ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಅಂಗಡಿ ನಿಧನ

ರಾಜಶೇಖರ ಅಂಗಡಿ ಹಲಗೇರಿ (52) ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
Published 23 ಮಾರ್ಚ್ 2024, 2:52 IST
Last Updated 23 ಮಾರ್ಚ್ 2024, 2:52 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳದ ಸಕ್ರಿಯ ಕನ್ನಡಪರ ಹೋರಾಟಗಾರ ಆಗಿದ್ದ ಹಾಗೂ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷರಾಗಿದ್ದ ರಾಜಶೇಖರ ಅಂಗಡಿ ಹಲಗೇರಿ (52) ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ಗೆ ನಿಕಟಪೂರ್ವ ಕೊಪ್ಪಳ ಜಿಲ್ಲಾಧ್ಯಕ್ಷರಾಗಿದ್ದ ಅವರು ಪರಿಷತ್‌ನ ಕೆಲಸಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಶ್ರಮಿಸಿದ್ದರು. ಕನ್ನಡದ ಮೇಲಿನ ತಮ್ಮ ಪ್ರೀತಿಗಾಗಿ ಮಗಳಿಗೆ ಭುವನಾ ಎಂದು ನಾಮಕರಣ ಮಾಡಿದ್ದರು.

‘ರಾಜಶೇಖರ ಅವರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಹಣದ ಕೊರತೆಯಾದಾಗ ಮನೆಯವರ ಚಿನ್ನಾಭರಣ ಒತ್ತೆಯಿಟ್ಟು ಹಣ ತರುತ್ತಿದ್ದರು. ಕನ್ನಡದ ಕೆಲಸವೆಂದರೆ ಅವರಿಗೆ ಅಷ್ಟೊಂದು ಪ್ರೀತಿ ಹಾಗೂ ಕಾಳಜಿ ಇತ್ತು’ ಎಂದು ರಾಜಶೇಖರ ಜಿಲ್ಲಾಧ್ಯಕ್ಷರಾಗಿದ್ದಾಗ ಕೋಶಾಧ್ಯಕ್ಷರಾಗಿ ಕೆಲಸ ಮಾಡಿದ್ದ ಸಂತೋಷ ದೇಶಪಾಂಡೆ ನೆನಪಿಸಿಕೊಂಡರು.

ವೃತ್ತಿಯಲ್ಲಿ ಹತ್ತಿ ವ್ಯಾಪಾರಿಯಾಗಿದ್ದ ಅವರು ತಿರುಳ್ಗನ್ನಡ ಕ್ರಿಯಾ ಸಮಿತಿ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಕೊಪ್ಪಳ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ, 2016ರಲ್ಲಿ ಪರಿಷತ್‌ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಜಿಲ್ಲಾ ರಚನಾ ಹೋರಾಟ, ಅಂಗಡಿ ಮುಂಗಟ್ಟು, ಬ್ಯಾಂಕುಗಳ ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆ, ತ್ರಿಭಾಷಾ ಸೂತ್ರ ಅಳವಡಿಕೆ ಹೋರಾಟ, ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಿ ಕೊಪ್ಪಳ ಸುತ್ತಮುತ್ತಲಿನ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಒತ್ತಾಯಿಸಿ‌ ಹೋರಾಟ, ಹೈದರಾಬಾದ್‌ ಕರ್ನಾಟಕ 371 (ಜೆ) ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ ಹೋರಾಟ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಪ್ರಾರಂಭಕ್ಕೆ ವಿರೋಧಿಸಿ ಅರೆಬೆತ್ತಲೆ ಹೋರಾಟ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.

ರಂಗಸೇತು ಸಂಘಟನೆ ಮೂಲಕ ಕೊಪ್ಪಳದಲ್ಲಿ ನೀನಾಸಂ ಹಾಗೂ ಶಿವಸಂಚಾರ ಮತ್ತಿತರ ಹೊಸ ಅಲೆಯ ನಾಟಕಗಳ ಪ್ರದರ್ಶನ ಆಯೋಜನೆ ಮಾಡಿದ್ದರು. ಕೊಪ್ಪಳ ಸ್ವಾತಂತ್ರ್ಯ ಸಮರ ನಾಟಕದಲ್ಲಿ ಸುರಪುರದ ವೆಂಟಪ್ಪನಾಯಕ, ಬಿ.ಸಿ.ಪಾಟೀಲ ವಿರಚಿತ ಕಾಯಕಯೋಗಿ ನಾಟಕದಲ್ಲಿ ಅಕ್ಕಮಹಾದೇವಿ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT