ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಕೋವಿಡ್‌ ಸೇನಾನಿಗಳಿಗೆ ಸನ್ಮಾನ

ಕೋವಿಡ್ ಲಸಿಕೆ ಅಭಿಯಾನ: ಭಾರತ ನೂರು ಕೋಟಿ ಸಾಧನೆ
Last Updated 22 ಅಕ್ಟೋಬರ್ 2021, 6:16 IST
ಅಕ್ಷರ ಗಾತ್ರ

ಕುಷ್ಟಗಿ: ನೂರು ಕೋಟಿ ಡೋಸ್‌ ಕೋವಿಡ್ ಲಸಿಕೆ ನೀಡಿರುವ ಭಾರತ ವಿಶ್ವಮಟ್ಟದಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದು ಇದರ ಶ್ರೇಯಸ್ಸು ಕೋವಿಡ್ ವಾರಿಯರ್ಸ್‌ಗಳಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ಕೆ.ಮಹೇಶ್ ಹೇಳಿದರು.

ದೇಶದಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಶತಕ ಪೂರೈಸಿದ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಲಸಿಕಾ ಅಭಿಯಾನದಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ಪಕ್ಷದ ವತಿಯಿಂದ ನಡೆಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ, ಕೋವಿಡ್ ಸಮಸ್ಯೆ ಭೀಕರ ಪರಿಸ್ಥಿತಿ ತಲುಪಿದ ಸಂದರ್ಭದಲ್ಲೂ ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಜೀವದಹಂಗು ತೊರೆದು ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಿದ್ದನ್ನು ಮರೆಯುವಂತಿಲ್ಲ. ಅದೇ ರೀತಿ ಕೋವಿಡ್ ಲಸಿಕೆ ನೀಡುವಲ್ಲಿಯೂ ಅಷ್ಟೇ ಮುತುವರ್ಜಿ, ಕಾಳಜಿ ವಹಿಸಿದ್ದರಿಂದ ದೇಶ ಮಹತ್ವದ ಮೈಲುಗಲ್ಲು ದಾಖಲಿಸಲು ಸಾಧ್ಯವಾಗಿದೆ. ಸಮಾಜ ಕೋವಿಡ್ ವಾರಿಯರ್ಸ್ ಗಳಿಗೆ ಋಣಿಯಾಗಿರಬೇಕಾಗುತ್ತದೆ ಎಂದರು.

ಎಲ್ಲರೂ ಕೋವಿಡ್ ಲಸಿಕೆ ಪಡೆಯುವ ಮೂಲಕ ಐತಿಹಾಸಿಕ ಲಸಿಕಾ ಅಭಿಯಾನಕ್ಕೆ ಸಹಕರಿಸಬೇಕು. ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರೂ ಪಟ್ಟಣ, ಗ್ರಾಮಾಂತರ ಪ್ರದೇಶದಲ್ಲಿಯೂ ಸರ್ಕಾರದ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ. ಇಂಥ ಸಮಾಜಮುಖಿ ಪ್ರಯತ್ನ ಪಕ್ಷದ ವತಿಯಿಂದ ಮುಂದೆಯೂ ನಡೆಯಲಿದೆ ಎಂದು ಹೇಳಿದರು.

ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಎಸ್.ರೆಡ್ಡಿ ಮಾತನಾಡಿ, ಕೋವಿಡ್‌ ಸೋಂಕಿನಿಂದ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಜೀವ ಉಳಿಸುವ ಲಸಿಕೆ ಪಡೆಯುವುದಕ್ಕೆ ಜನರು ಹಿಂದೇಟು ಹಾಕುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆದರೂ ಸರ್ಕಾರ ನೀಡಿದ ಗುರಿ ತಲುಪುವ ನಿಟ್ಟಿನಲ್ಲಿ ಇತರೆ ಇಲಾಖೆಯಗಳ ಸಮನ್ವಯದೊಂದಿಗೆ ಯಶಸ್ವಿಯಾಗಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯುವ ಮೋರ್ಚಾ ಅಧ್ಯಕ್ಷ ಉಮೇಶಗೌಡ ಯಾದವ ಹಾಗೂ ಬಿಜೆಪಿ ಕಾರ್ಯಕರ್ತರಾದ ಚಂದ್ರಕಾಂತ ವಡಗೇರಿ ಇತರರು ಮಾತನಾಡಿದರು.

ವೈದ್ಯರಾದ ಡಾ.ಚಂದ್ರಕಾಂತ ಮಂತ್ರಿ, ಡಾ.ಬಸವಂತಕುಮಾರ ಪಾಟೀಲ, ಡಾ.ಶಶಿಧರ, ಡಾ.ಷಣ್ಮುಖ ಕಾಪ್ಸೆ, ಡಾ.ಚಂದ್ರಕಲಾ, ಪ್ರಯೋಗಾ ಲಯ ತಜ್ಞ ಬಾಲಾಜಿ ಬಳಿಗಾರ, ಗವಿಸಿದ್ದಪ್ಪ, ಕೊಂಡಪ್ಪ ಕುರಿ, ಪಾಲಜ್ಜ, ಶಿಲ್ಪಾ ಹುಲ್ಮಮನಿ ಮತ್ತು ಸಿಬ್ಬಂದಿ. ಪುರಸಭೆ ಸದಸ್ಯರಾದ ರಾಜೇಶ ಪತ್ತಾರ, ಜೆ.ಜೆ.ಆಚಾರ, ಅಮಿನುದ್ದಿನ್ ಮುಲ್ಲಾ, ಬಸವರಾಜ ಬುಡಕುಂಟಿ, ಈರಣ್ಣ ಸೊಬರದ, ಅಮರೇಶ್ ನಾಯಕವಾಡಿ, ಮಾರುತಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT