ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದೂರಗೆ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಒತ್ತಾಯ

ಕಸಾಪ ಆಜೀವ ಸದಸ್ಯರ ಸಭೆ: ಸಾವಿತ್ರಿ ಮುಜುಂದಾರ್‌ಗೆ ಅವಕಾಶಕ್ಕೆ ಮನವಿ
Last Updated 24 ಫೆಬ್ರುವರಿ 2021, 12:18 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಹನುಮಸಾಗರದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲೆಯ ಸಾಹಿತಿಗಳು ಸಭೆ ಸೇರಿ ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಕಸಾಪ ಆಜೀವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪಸ್ಥಾನದ ಆಕಾಂಕ್ಷಿ ಹನುಮಂತಪ್ಪ ಅಂಡಗಿ,‘ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ‘ಇದು ನನ್ನ ಭಾರತ’ (1977), ‘ಕುದರಿಮೋತಿ ಮತ್ತು ನೀಲಗಿರಿ’ (1989), ‘ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು’ (2001), ‘ಗುಲಗುಂಜಿ’ (2009) ಕವನ ಸಂಕಲನ ಹೊರ ತಂದಿದ್ದಾರೆ. ‘ವರ್ತಮಾನ’ (ಪತ್ರಿಕಾ ಅಂಕಣಗಳ ಬರಹ), ‘ಸಹಜ ವಿಮರ್ಶೆ’, ‘ದ್ರಾವಿಡರು ನಾವು ದ್ರಾವಿಡರು’ ಗ್ರಂಥಗಳನ್ನು ಹೊರತಂದಿದ್ದಾರೆ’ ಎಂದರು.

ಹಿರಿಯ ಸಾಹಿತಿವಿಮಾಲಾ ಇನಾಮದಾರ ಮಾತನಾಡಿ,‘ಬೆಟ್ಟದೂರ 4 ದಶಕಗಳಿಂದ ಕನ್ನಡಮ್ಮನ ಸೇವೆ ಮಾಡುತ್ತ ಬಂದಿದ್ದಾರೆ. ಬಂಡಾಯ ಕವಿಗಳಾಗಿ, ಸಾಹಿತಿಗಳಾಗಿ, ಹೋರಾಟಗಾರರಾಗಿ, ಸಂಘಟಕರಾಗಿ ಸೇವೆ ಸಲ್ಲಿಸುತ್ತಿರುವುದು ಇಡೀ ರಾಜ್ಯಕ್ಕೆ ತಿಳಿದ ಸಂಗತಿ. ಕುದರಿಮೋತಿ ಪ್ರಕರಣದಿಂದ ಹಿಡಿದು 371(ಜೆ)ನೇ ಕಲಂ ಜಾರಿಗಾಗಿ ನಡೆದ ಹೋರಾಟಗಳವರೆಗೂ ಎಲ್ಲ ಜನಪರ ಚಳವಳಿಗಳ ಮುಂಚೂಣಿಯಲ್ಲಿ ಇದ್ದಾರೆ’ ಎಂದರು.

‘ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಹಂಪಿ ಕನ್ನಡವಿ.ವಿ. ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿಯೇ ಪ್ರಪ್ರಥಮ ಎನ್ನಲಾದ ‘ತಿರುಳ್ಗನ್ನಡ ಸಾಹಿತಿಗಳ’ ಸಹಕಾರದ 2ನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರೆದಿರುವುದು ಅಭಿಮಾನದ ಸಂಗತಿ’ ಎಂದರು.

ಜಿ.ಎಸ್.ಗೋನಾಳ ಮಾತನಾಡಿ,‘ಮಾನವೀಯ ಮೌಲ್ಯಗಳಿಗಾಗಿ ಸದಾ ಮಿಡಿಯುತ್ತಿರುವ ಇವರನ್ನು ಹನುಮಸಾಗರದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ, ಅವರ ಅಭಿಮಾನಿಗಳು,ಶಿಷ್ಯರು, ಸಾಹಿತಿಗಳು ಹಿಗ್ಗುವುದರಲ್ಲಿ ಸಂದೇಹವಿಲ್ಲ’ ಎಂದರು.

‘ಸಾಹಿತಿ ಸಾವಿತ್ರಿ ಮುಜುಮದಾರರು ‘ಹೆಣ್ಣು ಹೆಜ್ಜೆ’, ‘ಸಾರ್ಥಕ ಜೀವನ’ ಮುಂತಾದ ಗ್ರಂಥಗಳನ್ನು ಹೊರತಂದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಶ್ರೀಕೃಷ್ಣದೇವರಾಯವಿವಿ ಹಾಗೂ ವಿಜಯಪುರದ ಅಕ್ಕಮಹಾದೇವಿವಿವಿ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರಲ್ಲಿ ಯಾರಾದರೊಬ್ಬರನ್ನು ಹನುಮಸಾಗರದಲ್ಲಿ ನಡೆಯಲಿರುವ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು’ ಎಂದುಮನವಿ ಮಾಡಿದರು.

ಸಭೆಯಲ್ಲಿ ಆಜೀವ ಸದಸ್ಯರಾದ ವಿರೂಪಾಕ್ಷಪ್ಪ ಬೇಳೂರು, ಭುಜಂಗಸ್ವಾಮಿ ಇನಾಮದಾರ, ಬಸಯ್ಯ ಹಿರೇಮಠ, ಗಣೇಶ ಹೊರತಟ್ನಾಳ, ವಸಂತ ಕುಟುಗನಹಳ್ಳಿ, ಮಾರುತಿ ವಾಲೀಕಾರ, ಮಂಜುನಾಥ ಚಿತ್ರಗಾರ, ಸುರೇಶ ಕಂಬಳಿ, ದೇವಪ್ಪ ಕಟ್ಟಿಮನಿ, ವೀರಣ್ಣ ಹುರಕಡ್ಲಿ, ಉಮೇಶ ಸುರ್ವೆ ಹಾಗೂ ಲಕ್ಷ್ಮಣ ಪೀರಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT