ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಜಲಕ್ಷಾಮ: ಕೆರೆಯ ರಾಡಿ ನೀರೇ ಜನರಿಗೆ ಆಧಾರ

Published 6 ಏಪ್ರಿಲ್ 2024, 0:12 IST
Last Updated 6 ಏಪ್ರಿಲ್ 2024, 0:12 IST
ಅಕ್ಷರ ಗಾತ್ರ

ಕೊಪ್ಪಳ: ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ ಅಭಾವ ಜಿಲ್ಲೆಯ ಹಲವು ಕಡೆ ವ್ಯಾಪಕವಾಗಿದ್ದು, ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ ಕವಲೂರು ಗ್ರಾಮದ ಜನ ಕುಡಿಯಲು ರಾಡಿಯಾಗಿರುವ ಕೆರೆಯ ನೀರಿಗೆ ಮೊರೆ ಹೋಗಿದ್ದಾರೆ.

ನೆಲಕ್ಕಚ್ಚಿರುವ ಕೆರೆಯ ನೀರನ್ನು ವಿಧಿಯಿಲ್ಲದೆ ಗ್ರಾಮಸ್ಥರು ಮನೆಗೆ ತಂದು ಸೋಸಿ ಕುಡಿಯುತ್ತಿದ್ದಾರೆ. ಗ್ರಾಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಗ್ರಾಮ ಪಂಚಾಯಿತಿ ಕೇಂದ್ರವನ್ನೂ ಹೊಂದಿದ್ದು, ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳು ಗ್ರಾಮದಲ್ಲಿವೆ. ಅದರಲ್ಲಿ ಮೂರು ದುರಸ್ತಿಗಾಗಿ ಕಾದಿದ್ದು, ಬಳಕೆಗಾಗಿ ಸವಳು ನೀರು ಪೂರೈಕೆ ಮಾಡಲಾಗುತ್ತಿದೆ.

ನಿತ್ಯ ಕವಲೂರು ಗ್ರಾಮಸ್ಥರು ಸೈಕಲ್‌,  ದ್ವಿಚಕ್ರ ವಾಹನಗಳ ಮೇಲೆ ಒಟ್ಟಿಗೆ ನಾಲ್ಕಾರು ಕೊಡಗಳ ನೀರನ್ನು ಕೆರೆಯಿಂದ ತುಂಬಿಕೊಂಡು ಹೋಗುವ ಚಿತ್ರಣ ಸಾಮಾನ್ಯವಾಗಿರುತ್ತದೆ. ಹತ್ತು ದಿನಗಳಿಂದ ಜನ ಗ್ರಾಮದ ಹೊರವಲಯದಲ್ಲಿ ಪೂರ್ಣ ನೆಲಕ್ಕೆ ಅಂಟಿಕೊಂಡಿರುವ ಕೊಳಚೆ ನೀರನ್ನೇ ತುಂಬಿಕೊಳ್ಳುತ್ತಿದ್ದರು. ಬುಧವಾರದ ವೇಳೆಗೆ ಒಂದು ಕೆರೆಯ ನೀರು ಪೂರ್ಣ ಖಾಲಿಯಾಗಿದೆ. ಅದರ ಪಕ್ಕದಲ್ಲಿಯೇ ಇನ್ನೊಂದು ಕೆರೆಯಿದ್ದು ಅಲ್ಲಿಯೂ ದಿನದಿಂದ ದಿನಕ್ಕೆ ನೀರು ಬತ್ತುತ್ತಿದೆ.

‘ರಾಡಿಯಾಗಿದ್ದರೂ ಕೆರೆಯ ನೀರನ್ನೇ ಕುಡಿಯುತ್ತೀರಾ’ ಎಂದು ಗ್ರಾಮಸ್ಥ ಹಾಲಪ್ಪ ಪೋತರೆಡ್ಡಿ ಅವರನ್ನು ಪ್ರಶ್ನಿಸಿದರೆ, ‘ಸೋಸಿಕೊಂಡು ಕುಡಿಯುತ್ತೇವೆ. ಪ್ರತಿ ಬೇಸಿಗೆ ಬಂದಾಗಲೂ ಇದೇ ಸಮಸ್ಯೆ. ಗ್ರಾಮಕ್ಕೆ ಪೂರೈಕೆ ಮಾಡುವ ಸವಳು ನೀರು ಕುಡಿಯಲು ಆಗುವುದಿಲ್ಲ. ಈ ಕೆರೆ ಹೊರತುಪಡಿಸಿದರೆ ಕುಡಿಯುವ ನೀರು ಪಡೆಯಲು ನಮ್ಮಲ್ಲಿ ಬೇರೆ ಆಯ್ಕೆಗಳಿಲ್ಲ’ ಎಂದರು.

‘ಏಪ್ರಿಲ್‌ ಆರಂಭದಲ್ಲಿಯೇ ನೀರಿನ ಪರಿಸ್ಥಿತಿ ಗಂಭೀರವಾಗಿದೆ. ಇರುವ ಕೆರೆಯ ನೀರಿನ ಕಟ್ಟೆ ಹಾಗೂ ಸುತ್ತಲಿನ ಭಾಗದಲ್ಲಿ ಸ್ವಚ್ಛತೆ ಕಾಯ್ದುಕೊಂಡರೆ ಅದೇ ದೊಡ್ಡದು. ಆದರೆ, ಕೆಲವರು ಕೆರೆ ಕಟ್ಟೆ ಮೇಲೆ ಮದ್ಯದ ಬಾಟಲಿ, ಗುಟ್ಕಾ ತಿಂದು ಉಗುಳುತ್ತಾರೆ. ಇದು ಹೀಗೆಯೇ ಮುಂದುವರಿದರೆ ಈ ಕೆರೆ ನೀರು ಕೂಡ ಸಿಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಅವರ ಮಾತಿಗೆ ಧ್ವನಿಗೂಡಿಸಿದ ವೆಂಕಟೇಶ ಹೊಸಉಪ್ಪಾರ, ‘ನೀರಿನ ಸಮಸ್ಯೆ ಇಷ್ಟೊಂದು ತೀವ್ರವಾಗಿದ್ದು ಇದೇ ಮೊದಲು. ನೀರು ತುಂಬಿಕೊಂಡು ಬರುವುದೇ ನಿತ್ಯದ ಕೆಲಸವಾಗಿದೆ’ ಎಂದು ಹೇಳಿದರು.

ತುಂಗಭದ್ರಾ ಹಿನ್ನೀರಿನ ಪ್ರದೇಶದಲ್ಲಿನ ಈ ಗ್ರಾಮಕ್ಕೆ ಜಾಕ್‌ವೆಲ್‌ ಮೂಲಕ ಕುಡಿಯಲು ನೀರು ಪೂರೈಸಲಾಗುತ್ತಿತ್ತು. ಈಗ ಜಲಾಶಯದಲ್ಲಿಯೂ ನೀರಿನ ಕೊರತೆಯಿದೆ. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿನ ನೀರು ಕುಡಿದರೆ ಕೀಲುನೋವು ಬರುತ್ತದೆ ಎನ್ನುವುದು ಗ್ರಾಮಸ್ಥರ ವಾದ.

ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮದಲ್ಲಿ ಕಲುಷಿತಗೊಂಡ ಕೆರೆಯ ನೀರನ್ನೇ ಜನ ಕುಡಿಯಲು ತುಂಬಿಕೊಳ್ಳುತ್ತಿರುವುದು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮದಲ್ಲಿ ಕಲುಷಿತಗೊಂಡ ಕೆರೆಯ ನೀರನ್ನೇ ಜನ ಕುಡಿಯಲು ತುಂಬಿಕೊಳ್ಳುತ್ತಿರುವುದು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

Quote - ಕವಲೂರು ಗ್ರಾಮದಲ್ಲಿ ಮೂರು ಖಾಸಗಿ ಬೋರ್‌ವೆಲ್‌ ಬಾಡಿಗೆ ಪಡೆದಿದ್ದೇವೆ. ನಿತ್ಯ ನಾಲ್ಕು ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ. ಆದರೂ ಕೆಲವರು ಕೆರೆಯ ನೀರು ಕುಡಿಯುತ್ತಿದ್ದಾರೆ. ಈ ಕುರಿತು ತಿಳಿವಳಿಕೆ ಹೇಳಿದರೂ ಕೇಳುತ್ತಿಲ್ಲ. ದುಂಡಪ್ಪ ತುರಾದಿ ಕೊಪ್ಪಳ ತಾ.ಪಂ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT