ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ ನಗರಸಭೆ ಚುನಾವಣೆ: ಹಲವರಿಗೆ ಆಸಕ್ತಿ, ಕೆಲವರಿಗೆ ನಿರಾಸಕ್ತಿ

ಕೊಪ್ಪಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎರಡು ವಾರಗಳಲ್ಲಿ ಚುನಾವಣೆ ನಡೆಸಲು ತಯಾರಿ
–ಪ್ರಮೋದ ಕುಲಕರ್ಣಿ
Published : 11 ಆಗಸ್ಟ್ 2024, 5:15 IST
Last Updated : 11 ಆಗಸ್ಟ್ 2024, 5:15 IST
ಫಾಲೋ ಮಾಡಿ
Comments

ಕೊಪ್ಪಳ: ಜನರಿಂದ ಆಯ್ಕೆಯಾದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಅಧಿಕಾರವಿಲ್ಲದೇ ಕಾಯುತ್ತಿದ್ದ ಇಲ್ಲಿನ ನಗರಸಭೆ ಸದಸ್ಯರು ಈಗ ಈ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಅಚ್ಚರಿಯೆಂದರೆ ಕೆಲವರು ಇದಕ್ಕಾಗಿ ಸಾಕಷ್ಟು ಸದಸ್ಯರು ಆಸಕ್ತಿ ತೋರಿಸಿದರೆ, ಇನ್ನೂ ಕೆಲವರು ನಿರಾಸಕ್ತಿ ತೋರಿಸುತ್ತಿದ್ದಾರೆ.

ನಗರಸಭೆಯಲ್ಲಿ ಒಟ್ಟು 31 ಜನ ಸದಸ್ಯರಿದ್ದು, 15 ಕಾಂಗ್ರೆಸ್, ಒಂಬತ್ತು ಬಿಜೆಪಿ, ಮೂರು ಪಕ್ಷೇತರ ಮತ್ತು ಇಬ್ಬರು ಜೆಡಿಎಸ್‌ ಸದಸ್ಯರಿದ್ದಾರೆ. ಇಬ್ಬರು ರಾಜೀನಾಮೆ ನೀಡಿದ್ದಾರೆ.

11ನೇ ವಾರ್ಡ್‌ನಿಂದ ಬಿಜೆಪಿಯಿಂದ ಸದಸ್ಯರಾಗಿದ್ದ ಆಡೂರು ರಾಜಶೇಖರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಎಂಟನೇ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಗೆಲುವು ಪಡೆದಿದ್ದ ಸುನಿತಾ ಗಾಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಮೇಲ್ವಿಚಾರಕಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಇದೇ ವರ್ಷದ ಫೆಬ್ರುವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಬಹುಮತಕ್ಕೆ ಬೇಕಾದ 16 ಸದಸ್ಯರ ಬಲದ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಹಾಗೂ ಸಂಸದರ ಮತವೂ ಇರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಬಹುಮತಕ್ಕೆ ಬೇಕಾದಷ್ಟು ಬಲವಂತೂ ಇದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಹಿಂದಿನ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಹಾಗೂ ಉಪಾಧ್ಯಕ್ಷೆ ಆಯೇಷಾ ರುಬಿನಾ ಅವರ ಅಧಿಕಾರವಧಿ 2023ರ ಅಕ್ಟೋಬರ್‌ನಲ್ಲಿಯೇ ಪೂರ್ಣಗೊಂಡಿದೆ. ಅಧಿಕಾರ ಪೂರ್ಣಗೊಂಡು ಒಂಬತ್ತು ತಿಂಗಳ ಬಳಿಕ ಮೀಸಲಾತಿ ಘೋಷಣೆಯಾಗಿದ್ದು, ಕಾಂಗ್ರೆಸ್‌ ಸದಸ್ಯರು ಕೊನೆಯ ಅವಧಿಯಲ್ಲಿ ಅಧ್ಯಕ್ಷ ಗಾದಿ ಶತಾಯಗತಾಯು ಪಡೆದುಕೊಳ್ಳಲೇಬೇಕು ಎಂದು ಪೈಪೋಟಿ ನಡೆಸಿದ್ದಾರೆ.

ನಗರಸಭೆಯ ಹಿರಿಯ ಸದಸ್ಯರಾದ ಮೂರನೇ ವಾರ್ಡ್‌ನ ಅಮ್ಜದ್‌ ಪಟೇಲ್‌, 10ನೇ ವಾರ್ಡ್‌ನ ಮಹೇಂದ್ರ ಚೋಪ್ರಾ, 7ನೇ ವಾರ್ಡ್‌ನ ಅಜಮುದ್ದೀನ್‌ ಅತ್ತಾರ್‌ ಮತ್ತು 25ನೇ ವಾರ್ಡ್‌ನ ಅರುಣಕುಮಾರ್‌ ಅಪ್ಪುಶೆಟ್ಟರ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವೂ ಖಾಲಿಯಿರುವ ಕಾರಣ ಇವರಲ್ಲಿ ಕೆಲವರು ನಗರಸಭೆಗಿಂತ ಪ್ರಾಧಿಕಾರದಲ್ಲಿ ಸ್ಥಾನಮಾನ ನೀಡುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಅವರ ದುಂಬಾಲು ಬಿದ್ದಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಶಾಸಕರು ಭಾನುವಾರ ನಗರಕ್ಕೆ ಬರಲಿದ್ದು, ಆಗ ಇದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ಗೊತ್ತಗಿದೆ.  

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ನೀವು ಎನ್ನುವ ಪ್ರಶ್ನೆಯನ್ನು ಮಹೇಂದ್ರ ಚೋಪ್ರಾ ಅವರನ್ನು ಪ್ರಶ್ನಿಸಿದರೆ ’ಇನ್ನು ತೀರ್ಮಾನವಾಗಿಲ್ಲ. ಅವಕಾಶಕೊಟ್ಟರೆ ಅಧ್ಯಕ್ಷನಾಗಲು ಬಯಸುವೆ’ ಎಂದರು.

ಪಕ್ಷೇತರರಾಗಿ ಸ್ಪರ್ಧೆ ಮಾಡಿ ಗೆದ್ದಿರುವ ಅರುಣಕುಮಾರ್‌ ಕೂಡ ಅಧ್ಯಕ್ಷರಾಗಲು ಪ್ರಯತ್ನ ನಡೆಸುತ್ತಿದ್ದಾರೆ. ಪಕ್ಷೇತರರಾಗಿ ಗೆದ್ದರೂ ಅವರ ಗೆಲುವಿನಲ್ಲಿ ಕಾಂಗ್ರೆಸ್‌ ಬೆಂಬಲಿಗರ ‘ಸಹಕಾರ’ವೂ ಇತ್ತು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಅವರ ಸಂಪೂರ್ಣ ಬೆಂಬಲ ಕಾಂಗ್ರೆಸ್‌ ಪಕ್ಷಕ್ಕಿದೆ. ತಮ್ಮ ಸ್ಪರ್ಧೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ’ನನಗೂ ಅವಕಾಶ ಕೊಡುವಂತೆ ಶಾಸಕರ ಬಳಿ ಮನವಿ ಮಾಡುವೆ. ಎಲ್ಲ ಸದಸ್ಯರು ಹಾಗೂ ಶಾಸಕರು ಒಪ್ಪಿದರೆ ಮುನ್ನಡೆಯುವೆ’ ಎಂದರು.

ಮಹೇಶ ಮಾಲಗಿತ್ತಿ
ಮಹೇಶ ಮಾಲಗಿತ್ತಿ

Quote - ಕೊಪ್ಪಳ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಎರಡು ದಿನಗಳಲ್ಲಿ ದಿನಾಂಕ ನಿಗದಿ ಮಾಡಲಾಗುವುದು. ಎರಡು ವಾರಗಳ ಒಳಗೆ ಚುನಾವಣೆ ನಡೆಸಲಾಗುವುದು ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಸಹಾಯಕ ಉಪವಿಭಾಗಾಧಿಕಾರಿ

22ರಂದು ಭಾಗ್ಯನಗರ ಪ.ಪಂ. ಚುನಾವಣೆ

ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ಇದೇ 22ರಂದು ಚುನಾವಣೆ ನಿಗದಿ ಮಾಡಲಾಗಿದೆ. ಕೊಪ್ಪಳ ತಹಶೀಲ್ದಾರ್‌ ವಿಠ್ಠಲ ಚೌಗುಲಾ ಈ ವಿಷಯವನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ. ಒಟ್ಟು 19 ಜನ ಸದಸ್ಯ ಬಲವನ್ನು ಹೊಂದಿರುವ ಭಾಗ್ಯನಗರದಲ್ಲಿ ಬಿಜೆಪಿ 9 ಕಾಂಗ್ರೆಸ್ 8 ಮತ್ತು ಪಕ್ಷೇತರರು ಇಬ್ಬರು ಇದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮತ್ತು ಉಪಾಧ್ಯಕ್ಷ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದೆ. ಈ ಸ್ಥಾನಗಳಿಗೆ ಆಯ್ಕೆಯಾಗ ಬಯಸುವವರಿಗೆ ಪಕ್ಷೇತರರ ಆಶೀರ್ವಾದವೂ ಬೇಕಾಗುತ್ತದೆ.

ನಿರಾಸಕ್ತಿ ಯಾಕೆ?

ನಗರಸಭೆಗೆ 13ರಿಂದ 14 ತಿಂಗಳು ಮಾತ್ರ ಅವಧಿ ಇದೆ. ಅನುದಾನವೂ ಅಷ್ಟಕ್ಕಷ್ಟೇ ಇದೆ. ತೆರಿಗೆ ಹಣವನ್ನೇ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕಾಗಿದೆ. ಆದ್ದರಿಂದ ಕಡಿಮೆ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ ತಳಮಟ್ಟದಿಂದ ಸರಿಪಡಿಸಬೇಕಾದ ಅಗತ್ಯವೂ ಇದೆ ಎನ್ನುವ ಕಾರಣಕ್ಕಾಗಿ ಹಲವು ಹಿರಿಯ ಸದಸ್ಯರು ನಗರಸಭೆ ಅಧ್ಯಕ್ಷ ಸ್ಥಾನಕ್ಕಿಂತ ಪ್ರಾಧಿಕಾರವೇ ಮೇಲು ಎನ್ನುತ್ತಿದ್ದಾರೆ. ಅಮ್ಜದ್‌ ಪಟೇಲ್‌ ಪ್ರತಿಕ್ರಿಯಿಸಿ ’ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕಾಗಿಯೂ ದುಡಿದಿದ್ದೇನೆ. ನಗರಸಭೆಗಿಂತ ಪ್ರಾಧಿಕಾರಕ್ಕೆ ಪರಿಗಣಿಸುವಂತೆ ಮನವಿ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT