ಕುಕನೂರು: ಮಾಜಿ ಸಚಿವ ದಿವಂಗತ ಕೆ.ಎಚ್.ಪಾಟೀಲ್ ಅವರು ರಾಜ್ಯ ಕಂಡ ಧೀಮಂತ ರಾಜಕಾರಣಿ ಎಂದು ಸಿ.ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ತಾಲ್ಲೂಕಿನ ಶಿರೂರು ಪುನರ್ವಸತಿ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ಜರುಗಿದ ಮಾಜಿ ಸಚಿವ ದಿ. ಕೆ.ಎಚ್ ಪಾಟೀಲ್ ಅವರ ಮೂರ್ತಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಹಿರೇಹಳ್ಳ ಜಲಾಶಯ ನಿರ್ಮಾಣ ಕಾಮಗಾರಿ ಆರಂಭವಾಯಿತು. ತುಂಗಭದ್ರಾ ನದಿಗೆ ಮರಳು ಹರಿದು ಹೋಗಬಾರದೆಂದು ಜಲಾಶಯ ನಿರ್ಮಾಣ ಕೈಗೆತ್ತಿಕೊಳ್ಳಲಾಯಿತು. ನಾನು ಮೊದಲ ಸಲ ಶಾಸಕನಾಗಿದ್ದಾಗ ಪುನರ್ವಸತಿ ಗ್ರಾಮ ಅರಕೇರಿಗೆ ಅಭಿವೃದ್ಧಿ ಕಾರ್ಯ ಮಂಜೂರು ಮಾಡಿಸಿದೆ. 2003ರಲ್ಲಿ ಮುತ್ತಾಳ, ಶಿರೂರು, ವೀರಾಪೂರ ಗ್ರಾಮಗಳನ್ನು ಪುನರ್ವಸತಿ ಗ್ರಾಮಗಳನ್ನಾಗಿ ಮಾಡಲು ಎಚ್.ಕೆ ಪಾಟೀಲ್ ಅವರ ಸಹಕಾರದಿಂದ ಪುನರ್ವಸತಿ ಗ್ರಾಮಗಳನ್ನು ಮಂಜೂರು ಮಾಡಿಸಿದೆ. ಮೊದಲಿಗೆ ನೂತನ ಪುನರ್ವಸತಿ ಗ್ರಾಮಗಳ ಮಂಜೂರಾತಿ ಸಮಸ್ಯೆಯಾಗಿತ್ತು ಎಂದರು.
ನಂತರ ಗ್ರಾಮಗಳನ್ನು ಶೀತಪೀಡಿತ ಪ್ರದೇಶ ಎಂದು ಮಹಾರಾಷ್ಟ್ರದಲ್ಲಿ ಗ್ರಾಮ ಸ್ಥಳಾಂತರ ಮಾಡಿದ ವರದಿ ಆಧಾರಿಸಿ ಈ ವಾದವನ್ನು ಎಚ್.ಕೆ ಪಾಟೀಲ್ ಅವರ ಮುಂದೆ ಮಂಡಿಸಿ ಪುನರ್ವಸತಿ ಗ್ರಾಮಗಳನ್ನು ಮಂಜೂರು ಮಾಡಿಸಿದೆ ಎಂದರು.
ಶಿರೂರು 72 ಎಕರೆ, ವೀರಾಪೂರ 108 ಎಕರೆ, ಅರಕೇರಿ 40 ಎಕರೆ ಪ್ರದೇಶ ಮುಳುಗಡೆ ಆಗಿದೆ. ಆಗಿನ ಸಿಎಂ ಧರ್ಮಸಿಂಗ್ ಅವರಿಂದ ₹ 6 ಕೋಟಿ ಹಣ ಮಂಜೂರು ಮಾಡಿಸಿದೆ. ಜನರಿಗೆ ನೇರ ಹಣ ಬಂತು. 2012ರಲ್ಲಿ ಪುನರ್ವಸತಿ ಗ್ರಾಮಗಳ ಸಂಪೂರ್ಣ ಮೂಲ ಸೌಕರ್ಯಕ್ಕೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಇಲ್ಲಿಯ ಜನರು ಹಳೆ ಗ್ರಾಮಗಳನ್ನು ಬಿಟ್ಟು ಪುನರ್ವಸತಿ ಗ್ರಾಮಕ್ಕೆ ಬಂದು ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಹನುಮಂತಪ್ಪ ದಾಸರ ಮಾತನಾಡಿ, ₹ 64 ಕೋಟಿ ವೆಚ್ಚದಲ್ಲಿ ನಾಲ್ಕು ಪುನರ್ವಸತಿ ಗ್ರಾಮಗಳ ಅಭಿವೃದ್ಧಿ ಮಾಡಲಾಗಿದೆ. ಹಿರೇಹಳ್ಳದಲ್ಲಿ 1.64 ಟಿಎಂಸಿ ಹಿನ್ನೀರು ನಿಲ್ಲುತ್ತದೆ. ಈ ನೀರು 1200 ಹೆಕ್ಟೇರ್ ಜಮೀನಿಗಳ ನೀರಾವರಿಗೆ ಅನುಕೂಲವಾಗಿದೆ. ಹಿನ್ನೀರಿನಿಂದ ನಾಲ್ಕು ಗ್ರಾಮಗಳು ಮುಳುಗಡೆಯಾಗಿದ್ದು, ಅವುಗಳ ಅಭಿವೃದ್ಧಿಗೆ ಶಾಸಕರು ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು.
ಇಲಾಖೆ ಅಧಿಕಾರಿ ರಾಘವೇಂದ್ರ ಜೋಶಿ, ಮೂರ್ತಿ ನಿರ್ಮಾಣಕ್ಕೆ ಸಿ.ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ₹ 40 ಲಕ್ಷ ನೀಡಿದ್ದಾರೆ. ಪುನರ್ವಸತಿ ಗ್ರಾಮಗಳನ್ನು ಮಂಜೂರು ಮಾಡಿಸಿ ಜನರಿಗೆ ಬಸವರಾಜ ರಾಯರಡ್ಡಿ ಹಾಗೂ ಕೆ.ಎಚ್ ಪಾಟೀಲ್ ಅವರು ಅನುಕೂಲ ಕಲ್ಪಿಸಿದರು. ಅವರನ್ನು ಸ್ಮರಣೆ ಮಾಡುವ ಕಾರ್ಯ ಅತ್ಯಗತ್ಯ. ಆ ಕಾರಣ ಮೂರ್ತಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ತಹಶೀಲ್ದಾರ್ ಎಚ್.ಪ್ರಾಣೇಶ, ಎಂ.ಆರ್.ಪಾಟೀಲ್, ಆರ್.ಆರ್.ಓದಗೌಡ್ರು, ಡಾ.ನಾಗನೂರು, ಹನುಮಂತಗೌಡ ಚಂಡೂರು, ಬಸವರಾಜ ಉಳ್ಳಾಗಡ್ಡಿ, ವಿರುಪಾಕ್ಷಪ್ಪ ತಳಕಲ್ಲ, ಈರಪ್ಪ ಕುಡಗುಂಟಿ, ಈಶಪ್ಪ ಶಿರೂರು, ಅಶೋಕ ತೋಟದ, ಸತ್ಯನಾರಾಯಣಪ್ಪ ಹರಪನಹಳ್ಳಿ, ಯಂಕಣ್ಣ ಯರಾಸಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.