ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಕೆಲವರ ಸ್ವತ್ತಾದ ಒಳಾಂಗಣ ಕ್ರೀಡಾಂಗಣ

ಕುಷ್ಟಗಿಯ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣ
Published : 11 ಸೆಪ್ಟೆಂಬರ್ 2024, 5:06 IST
Last Updated : 11 ಸೆಪ್ಟೆಂಬರ್ 2024, 5:06 IST
ಫಾಲೋ ಮಾಡಿ
Comments

ಕುಷ್ಟಗಿ: ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ತರಬೇತಿ ನೀಡಲು ಸರ್ಕಾರ ಕೋಟ್ಯಂತರ ಹಣದಲ್ಲಿ ನಿರ್ಮಿಸಿರುವ ಇಲ್ಲಿಯ ಒಳಾಂಗಣ ಕ್ರೀಡಾಂಗಣ ಬೆರಳೆಣಿಕೆ ಜನರ ಸೊತ್ತಾಗಿದ್ದು, ಇತರೆ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ತಾಲ್ಲೂಕು ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದೆ. ಆದರೆ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿ ಇಲ್ಲದ ಕಾರಣ ಕ್ರೀಡಾಂಗಣ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಯನ್ನು ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಮತ್ತು ಅನುಭವಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಹಿಸುತ್ತ ಬರಲಾಗಿದೆ. ಆದರೆ ಒಳಾಂಗಣ ಕ್ರೀಡಾಂಗಣದ ಎಲ್ಲ ವಿಚಾರ ಪರೋಕ್ಷವಾಗಿ ಇಲಾಖೆಗೆ ಸಂಬಂಧಿಸಿರದ ಅನ್ಯ ವ್ಯಕ್ತಿಗಳ ಹಿಡಿತದಲ್ಲಿದ್ದು ಅದಕ್ಕೆ ಶಿಕ್ಷಣ ಇಲಾಖೆಯ ಕೆಲ ಸಿಬ್ಬಂದಿ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ.

ಷಟಲ್‌ ಬ್ಯಾಡ್ಮಿಂಟನ್, ಕರಾಟೆ, ಜಂಪ್‌ರೋಪ್‌, ನೆಟ್‌ಬಾಲ್‌ ಹೀಗೆ ಒಳಾಂಗಣದಲ್ಲಿ ನಡೆಯಬಹುದಾದ ವಿವಿಧ ಕ್ರೀಡೆಗಳ ಅಭ್ಯಾಸ ಮಾಡುವುದು, ತರಬೇತಿಗೆ ಅವಕಾಶವಿದೆ. ಅಲ್ಲದೆ ಈ ಹಿಂದೆ ಒಳಾಂಗಣವನ್ನು ಸೈನಿಕ ಆಕಾಂಕ್ಷಿಗಳಿಗೆ ತರಬೇತಿ ನೀಡಲೂ ಉದ್ದೇಶಿಸಲಾಗಿತ್ತು. ಎಲ್ಲರಿಗೂ ಅವಕಾಶ ಇರಬೇಕು. ಆದರೆ ಇಲ್ಲಿ ಷಟಲ್‌ ಬ್ಯಾಡ್ಮಿಂಟನ್‌ಗೆ ಮಾತ್ರ ಸೀಮಿತವಾಗಿದೆ. ಭವಿಷ್ಯದಲ್ಲಿ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುವ ವಯೋಮಿತಿ ಮೀರಿರುವ ಕೆಲ ರಾಜಕೀಯ ಬೆಂಬಲಿತ ವ್ಯಕ್ತಿಗಳು ಒಳಾಂಗಣವನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಬೆದರಿಕೆ ಒಡ್ಡುತ್ತಾರೆ ಎಂದು ಹೆಸರು ಹೇಳಲು ಬಯಸದ ವ್ಯಕ್ತಿಯೊಬ್ಬರು ತಿಳಿಸಿದರು.  

ಸಮನ್ವಯದ ಕೊರತೆ: ತಾಲ್ಲೂಕು ಹಂತದಲ್ಲಿ ಯುವಸಬಲೀಕರಣ ಇಲಾಖೆ ಕಾರ್ಯಕ್ರಮ ನಡೆಸಲು ಇಲ್ಲಿಯ ದೈಹಿಕ ಶಿಕ್ಷಣ ಪರಿವೀಕ್ಷಕಿ ಸರಸ್ವತಿದೇವಿ ಎಂಬುವವರನ್ನು ನಿಯೋಜಿಸಲಾಗಿತ್ತು. ನಂತರ ಹಿರಿಯ ದೈಹಿಕ ಶಿಕ್ಷಕರ ಹೆಸರುಗಳನ್ನು ಹೆಸರುಗಳನ್ನು ಶಿಫಾರಸು ಮಾಡುವಂತೆ ಆ ಇಲಾಖೆಯ ಸಹಾಯಕ ನಿರ್ದೇಶಕರು ಜ.24ರಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದಿದ್ದರು.

ಆದರೆ ಈವರೆಗೂ ಈ ಬಗ್ಗೆ ಇಲಾಖೆ ಶಿಫಾರಸು ಮಾಡಿದ ಹೆಸರುಗಳನ್ನು ಪರಿಗಣಿಸಿಲ್ಲ. ಅಲ್ಲದೆ ಶಿಕ್ಷಣ ಇಲಾಖೆ ಮತ್ತು ಯುವ ಸಬಲೀಕರಣ ಇಲಾಖೆ ಮಧ್ಯೆ ಸಮನ್ವಯದ ಕೊರತೆ ಇದೆ ಎಂಬುದು ಗೊತ್ತಾಗಿದೆ.

ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ 'ಒಳಾಂಗಣಕ್ಕೆ ಷಟಲ್‌ ಬ್ಯಾಡ್ಮಿಂಟನ್‌ಗೆ ಮೊದಲ ಆದ್ಯತೆ ಇದ್ದು ಕೆಲವರು ಶುಲ್ಕ ಪಾವತಿಸಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕರಾಟೆ ಇತರೆ ನಿರ್ದಿಷ್ಟ ಕ್ರೀಡೆಗಳಿಗೆ ಅಲ್ಲಿ ಅವಕಾಶ ಇಲ್ಲ. ರಾ‍ಷ್ಟ್ರೀಯ, ಅಂತರರಾಷ್ಟ್ರೀಯ ಸ್ಪರ್ಧಿಸಬಹುದಾದ ಜಂಪ್‌ರೋಪ್ ಕ್ರೀಡಾಪಟುಗಳು ಬೇಡಿಕೆ ಸಲ್ಲಿಸದರೆ ಖಂಡಿತ ಅವಕಾಶ ಕಲ್ಪಿಸುತ್ತೇವೆ’ ಎಂದು ಹೇಳಿದರು.

ಜಪಾನ್‌ದಲ್ಲಿ ನಡೆದ ಜಂಪ್‌ರೋಪ್‌ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದಿದ್ದೇವೆ ರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸಬೇಕೆಂದರೆ ಅವಕಾಶ ನಿರಾಕರಿಸಲಾಗುತ್ತಿದೆ.
ಮಂಜುನಾಥ್ ಚೌಡ್ಕಿ ಜಂಪ್‌ರೋಪ್‌ ಕ್ರೀಡಾಪಟು
ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಶಿಫಾರಸು ಮಾಡುವಂತೆ ಬರೆದ ಪತ್ರಕ್ಕೆ ಎಂಟು ತಿಂಗಳಾದರೂ ಶಾಲಾ ಶಿಕ್ಷಣ ಇಲಾಖೆ ಸ್ಪಂದಿಸಿಲ್ಲ ಯಾವ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದಾರೆಂಬುದು ತಿಳಿದಿಲ್ಲ.
ವಿಠ್ಠಲ ಜಾಬಗೌಡರ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಇಲಾಖೆ
ಯುವ ಸಬಲೀಕರಣ ಕ್ರೀಡಾ ಅಧಿಕಾರಿ ಹುದ್ದೆ ಬೇಡ ಎಂದು ಪತ್ರ ಬರೆದಿದ್ದೇನೆ ಅಲ್ಲದೆ ರಾಷ್ಟ್ರೀಯ ಹಬ್ಬದ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ನಮಗೂ ಅಡೆತಡೆಯೂ ಆಗುತ್ತಿದ್ದು ಕ್ರೀಡಾ ಇಲಾಖೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.
ಸರಸ್ವತಿದೇವಿ ದೈಹಿಕ ಶಿಕ್ಷಣ ಪರಿವೀಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT