ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ‘ಸಮಸ್ಯೆಗಳಾಧರಿತ ವರದಿಗಳು ಬಿತ್ತರವಾಗಲಿ’

ಡಿಜಿಟಲ್ ಮಾಧ್ಯಮ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
Published 5 ಫೆಬ್ರುವರಿ 2024, 14:41 IST
Last Updated 5 ಫೆಬ್ರುವರಿ 2024, 14:41 IST
ಅಕ್ಷರ ಗಾತ್ರ

ಗಂಗಾವತಿ: ‘ಆಧುನಿಕ ಜಗತ್ತಿನಲ್ಲಿ ಮಾಧ್ಯಮಗಳ ನಡುವೆ ವಾಣಿಜ್ಯೀಕರಣ ಪೈಪೋಟಿ ಹೆಚ್ಚಾಗಿದ್ದು, ಇದರಿಂದ ಮಾಧ್ಯಮಗಳು ನೈಜ ಮತ್ತು ಜಲ್ವಂತ ಸಮಸ್ಯೆಗಳ ಕುರಿತ ವರದಿಗಳನ್ನು ಬಿತ್ತರಿಸುವುದು ಕೈಬಿಟ್ಟಿವೆ’ ಎಂದು ಕೊಪ್ಪಳ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ನರಸಿಂಹ ಬೇಸರ ವ್ಯಕ್ತಪಡಿಸಿದರು.

ನಗರದ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ‘ಡಿಜಿಟಲ್ ಯುಗದಲ್ಲಿ ಮಾಧ್ಯಮ ವಿಷಯ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಹೊಣೆಗಾರಿಕೆ ಹೊರಬೇಕಾದ ಮಾಧ್ಯಮಗಳು ಇಂದು ಆಸ್ತಿತ್ವ ಉಳಿಸಿಕೊಂಡರೆ ಸಾಕಪ್ಪ ಎನ್ನುವಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ. ಮಾಧ್ಯಮಗಳಲ್ಲಿಂದು ಮಾತು, ಭಾಷೆ‌ ಎಲ್ಲವೂ ಮಲೀನಗೊಂಡು ಜೀವಂತಿಕೆ ಕಳೆದುಕೊಂಡಿವೆ. ಸ್ವಂತ ಬರವಣಿಗೆಯಿಲ್ಲ. ಪತ್ರಿಕಾ ಸ್ವಾತಂತ್ರ್ಯವಿಲ್ಲ. ಪತ್ರಿಕೋದ್ಯಮದ ಮೌಲ್ಯ ಕುಸಿಯುತ್ತಾ ಬರುತ್ತಿದೆ’ ಎಂದರು.

‘ಡಿಜಿಟಲ್ ಮಾಧ್ಯಮಗಳು ಎಷ್ಟು ಒಳ್ಳೆಯವೋ, ಅಷ್ಟೇ ಕೆಟ್ಟವು. ಇಲ್ಲಿ ವೇಗವಾಗಿ ಸುದ್ದಿಗಳು ಬರುತ್ತವೆ ಎನ್ನುವುದು ಬಿಟ್ಟರೆ, ವರದಿಯಲ್ಲಿ ಸತ್ಯಾಸತ್ಯತೆ ಕಂಡು ಹಿಡಿಯುವುದು ತುಂಬಾ ಕಷ್ಟ. ಇಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅವಕಾಶಗಳು ಸಾಕಷ್ಟಿದ್ದು, ವೇಗವಾಗಿ ಸುದ್ದಿ ಬರೆಯುವ ಜತೆಗೆ ತಂತ್ರಜ್ಞಾನದ ಕೌಶಲಗಳಿದ್ದರೆ ಕೆಲಸ ಗಿಟ್ಟಿಸಿಕೊಳ್ಳಬಹುದು’ ಎಂದರು.

ಪ್ರಾಚಾರ್ಯ ಜಾಜಿ ದೇವೇಂದ್ರಪ್ಪ ಮಾತನಾಡಿ, ‘ಡಿಜಿಟಲ್ ಮಾಧ್ಯಮಗಳಲ್ಲಿ ಈಚೆಗೆ ಸುಳ್ಳು ವರದಿಗಳ ಬಿತ್ತರಿಕೆ ಹೆಚ್ಚಾಗಿದ್ದು, ಜನರಿಗೆ ಯಾವುದು ಸತ್ಯ, ಯಾವುದು ಸುಳ್ಳು ತಿಳಿದು ಬರುತ್ತಿಲ್ಲ. ಮಾಧ್ಯಮಗಳು ಜನರ ವಿಶ್ವಾಸಾರ್ಹತೆ ಗಳಿಸುವಲ್ಲಿ ಯಶಸ್ವಿಯಾಗಿ, ವಿರೋಧಪಕ್ಷದ ಸ್ಥಾನದ ಉಳಿಸಿಕೊಳ್ಳಬೇಕು’ ಎಂದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಕರಿಗೂಳಿ ಸುಂಕೇಶ್ವರ್ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಡಾ.ವೈ.ಎಸ್.ವಗ್ಗಿ, ಪ್ರಾಧ್ಯಾಪಕ ಅಕ್ಕಿ ಮಾರುತಿ, ಅತಿಥಿ ಉಪನ್ಯಾಸಕಿ ಹುಲಿಗೆಮ್ಮ, ತಾಯಪ್ಪ ಮರ್ಚೇಡ್, ರಾಘವೇಂದ್ರ, ಸಿ.ಅಭಿಷೇಕ, ಖಾಜಾಸಾಬ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT