ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಭಾವಿ: ಅದ್ದೂರಿ ಮಾರುತೇಶ್ವರ ರಥೋತ್ಸವ

Published 3 ಫೆಬ್ರುವರಿ 2024, 16:12 IST
Last Updated 3 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ಕಲ್ಲಭಾವಿ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯ, ಸಾಂಸ್ಕೃತಿಕ ಹಾಗೂ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿದವು.

ಬೆಳಿಗ್ಗೆ ದೇವಸ್ಥಾನದಲ್ಲಿ ಮಾರುತೇಶ್ವರ ಮೂರ್ತಿಗೆ ವಿಶೇಷ ಪೂಜೆ ಹಾಗೂ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ ಹಾಗೂ ಹೋಮ ಕಾರ್ಯಕ್ರಮ ನಡೆದವು. ನಂತರ ಭಕ್ತರಿಂದ ದೀಡ ನಮಸ್ಕಾರ ಹಾಗೂ ಇನ್ನಿತರ ಹರಕೆ ತೀರಿಸುವ ಕಾರ್ಯ ಜರುಗಿದವು.

ಸಂಜೆ ನಡೆದ ರಥೋತ್ಸವಕ್ಕೂ ಮೊದಲು ಗೊಲ್ಲರ ಸಮಾಜದವರ ಹರಕೆ ಸಂಸ್ಕೃತಿಯಾದ ಹಾಲೋಕಳಿ ಆಚರಣೆ ಅದ್ದೂರಿಯಾಗಿ ಜರುಗಿತು. ವಾರಗಟ್ಟಲೆ ಸಂಗ್ರಹಿಸಿಟ್ಟುಕೊಂಡಿದ್ದ ಹಾಲನ್ನು ರಥೋತ್ಸವದ ಪ್ರವೇಶದಲ್ಲಿ ಓಕಳಿ ಆಡುವ ಮೂಲಕ ತಮ್ಮ ಕುಲದ ಸಂಪ್ರದಾಯ ಮತ್ತು ದೇವರಿಗೆ ಸಲ್ಲಿಸುವ ಹರಕೆಯನ್ನು ತೀರಿಸಿ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು.

ಕುಷ್ಟಗಿ ಮದ್ದಾನೇಶ್ವರ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಮಲ್ಲಯ್ಯತಾತ ಸೋಮನಾಳ, ವಿರೂಪಾಕ್ಷಯ್ಯತಾತ, ಹನಮಂತಪ್ಪ ಕುಂಟೆಪ್ಪಜ್ಜ, ಅರ್ಚಕ ಮುಕ್ಕುಂದಪ್ಪ ಪೂಜಾರ ಇತರರು ಹನುಮಾನ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಂಜೆ ನಡೆದ ರಥೋತ್ಸವದಲ್ಲಿ ಕಲ್ಲಭಾವಿ ಗ್ರಾಮದ ಸುತ್ತಮುತ್ತಲಿನ ಹಲವು ಗ್ರಾಮಗಳಾದ ಪುಟಗಮರಿ, ಗಾಣದಾಳ, ತಾಳಕೇರಿ, ಚಿಕ್ಕವಂಕಲಕುಂಟಾ, ಹಿರೇವಂಕಲಕುಂಟಾ, ಮರಕಟ್ಟ, ಮಾಟಲದಿನ್ನಿ, ವಜನಭಾವಿ, ಚೌಡಾಪುರ, ಯಡ್ಡೋಣಿ, ಕಂದಕೂರ, ಚಿಕ್ಕಮನ್ನಾಪೂರ, ಸಿಡ್ಲಭಾವಿ, ಗಾಣದಾಳ ಸೇರಿ ವಿವಿಧ ತಾಲ್ಲೂಕಿನ ಸಹಸ್ರಾರು ಭಕ್ತ ಸಮೂಹ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT