ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸ್‌ಗೆ ಕ್ಲೀನ್‌ ಚಿಟ್‌ ನೀಡಿದ ಸಮಿತಿ

ಬೋಧಕ ಆಸ್ಪತ್ರೆಯಲ್ಲಿ ಮಕ್ಕಳ ಮಾರಾಟ ಆರೋಪದ ಪ್ರಕರಣ, ಸತ್ಯಾಸತ್ಯತೆ ಪರಿಶೀಲಿಸಲು ದೂರು
Published 21 ಏಪ್ರಿಲ್ 2024, 6:35 IST
Last Updated 21 ಏಪ್ರಿಲ್ 2024, 6:35 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ಕಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ ಕೇಳಿಬಂದಿದ್ದ ಮಕ್ಕಳ ಮಾರಾಟ ಆರೋಪದ ಪ್ರಕರಣ ಕುರಿತು ವರದಿ ಸಿದ್ದಪಡಿಸಿರುವ ತನಿಖಾ ತಂಡದ ಅಧಿಕಾರಿಗಳು ನರ್ಸ್ ತೈರುನ್ನೀಸಾ ಸೈಯದ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಮಕ್ಕಳ ಮಾರಾಟ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದ್ದು ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಕಳೆದ ವರ್ಷ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ಕಿಮ್ಸ್‌ ನಿರ್ದೇಶಕರಿಗೆ ಪತ್ರ ಬರೆದು ವರದಿ ಕೊಡುವಂತೆ ಸೂಚಿಸಿದ್ದರು.

ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಹಲವು ವರ್ಷಗಳಿಂದ ತೈರುನ್ನೀಸಾ ಎಂಬುವರು ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದು, ಇವರು ಆಸ್ಪತ್ರೆಗೆ ಬರುವ ಬಡ ಹೆಣ್ಣು ಮಕ್ಕಳಿಗೆ ಹೆರಿಗೆ ಮಾಡಿಸಿ ಆ ಮಕ್ಕಳು ಮರಣ ಹೊಂದಿದರು ಎಂದು ಸುಳ್ಳು ದಾಖಲಾತಿ ಸೃಷ್ಟಿಸಿ ಮಗುವನ್ನು ತಾವೇ ಆರೈಕೆ ಮಾಡುತ್ತಿದ್ದಾರೆ. ಇದಕ್ಕೆ ಬೇಕಾದ ಎಲ್ಲ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ಬೇರೆ ಪೋಷಕರಿಗೆ ಮಗು ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು.

ಅನಾಮದೇಯ ದೂರು ಆಗಿದ್ದ ಕಾರಣ ಎರಡೂ ಕಡೆ ವಿಚಾರಣೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಆರೋಪ ಹೊತ್ತಿದ್ದ ನರ್ಸ್‌ ತೈರುನ್ನೀಸಾ ಅವರ ಹೇಳಿಕೆ ಪಡೆದು ವರದಿ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.  

ಈ ಕುರಿತು ತನಿಖೆ ನಡೆಸಿ ವರದಿ ಸಿದ್ಧಪಡಿಸಿರುವ ಸಮಿತಿ ‘ಕೇಸ್‌ಶೀಟ್‌, ಪಾರ್ಚಿನೇಶನ್ ರಿಜಿಸ್ಟರ್, ಐಯುಡಿ ಮತ್ತು ಜನನ ನೋಂದಣಿ ದಾಖಲಾತಿಗಳನ್ನು ಪರಿಶೀಲಿಸಲಾಗಿದ್ದು ದೂರಿಗೆ ಸಂಬಂಧಿಸಿದಂತೆ ಯಾವುದೇ ತಿದ್ದುಪಡಿಗಳು ಕಂಡುಬಂದಿಲ್ಲ. ಆರೋಪ ಹೊತ್ತಿದ್ದ ನೌಕರಳನ್ನು ವಿಚಾರಿಸಲಾಗಿದ್ದು, ಆರೋಪ  ಸತ್ಯಕ್ಕೆ ದೂರವಾದದ್ದು ಎಂದು ಲಿಖಿತ ಹಾಗೂ ಮೌಖಿಕ ಹೇಳಿಕೆ ನೀಡಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತನಿಖೆ ನಡೆಸುವಂತೆ ಸೂಚಿಸಿದ ಬಳಿಕ ಮಾರ್ಚ್‌ 4ರಂದು ಮೊದಲ ವಿಚಾರಣಾ ಸಭೆ ನಡೆದಿದ್ದು ‘2017ರ ಏ. 25ರಂದು ಮಧ್ಯರಾತ್ರಿ 1.10 ನಿಮಿಷಕ್ಕೆ ಗಂಡು ಮಗು ಜನನವಾಗಿದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಯಾವುದೇ ತಿದ್ದುಪಡಿ ಕಂಡುಬಂದಿಲ್ಲ. ಆ ಮಗುವಿನ ತಾಯಿಯ ಹೆಸರು ತೈರುನ್ನಿಸಾ (28 ವರ್ಷ) ಎಂದು ನಮೂದಿಸಲಾಗಿದೆ. ಅದೇ ದಿನ ಬೋಧಕ ಆಸ್ಪತ್ರೆಯಲ್ಲಿ ಒಟ್ಟು 13 ಹೆರಿಗೆಗಳು ಆಗಿದ್ದು  ಅಂದಿನ ಕರ್ತವ್ಯದಲ್ಲಿ ಸ್ತ್ರೀರೋಗ ತಜ್ಞೆ ಡಾ. ತುಳಸಿ ಪ್ರಿಯಾ, ಶುಶ್ರೂಷಕರಾದ ಟಿ.ಎ. ಸೈಯದಾ, ಗ್ರೂಪ್‌ ಡಿ ಸಿಬ್ಬಂದಿ ಸಹನಾ, ಅನ್ನಮ್ಮ ಇದ್ದರು. ಇವರು ಮಕ್ಕಳ ಕಳ್ಳತನ ನಡೆದಿದೆ ಎಂದು ಆರೋಪಿಸಲಾದ ದಿನದಂದು ರಾತ್ರಿ ಪಾಳೆಯಲ್ಲಿ ಕರ್ತವ್ಯ ನಿರ್ವವಣೆ ಮಾಡಿದ್ದರು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ. ಮಾ. 11ರಂದು ಪರಿಶೀಲನಾ ಸಮಿತಿಯ ಎರಡನೇ ಸಭೆ ನಡೆದಿದ್ದು ಆಗಲೂ ಇದೇ ಅಂಶಗಳು ಪ್ರಧಾನವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT