಜಿ ತಮ್ಮ ಅವಧಿಯಲ್ಲಿ ಮಾಡಿದ ಕಾರ್ಯ, ಸೇವೆಗೆ ಮತ ನೀಡುವಂತೆ ಮನವಿ ಮಾಡಿದರೆ, ಶರಣೇಗೌಡ ಸಂಘಟನೆ, ಸಾಹಿತ್ಯದ ಧ್ವನಿಯಾಗಲು ಹಾಗೂ ಹನಮಂತಪ್ಪ ಅಂಡಗಿ ತಾವು ಅಪ್ಪಟ ಸಾಹಿತಿ, ಸಂಘಟಕ, ಅನೇಕ ಕೃತಿಗಳನ್ನು ರಚಿಸಿದ್ದು, ನಮ್ಮ ಆಯ್ಕೆಯೇ ಸೂಕ್ತ ಎಂದು ಪ್ರಚಾರ ಮಾಡುತ್ತಿದ್ದಾರೆ. ಇನ್ನೂ ಹನಮಂತಪ್ಪ ಕನ್ನಡ ತಾಯಿ ಸೇವೆಗೆ ಅವಕಾಶ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.

ಈ ಎಲ್ಲದರ ಮಧ್ಯೆ ರಾಜ್ಯ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಹೇಶ ಜೋಶಿ ಅವರಿಗೆ ನಿಂಗೋಜಿ, ಅಂಡಗಿ ಮತ್ತು ಹನಮಂತಪ್ಪ ವಡ್ಡರ ಬೆಂಬಲ ಸೂಚಿಸಿದ್ದಾರೆ. ಶೇಖರಗೌಡರ ಬಣದಲ್ಲಿ ಶರಣೇಗೌಡರು ಗುರುತಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕಸಾಪದಲ್ಲಿ ತಮ್ಮ ಹಿಡಿತ ತಪ್ಪಬಾರದು ಎಂದು ತೀವ್ರ ಪೈಪೋಟಿಯ ಪ್ರಚಾರ ಮತ್ತು ಲೆಕ್ಕಾಚಾರ ನಡೆಸಿದ್ದಾರೆ.

ಈ ಬಾರಿಯ ಕಸಾಪ ಚುನಾವಣೆಯಲ್ಲಿ ಹಿಂದುಳಿದ, ಮುಂದುವರಿದ, ಹೊಸ ಮುಖ ಸೇರಿದಂತೆ ವಿವಿಧ ವಿಷಯಗಳು ಚರ್ಚೆಗೆ ಬರುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ತಲುಪಲು ಸತತ ಯತ್ನ ನಡೆಸಿದ್ದಾರೆ. ಕಸಾಪದಲ್ಲಿ ಹಿರಿಯರಾದ ವೀರಣ್ಣ ನಿಂಗೋಜಿ ಸರಳ, ವಿವಾದತೀತ ವ್ಯಕ್ತಿಯಾಗಿದ್ದು, ಹೆಚ್ಚಿನವರ ಬೆಂಬಲ ದೊರೆಯಲಿದೆ ಎನ್ನಲಾಗುತ್ತಿದೆ.

ಹನಮಂತಪ್ಪ ಅಂಡಗಿ ಕರ್ನಾಟಕ ಜಾನಪದ ಪರಿಷತ್‌ ಸೇರಿದಂತೆ ವಿವಿಧ ಸಂಘಟನೆಗಳ ಮೂಲಕ ಸಾಹಿತ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಜಿಲ್ಲೆಯ ಜನರು ಗುರುತಿಸುತ್ತಾರೆ. ಶರಣೇಗೌಡ ಪಾಟೀಲ ಶಿಕ್ಷಕ ವೃತ್ತಿ ಜತೆಗೆ ಸಂಘಟನೆಯಲ್ಲಿ ಹೆಸರು ಮಾಡಿದ್ದು, ಶೇಖರಗೌಡ ಮಾಲಿಪಾಟೀಲ ಅವರ ಕೃಪಾಕಟಾಕ್ಷ ಇದೆ ಎನ್ನಲಾಗುತ್ತಿದೆ. ವಡ್ಡರ ಸಾಂಕೇತಿಕ ಸ್ಪರ್ಧೆ ಕಂಡು ಬಂದಿದೆ.

ಕಸಾಪದ ಹಿಡಿತ ಕೈತಪ್ಪುವ ಭೀತಿ ಕೆಲವರಿಗೆ ಇರುವುದರಿಂದ ಅಚ್ಚರಿಯ ಫಲಿತಾಂಶ ಬಂದರೂ ಅಚ್ಚರಿಯಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು