ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಶೇಖರ ಹಿಟ್ನಾಳ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

ಹಿಟ್ನಾಳ ಕುಟುಂಬಕ್ಕೆ ಹ್ಯಾಟ್ರಿಕ್‌ ಟಿಕೆಟ್‌
Published 21 ಮಾರ್ಚ್ 2024, 16:01 IST
Last Updated 21 ಮಾರ್ಚ್ 2024, 16:01 IST
ಅಕ್ಷರ ಗಾತ್ರ

ಕೊಪ್ಪಳ: ಬಿಜೆಪಿ ಟಿಕೆಟ್‌ ಘೋಷಣೆ ಬಳಿಕ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಆಗಿದ್ದ ಬೆಳವಣಿಗೆ ಜನರಲ್ಲಿ ಕುತೂಹಲ ಮೂಡಿಸಿದ್ದವು. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಯಾವ ಅಚ್ಚರಿಗೂ ಅವಕಾಶ ನೀಡದೆ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದ ರಾಜಶೇಖರ ಹಿಟ್ನಾಳ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಎರಡು ಬಾರಿ ಬಿಜೆಪಿಯಿಂದ ಸಂಸದರಾಗಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಪಕ್ಷದ ವರಿಷ್ಠರು ಮಣೆ ಹಾಕಿಲ್ಲ. ಹೀಗಾಗಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಗಳು ಜೋರಾಗಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ’ಕಾಂಗ್ರೆಸ್‌ನ ಕೆಲ ನಾಯಕರು ನನ್ನೊಂದಿಗೆ ಸೌಜನ್ಯಕ್ಕಾಗಿ ಮಾತನಾಡಿದ್ದಾರೆ’ ಎಂದು ಸಂಸದರು ಹೇಳಿದ್ದರು. ಹೀಗಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಟಿಕೆಟ್‌ ಘೋಷಣೆ ಬಳಿಕ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಹಿಂದಿನ ಎರಡೂ ಲೋಕಸಭಾ ಚುನಾವಣೆಯ ಟಿಕೆಟ್‌ ಹಿಟ್ನಾಳ ಕುಟುಂಬಕ್ಕೆ ಲಭಿಸಿತ್ತು. ಈ ಬಾರಿಯೂ ಅದೇ ಕುಟುಂಬಕ್ಕೆ ಪಕ್ಷದ ವರಿಷ್ಠರು ಟಿಕೆಟ್‌ ನೀಡಿದ್ದು ಇದರಿಂದ ಹಿಟ್ನಾಳ ಕುಟುಂಬ ಸತತ ಮೂರು ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್‌ ಪಡೆದ ಸಾಧನೆ ಮಾಡಿದಂತಾಗಿದೆ.

ಎರಡನೇ ಸ್ಪರ್ಧೆ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ 44 ವರ್ಷದ ರಾಜಶೇಖರ ಹಿಟ್ನಾಳ 2019ರ ಚುನಾವಣೆಯಲ್ಲಿ ಕರಡಿ ಸಂಗಣ್ಣ ಎದುರು 37,424 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈಗ ಎರಡನೇ ಬಾರಿಗೆ ಸ್ಪರ್ಧೆ ಮಾಡಲಿದ್ದಾರೆ.

ರಾಜಶೇಖರ 2016ರಿಂದ 2021ರ ತನಕ ಕೊಪ್ಪಳ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. 2017ರಲ್ಲಿ ಅವಿರೋಧ ಆಯ್ಕೆಯಾಗಿ ಒಂದು ವರ್ಷದ ಅವಧಿಗೆ ಅಧ್ಯಕ್ಷರೂ ಆಗಿದ್ದರು. 2020ರಿಂದ 2021ರ ತನಕ ಎರಡನೇ ಬಾರಿಗೆ ಅಧ್ಯಕ್ಷ ಗಾದಿಗೆ ಏರಿದ್ದರು. ಬಿ.ಎ. ಪದವೀಧರರಾಗಿರುವ ಅವರು ವ್ಯವಸಾಯ ಹಾಗೂ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ.

ರಾಜಕೀಯ ಕುಟುಂಬ: ಕುರುಬ ಸಮುದಾಯದ ರಾಜಶೇಖರ ಅವರು ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರು.

ಇವರ ತಂದೆ ಬಸವರಾಜ ಕೆ. ಹಿಟ್ನಾಳ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ 1994ರಲ್ಲಿ ಕೆಸಿಪಿಯಿಂದ, 1999ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. ನಂತರ 2008 ಮತ್ತು 2011ರಲ್ಲಿ ಸೋಲು ಕಂಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿಯೂ ಪರಾಭವಗೊಂಡಿದ್ದರು.

ನಂತರ ರಾಜಶೇಖರ ಅವರ ಸಹೋದರ ರಾಘವೇಂದ್ರ ಹಿಟ್ನಾಳ ಕೊಪ್ಪಳ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ರಾಘವೇಂದ್ರ ಗುರುತಿಸಿಕೊಂಡಿರುವುದರಿಂದ ಸಹೋದರಿಗೆ ಟಿಕೆಟ್‌ ಕೊಡಿಸುವುದು ಸುಲಭವಾಗಿದೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಟಿಕೆಟ್‌ ಘೋಷಣೆಗೂ ಮೊದಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT